ADVERTISEMENT

ಸರ್ಕಾರಿ ಪದವಿ ಕಾಲೇಜುಗಳ ಅಭಿವೃದ್ಧಿಗೆ ₹1,540 ಕೋಟಿ ವಿಶ್ವಬ್ಯಾಂಕ್‌ ಸಾಲ

ಕಲ್ಯಾಣ ಕರ್ನಾಟಕದ ವಿ.ವಿಗಳಲ್ಲಿ ಖಾಲಿ ಇರುವ ಬ್ಯಾಕ್‌ಲಾಗ್‌ 3,321 ಹುದ್ದೆಗಳ ಭರ್ತಿ

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2023, 19:53 IST
Last Updated 21 ಅಕ್ಟೋಬರ್ 2023, 19:53 IST
<div class="paragraphs"><p>ಡಾ.ಎಂ.ಸಿ.ಸುಧಾಕರ್</p></div>

ಡಾ.ಎಂ.ಸಿ.ಸುಧಾಕರ್

   

ಬೆಂಗಳೂರು: ರಾಜ್ಯದ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಅಭಿವೃದ್ಧಿಗೆ ವಿಶ್ವಬ್ಯಾಂಕ್‌ನಿಂದ 1,540 ಕೋಟಿ ಮೊತ್ತವನ್ನು ಅಲ್ಪ ಬಡ್ಡಿದರದ ಸಾಲದ ರೂಪದಲ್ಲಿ ಪಡೆಯಲಾಗುತ್ತಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ಹೇಳಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಜತೆ ಇಲಾಖೆಯ ಅಭಿವೃದ್ಧಿ ವಿಷಯಗಳ ಕುರಿತು ಶನಿವಾರ ಚರ್ಚಿಸಿದ ನಂತರ ಅವರು ಸುದ್ದಿಗಾರರ ಜತೆ ಮಾತನಾಡಿದರು.

ADVERTISEMENT

ವಿಶ್ವಬ್ಯಾಂಕ್‌ನಿಂದ ದೀರ್ಘಾವಧಿ ತೀರುವಳಿಯ ಸಾಲ ಪಡೆಯಲು ಮುಖ್ಯಮಂತ್ರಿ ಸಮ್ಮತಿಸಿದ್ದಾರೆ. ಮೊದಲ ಹಂತದಲ್ಲಿ 72 ಕಾಲೇಜುಗಳನ್ನು ಉನ್ನತಮಟ್ಟದಲ್ಲಿ ಸರ್ವತೋಮುಖವಾಗಿ ಅಭಿವೃದ್ಧಿಗೊಳಿಸಲಾಗುವುದು. ಪ್ರತಿ ಜಿಲ್ಲೆಯ ಕನಿಷ್ಠ ಒಂದು ಕಾಲೇಜು ಆಯ್ಕೆ ಮಾಡಲಾಗುವುದು. ಹಾಗೆಯೇ, 31 ಪಾಲಿಟೆಕ್ನಿಕ್‌, 10 ಎಂಜಿನಿಯರಿಂಗ್‌ ಕಾಲೇಜುಗಳ ಅಭಿವೃದ್ಧಿಗೆ ₹620 ಕೋಟಿ ವೆಚ್ಚ ಮಾಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಬ್ಯಾಕ್‌ಲಾಗ್‌ ಹುದ್ದೆ ಭರ್ತಿಗೆ ಅನುಮತಿ

ಕಲ್ಯಾಣ ಕರ್ನಾಟಕದ ವಿವಿಧ ವಿಶ್ವವಿದ್ಯಾಲಯಗಳಲ್ಲಿ ಖಾಲಿ ಇರುವ ಬ್ಯಾಕ್‌ಲಾಗ್‌ 3,321 ಹುದ್ದೆಗಳ ಭರ್ತಿಗೆ ಅನುಮತಿ ದೊರೆತಿದೆ. ಉನ್ನತ ಶಿಕ್ಷಣ ಇಲಾಖೆಯ ಹಲವು ವಿಚಾರಗಳ ಕುರಿತು ಚರ್ಚಿಸಲಾಗಿದೆ. ಉನ್ನತ ಶಿಕ್ಷಣ ಇಲಾಖೆಯ 16,455 ಬೋಧಕ ಹುದ್ದೆಗಳಲ್ಲಿ 699 ಖಾಲಿ ಇವೆ. ಬೋಧಕೇತರ 19,682 ಹುದ್ದೆಗಳಲ್ಲಿ 13,558 ಖಾಲಿ ಇವೆ. ಲ್ಯಾಬ್‌ ತಂತ್ರಜ್ಞರು ಮತ್ತಿತರ ಹುದ್ದೆಗಳ ಭರ್ತಿಗೆ ಈಗಾಗಲೇ ಹಣಕಾಸು ಇಲಾಖೆಗೆ ಪ್ರಸ್ತಾವ ಸಲ್ಲಿಸಲಾಗಿದೆ. ಹಂತಹಂತವಾಗಿ ಭರ್ತಿ ಮಾಡಲು ನಿರ್ಧರಿಸಲಾಗಿದೆ ಎಂದರು.

ಚಿತ್ರಕಲಾ ಪರಿಷತ್ತಿನ ಕಾಲೇಜಿಗೆ ಲಂಚ ಕೇಳಿದ ವಿಚಾರ ಗಮನಕ್ಕೆ ಬಂದಿದೆ. ಸಮಿತಿ ಈಗಾಗಲೇ ವರದಿ ನೀಡಿದೆ. ಮಧ್ಯವರ್ತಿಗಳು ಬೇಡಿಕೆ ಸಲ್ಲಿಸಿರಬಹುದು. ಈ ಕುರಿತು ಪರಿಶೀಲಿಸಲಾಗುತ್ತಿದೆ ಎಂದು ಹೇಳಿದರು.

ಉನ್ನತ ಶಿಕ್ಷಣ ಇಲಾಖೆಯಡಿ ನಿರ್ಮಿಸಿರುವ 13,169 ವಿದ್ಯಾರ್ಥಿಗಳ ಸಾಮರ್ಥ್ಯದ 224 ವಸತಿ ನಿಲಯಗಳ ಹಸ್ತಾಂತರ ಮಾಡಿಕೊಳ್ಳಲು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಿದ್ಧವಿದ್ದು, ಇದನ್ನು ಸಚಿವ ಸಂಪುಟದ ಮುಂದೆ ತರುವಂತೆ ಮುಖ್ಯಮಂತ್ರಿ ಸೂಚಿಸಿದ್ದಾರೆ ಎಂದೂ ಅವರು ತಿಳಿಸಿದರು.

ಮೈಸೂರಿನ ಮಹಾರಾಣಿ ಕಲಾ ಕಾಲೇಜು ಹಾಸ್ಟೆಲ್‌ ಆವರಣದಲ್ಲಿ ₹99 ಕೋಟಿ ಅಂದಾಜು ವೆಚ್ಚದಲ್ಲಿ ಕಲಾ ಮತ್ತು ವಿಜ್ಞಾನ ಕಾಲೇಜಿನ ತಲಾ ಸಾವಿರ ವಿದ್ಯಾರ್ಥಿನಿಯರಿಗೆ ಅವಕಾಶ ಕಲ್ಪಿಸುವ ಹಾಸ್ಟೆಲ್‌ ನಿರ್ಮಾಣಕ್ಕೆ ಕೂಡಲೇ ಕ್ರಮ ಕೈಗೊಳ್ಳುವಂತೆ ಅವರು ನಿರ್ದೇಶನ ನೀಡಿದ್ದಾರೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.