ADVERTISEMENT

ಕೈಗಾರಿಕೆಗೆ ₹ 2 ಕೋಟಿ ಪ್ರೋತ್ಸಾಹಧನ ಮೀಸಲು

​ಪ್ರಜಾವಾಣಿ ವಾರ್ತೆ
Published 23 ಡಿಸೆಂಬರ್ 2022, 21:45 IST
Last Updated 23 ಡಿಸೆಂಬರ್ 2022, 21:45 IST
   

ಬೆಂಗಳೂರು: ‘ಪರಿಸರ ನಿಯಮ ಪಾಲಿಸಿದ ಕೈಗಾರಿಕೆಗಳಿಗೆ ಪ್ರೋತ್ಸಾಹಧನ ನೀಡಲು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ನಿರ್ಧರಿಸಿದೆ’ ಎಂದು ಮಂಡಳಿ (ಕೆಎಸ್‌ಪಿಸಿಬಿ) ಅಧ್ಯಕ್ಷ ಶಾಂತ್ ಎ. ತಿಮ್ಮಯ್ಯ ಹೇಳಿದರು.

ಚೇಂಬರ್‌ ಆಫ್ ಇಂಡಸ್ಟ್ರಿ ಅಂಡ್ ಕಾಮರ್ಸ್ (ಬಿಸಿಐಸಿ) ಆಯೋಜಿಸಿದ್ದ ಸಂವಾದದಲ್ಲಿ ಅವರು ಮಾತನಾಡಿದರು.

‘ಗ್ರೀನ್‌ಕೊ ರೇಟಿಂಗ್ ಪ್ರಮಾಣಪತ್ರ ಪಡೆದುಕೊಳ್ಳುವ ಕೈಗಾರಿಕೆಗಳಿಗೆ ಒಂದು ಬಾರಿಯ ನಗದು ಬಹುಮಾನವಾಗಿ ₹ 50 ಸಾವಿರದಿಂದ ₹ 10 ಲಕ್ಷದ ತನಕ ಪ್ರೋತ್ಸಾಹಧನ ನೀಡಲಾಗುವುದು. ಈ ಬಹುಮಾನ ಕೈಗಾರಿಕೆ ಪಡೆದುಕೊಂಡ ರೇಟಿಂಗ್ ಮತ್ತು ಅದರ ಗಾತ್ರ ಆಧರಿಸಿರುತ್ತದೆ. ಇದಕ್ಕಾಗಿ ಮುಂದಿನ ಹಣಕಾಸು ವರ್ಷದಲ್ಲಿ ₹ 2 ಕೋಟಿ ಮೀಸಲಿಡಲಾಗಿದೆ’ ಎಂದು ಮಾಹಿತಿ ನೀಡಿದರು.

ADVERTISEMENT

‘ನೀತಿ ರೂಪಿಸುವವರು ಮತ್ತು ಕೈಗಾರಿಕೆ ನಡುವೆ ನಂಬಿಕೆ ಕೊರತೆಯಿದೆ. ಪರಸ್ಪರ ಅವಲಂಬಿತ ಆಗಿರುವುದರಿಂದ ಉತ್ಪಾದನೆ ಮತ್ತು ಪರಿಸರ ಮಾಲಿನ್ಯಗಳು ಒಂದೇನಾಣ್ಯದ ಎರಡು ಮುಖ ಎಂದು ಅರ್ಥಮಾಡಿಕೊಳ್ಳ’ ಎಂದರು.

‘ನಾನು ಅಧ್ಯಕ್ಷನಾದ ಮೇಲೆ 14 ಜಿಲ್ಲೆಗಳಿಗೆ ಭೇಟಿ ನೀಡಿದ್ದೇನೆ. ಕೈಗಾರಿಕಾ ಕ್ಷೇತ್ರಗಳೊಂದಿಗೆ ನಿರ್ದಿಷ್ಟವಾಗಿ ಸಭೆ ಕೈಗೊಂಡು ಅವರಿಗೆ ಪರಿಸರ ನಿಯಂತ್ರಣ ಕುರಿತಂತೆ ಅವರ ಪಾತ್ರ ಮತ್ತು ಜವಾಬ್ದಾರಿ ಕುರಿತು ಶಿಕ್ಷಣ ನೀಡುವ ಪ್ರಯತ್ನ ನಡೆಸಲಾಗಿದೆ’ ಎಂದರು.

ಬಿಸಿಐಸಿಯ ಅಧ್ಯಕ್ಷ ಡಾ.ಎಲ್. ರವೀಂದ್ರನ್ ಮಾತನಾಡಿ, ‘ಪ್ರತಿದಿನ ರಾಜ್ಯದಲ್ಲಿ ಅಪಾರ ಪ್ರಮಾಣದ ಕೈಗಾರಿಕಾ ತ್ಯಾಜ್ಯ, ಮುನಿಸಿಪಲ್ ಘನತ್ಯಾಜ್ಯ, ಜೈವಿಕ- ವೈದ್ಯಕೀಯ ತ್ಯಾಜ್ಯ, ಪ್ಲಾಸ್ಟಿಕ್ ತ್ಯಾಜ್ಯ ಮತ್ತು ಇ-ತ್ಯಾಜ್ಯಗಳು ಸೃಷ್ಟಿಯಾಗುತ್ತಿವೆ. ಈ ಸಮಸ್ಯೆಗಳನ್ನು ನಿಭಾಯಿಸುವಲ್ಲಿ ಕೆಎಸ್‌ಪಿಸಿಬಿಯ ಪ್ರಯತ್ನಗಳು ಶ್ಲಾಘನೀಯ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.