ಬೆಂಗಳೂರು: ವಿವಿಧ ನೀರಾವರಿ ನಿಗಮಗಳಲ್ಲಿ ₹22,200 ಕೋಟಿ ಮೊತ್ತದ ಟೆಂಡರ್ ಅಕ್ರಮ ನಡೆದಿದ್ದು, ಟೆಂಡರ್‌ಗಳನ್ನು ಕೂಡಲೇ ರದ್ದುಪಡಿಸಬೇಕು ಎಂದು ಹೊಸದುರ್ಗ ಕ್ಷೇತ್ರದ ಬಿಜೆಪಿ ಶಾಸಕ ಹಾಗೂ ಭೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಗೂಳಿಹಟ್ಟಿ ಶೇಖರ್ ಆಗ್ರಹಿಸಿದ್ದಾರೆ.
ಅಕ್ರಮದ ಕುರಿತು ಜಲಸಂಪನ್ಮೂಲ ಇಲಾಖೆ ಹೆಚ್ಚುವರಿ ಪ್ರಧಾನ ಕಾರ್ಯದರ್ಶಿಗೆ ಫೆ.3ರಂದು ದೂರು ನೀಡಿರುವ ಅವರು, ಕಾಮ ಗಾರಿಗಳ ಕಾರ್ಯಾದೇಶ ರದ್ದುಪಡಿಸಿ ಮರು ಟೆಂಡರ್ ಕರೆಯಬೇಕು ಎಂದು ಒತ್ತಾಯಿಸಿದ್ದಾರೆ. ಗೂಳಿಹಟ್ಟಿ ಸಲ್ಲಿಸಿರುವ ಪತ್ರ ‘ಪ್ರಜಾವಾಣಿ’ಗೆ ಲಭ್ಯವಾಗಿದೆ.
ಕೃಷ್ಣಾಭಾಗ್ಯ ಜಲ ನಿಗಮ, ಕಾವೇರಿ ನೀರಾವರಿ ನಿಗಮ ಹಾಗೂ ವಿಶ್ವೇಶ್ವರಯ್ಯ ಜಲ ನಿಗಮಗಳಲ್ಲಿ ನಿಗದಿತ ಕಾಮಗಾರಿಗಳ ಟೆಂಡರ್ ನೀಡುವ ಮುನ್ನವೇ ಅಕ್ರಮ ಕೂಟ ಮಾಡಿಕೊಳ್ಳಲಾಗಿದೆ. ಎಲ್ಲ ನಿಗಮಗಳ ಆಡಳಿತ ಮಂಡಳಿಗಳ ಸಭೆಯನ್ನು ಒಂದೇ ನಡೆಸಿ ₹18 ಸಾವಿರ ಕೋಟಿ ಮೊತ್ತದ ಯೋಜನೆಗಳಿಗೆ ಅನುಮೋದನೆ ನೀಡಲಾಗಿದೆ. ನಿಯಮ ಪಾಲಿಸದೇ ತರಾತುರಿಯಲ್ಲಿ ಟೆಂಡರ್ ಪ್ರಕ್ರಿಯೆ ಮುಗಿಸಿ, ಕಾರ್ಯಾದೇಶ ನೀಡಲಾಗಿದೆ. ಅಕ್ರಮ ಕೂಡಾವಳಿಯೇ ತರಾತುರಿಗೆ ಕಾರಣಕ್ಕೆ ಎಂದು ದೂರಿದ್ದಾರೆ.
ವಿಶ್ವೇಶ್ವರಯ್ಯ ಜಲ ನಿಗಮದಡಿ ₹4,200 ಕೋಟಿ ಮೊತ್ತದ ಕಾಮಗಾರಿಗಳ ಟೆಂಡರ್ ಪೂರ್ಣಗೊಳಿಸಲಾಗಿದೆ. ಪಾರದರ್ಶಕತೆಯನ್ನು ಕಾಯ್ದುಕೊಳ್ಳದೇ, ಸಾವಿರಾರು ಕೋಟಿ ಮೊತ್ತದ ಟೆಂಡರ್ ಪ್ರಕ್ರಿಯೆಯನ್ನು ಕೇವಲ 7 ದಿನಗಳಲ್ಲಿ ಅಂತಿಮಗೊಳಿಸಲಾಗಿದೆ. ಅಕ್ರಮಕ್ಕೆ ದಾರಿ ಮಾಡಿಕೊಡುವ ಉದ್ದೇಶದಿಂದ ಈ ಆತುರ ತೋರಲಾಗಿದೆ ಎಂದರು.
ಭದ್ರಾ ಮೇಲ್ದಂಡೆ ಯೋಜನೆ ಯಡಿ ಹನಿ ನೀರಾವರಿ ಪದ್ಧತಿ ಅಳವಡಿಸುವ ಹಾಗೂ ಹೊಸದುರ್ಗ, ಕಡೂರು, ಜಗಳೂರು ಮತ್ತಿತರ ತಾಲ್ಲೂಕುಗಳಿಗೆ ಪೈಪ್‌ಗಳ ಮೂಲಕ ಕೆರೆಗಳನ್ನು ತುಂಬಿಸುವ ಕಾಮಗಾರಿ ನಡೆಯುತ್ತಿದೆ. ಕಳಪೆ ಪೈಪ್ ಪೂರೈಸಲಾಗಿದ್ದು, ಕಾಮಗಾರಿ ಕೂಡ ಕಳಪೆಯಿಂದ ಕೂಡಿದೆ ಎಂದು ದೂರಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.