ಬೆಂಗಳೂರು: ವೀರಶೈವ-ಲಿಂಗಾಯತ ಸಮುದಾಯದ ಫಲಾನುಭವಿಗಳಿಗೆ ಸೌಲಭ್ಯ ಕಲ್ಪಿಸಲು ನಿಗಮಕ್ಕೆ ಹೆಚ್ಚುವರಿಯಾಗಿ ₹500 ಕೋಟಿ ಅನುದಾನ ಬಿಡುಗಡೆ ಮಾಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಲಾಗಿದೆ ಎಂದು ಕರ್ನಾಟಕ ವೀರಶೈವ-ಲಿಂಗಾಯತ ಅಭಿವೃದ್ಧಿ ನಿಗಮದ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ ಹೇಳಿದರು.
‘ಸಿದ್ಧರಾಮಯ್ಯನವರು ನನ್ನ ಮೇಲೆ ಅಪಾರ ನಂಬಿಕೆ ಇರಿಸಿ, ನಿಗಮದ ಜವಾಬ್ದಾರಿ ವಹಿಸಿದ್ದಾರೆ. ಅವರ ಸಮ್ಮುಖದಲ್ಲೇ ನಿಗಮದ ಅಧಿಕಾರ ಸ್ವೀಕರಿಸಿರುವೆ. ಆರ್ಥಿಕ, ಸಾಮಾಜಿಕ, ಶೈಕ್ಷಣಿಕವಾಗಿ ಹಿಂದುಳಿದ ವೀರಶೈವ-ಲಿಂಗಾಯತ ಸಮುದಾಯಕ್ಕೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಕರ್ತವ್ಯ ನಿಭಾಯಿಸುವೆ’ ಎಂದು ಸುದ್ದಿಗೋಷ್ಠಿಯಲ್ಲಿ ಗುರುವಾರ ತಿಳಿಸಿದರು.
ನಿಗಮದ ಮೂಲಕ ಬಸವ ಬೆಳಗು, ವಿದೇಶ ವಿದ್ಯಾ ವಿಕಾಸ, ಕಾಯಕ ಕಿರಣ, ಜೀವಜಲ, ಸ್ವಾವಲಂಬಿ ಸಾರಥಿ, ವಿಭೂತಿ ನಿರ್ಮಾಣ ಘಟಕ ಸ್ಥಾಪನೆ, ಭೋಜನಾಲಯ ಕೇಂದ್ರ ಮತ್ತು ಸ್ವಯಂ ಉದ್ಯೋಗ ಯೋಜನೆಗಳು ಜಾರಿಯಲ್ಲಿವೆ. ನಿಗಮದ 10 ಯೋಜನೆಗಳಿಗೆ 59,027 ಅರ್ಜಿಗಳು ಸಲ್ಲಿಕೆಯಾಗಿವೆ. ಅವರಿಗೆಲ್ಲ ಸೌಲಭ್ಯ ಕಲ್ಪಿಸಲು ಅನುದಾನದ ಅಗತ್ಯವಿದೆ ಎಂದರು.
‘ಬಿ.ಎಸ್. ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ ನಿಗಮದ ಆರಂಭದ ವೇಳೆ ₹500 ಕೋಟಿ ಅನುದಾನ ಘೋಷಣೆ ಮಾಡಿ, ₹100 ಕೋಟಿ ಅನುದಾನ ಬಿಡುಗಡೆ ಮಾಡಿದ್ದರು. ಕಳೆದ ಸರ್ಕಾರ ಸಹ ಯಾವುದೇ ನಿಗಮಕ್ಕೂ ಆದ್ಯತೆ ನೀಡಿಲ್ಲ. ನಮ್ಮ ನಿಗಮಕ್ಕೆ ಹೆಚ್ಚಿನ ಅರ್ಜಿಗಳು ಸಲ್ಲಿಕೆಯಾಗಿದ್ದು, ಹೆಚ್ಚಿನ ಅನುದಾನ ತರಲಾಗುತ್ತದೆ’ ಎಂದು ವಿಜಯಾನಂದ ಕಾಶಪ್ಪನವರ ವಿಶ್ವಾಸ ವ್ಯಕ್ತಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.