ಬೆಂಗಳೂರು: ‘ಕೆಆರ್‌ಐಡಿಎಲ್ ಸಂಸ್ಥೆಯಲ್ಲಿದುರುಪಯೋಗಪಡಿಸಿಕೊಂಡಿದ್ದ ₹55 ಕೋಟಿ ಮೊತ್ತವನ್ನು ವಾಪಸ್ ಪಡೆದುಕೊಳ್ಳಲಾಗಿದೆ’ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್. ಈಶ್ವರಪ್ಪ ಶುಕ್ರವಾರ ತಿಳಿಸಿದರು.
ವಿಧಾನ ಪರಿಷತ್‌ನಲ್ಲಿ ಕೆಆರ್‌ಐಡಿಎಲ್‌ನಲ್ಲಿ 3 ವರ್ಷಗಳಲ್ಲಿ ನಡೆದಿದೆ ಎನ್ನಲಾದ ಹಗರಣಗಳ ಬಗ್ಗೆ ಕಾಂಗ್ರೆಸ್‌ನ ಯು.ಬಿ. ವೆಂಕಟೇಶ್ ಅವರ ಪ್ರಶ್ನೆಗೆ ಈ ಬಗ್ಗೆ ವಿವರ ನೀಡಿದ ಅವರು, ’ಅಕ್ರಮಗಳಲ್ಲಿ ಭಾಗಿಯಾದವರ ವಿರುದ್ಧ ಕಠಿಣ ಕ್ರಮಕೈಗೊಳ್ಳಲಾಗುತ್ತಿದೆ’ ಎಂದರು.
‘ಇಂಡಿಯನ್ ಓವರ್‌ಸೀಸ್ ಬ್ಯಾಂಕ್‌ನ ಮಂಗಳೂರಿನ ಕುಳಾಯಿ ಶಾಖೆಯಲ್ಲಿ ಈ ಮೊತ್ತವನ್ನು ನಿಶ್ಚಿತ ಠೇವಣಿಯಾಗಿ ಇರಿಸಲಾಗಿತ್ತು. ಬ್ಯಾಂಕ್ ಸಿಬ್ಬಂದಿ ಇತರರೊಂದಿಗೆ ಶಾಮೀಲಾಗಿ ದುರುಪಯೋಗಪಡಿಸಿ ಕೊಂಡಿದ್ದರು. ಮೊತ್ತವನ್ನು ಸರ್ಕಾರ, ಸಂಸ್ಥೆಯ ಪರಿಶ್ರಮದಿಂದ 2022ರ ಫೆ.28ರಂದು ಹಿಂಪಡೆಯಲು ಸಾಧ್ಯವಾಗಿದೆ’ ಎಂದು ತಿಳಿಸಿದರು.
‘ಇದೇ ರೀತಿ ಆನೇಕಲ್ ವಿಧಾನಸಭಾ ಕ್ಷೇತ್ರದಲ್ಲಿ 2018–19ರಿಂದ 2020–21ನೇ ಸಾಲಿನವರೆಗೆ ವಿವಿಧ ಕಾಮಗಾರಿಗಳಲ್ಲಿ ಹಣ ದುರ್ಬಳಕೆ, ಕಳಪೆ ಕಾಮಗಾರಿಗಳ ಬಗ್ಗೆ ತನಿಖೆ ನಡೆಸಿ ವರದಿ ಸಲ್ಲಿಸಲು 2021ರ ಡಿ.15ರಂದು ಸಮಿತಿ ರಚಿಸಲಾಗಿದೆ. ಈ ಸಮಿತಿಯ ವರದಿಯನ್ನು ನಿರೀಕ್ಷಿಸಲಾಗುತ್ತಿದೆ’ ಎಂದರು.
‘ಬಿಬಿಎಂಪಿ ವ್ಯಾಪ್ತಿಯ ರಾಜರಾಜೇಶ್ವರಿ ನಗರ ಕ್ಷೇತ್ರದಲ್ಲಿನ 114 ಕಾಮಗಾರಿಗಳನ್ನು ಕೈಗೊಳ್ಳದೆಯೇ ₹118.26 ಕೋಟಿ ಅಕ್ರಮ ನಡೆಸಲಾಗಿದೆ ಎನ್ನುವ ಕುರಿತು ಲೋಕಾಯುಕ್ತರು ಫೆ.28ರಂದು ವರದಿ ಸಲ್ಲಿಸಿದ್ದಾರೆ. ಕೆಆರ್‌ಐಡಿಎಲ್ ಸಂಸ್ಥೆ ಜೊತೆಗೆ ಬಿಬಿಎಂಪಿ ಅಧಿಕಾರಿಗಳು ಅಕ್ರಮ ನಡೆಸಿರುವ ಉಲ್ಲೇಖವಿದೆ. ಪೂರ್ಣ ವಿವರ ಪಡೆದು ಸಂಬಂಧಪಟ್ಟ ಅಧಿಕಾರಿ, ಸಿಬ್ಬಂದಿ ವಿರುದ್ಧ ಕ್ರಮವಹಿಸಲಾಗುವುದು’ ಎಂದು ತಿಳಿಸಿದರು.
‘ಸಂಸ್ಥೆಯನ್ನು ಮುಚ್ಚುವುದೇ ಲೇಸು’
‘ಕಮಿಷನ್ ದಂಧೆಯಲ್ಲಿ ತೊಡಗಿರುವ ಕೆಆರ್‌ಐಡಿಎಲ್ ಸಂಸ್ಥೆಯನ್ನು ಮುಚ್ಚುವುದೇ ಲೇಸು’ ಎಂದು ಯು.ಬಿ. ವೆಂಕಟೇಶ್ ಹೇಳಿದರು.
‘ಕಾಮಗಾರಿಗಳನ್ನು ಕೈಗೊಳ್ಳದೆಯೇ ಬಿಲ್ ಪಾವತಿಸಲಾಗುತ್ತಿದೆ. ಈ ಸಂಸ್ಥೆಯ ಅಗತ್ಯವಿದೆಯೇ ಎನ್ನುವುದು ಚರ್ಚೆಯಾಗಬೇಕು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.