ಶಿವಮೊಗ್ಗ: 'ದೇಶದಲ್ಲಿ ಚುನಾಯಿತ ಸರ್ಕಾರಗಳ ಅಸ್ಥಿರಗೊಳಿಸಲು, ಬಿಜೆಪಿಯನ್ನು ಅಧಿಕಾರಕ್ಕೆ ತರಲು ಸ್ವತಃ ಆರ್‌ಎಸ್‌ಎಸ್ ಹಣ ಸಂಗ್ರಹ ನಡೆಯುತ್ತಿದೆ. ಮಹಾರಾಷ್ಟ್ರದಲ್ಲಿ ಶಿವಸೇನಾ ನೇತೃತ್ವದ ಸರ್ಕಾರವನ್ನು ಅಸ್ಥಿರಗೊಳಿಸುವ ಕಾರ್ಯದ ಹಿಂದೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಇದ್ದಾರೆ' ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಆರೋಪಿಸಿದರು.
ನಗರದಲ್ಲಿ ಭಾನುವಾರ ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಮೇಲಿನಂತೆ ಪ್ರತಿಕ್ರಿಯಿಸಿದ ಅವರು, ಚುನಾವಣೆಯ ವೇಳೆ ಒಂದೊಂದು ಕ್ಷೇತ್ರಕ್ಕೆ ₹30 ಕೋಟಿ ತಂದು ಸುರಿದು ಜನರ ಹಣ ಪಡೆಯಬೇಕಲ್ಲ ಅದಕ್ಕೂ ಆರ್‌ಎಸ್‌ಎಸ್‌ನಿಂದ ಹಣ ಸಂಗ್ರಹ ಮಾಡಲಾಗುತ್ತಿದೆ. ಇದರಲ್ಲಿ ಸಂಶಯ ಏನೂ ಇಲ್ಲ. ಬೆಂಗಳೂರಿನಲ್ಲಿ ಸಾವಿರಾರು ಕೋಟಿ ಅಭಿವೃದ್ಧಿ ಕಾಮಗಾರಿ ಘೋಷಣೆ ಮಾಡುತ್ತಾರೆ. ಅದರಲ್ಲಿ ಒಂದೊಂದು ಕ್ಷೇತ್ರಕ್ಕೆ ₹130ರಿಂದ 200 ಕೋಟಿ ಖರ್ಚು ಮಾಡುತ್ತಾರೆ. ಅದರಲ್ಲಿ ಯಾರ್ಯಾರಿಗೆ ಎಷ್ಟೆಷ್ಟು ಪಾಲು ಹೋಗುತ್ತಿದೆ ಎಂದು ಸಂಬಂಧಿಸಿದ ಮಂತ್ರಿಗಳು ಧೈರ್ಯವಿದ್ದರೆ ಹೇಳಲಿ ಎಂದು ಸವಾಲು ಹಾಕಿದರು.
ಈ ಮೊದಲು ಕಾಂಗ್ರೆಸ್ ಮುಕ್ತ ದೇಶ ಮಾಡಿದವರು ಈಗ ಪ್ರಾದೇಶಿಕ ಪಕ್ಷಗಳನ್ನು ಮುಗಿಸಲು ಹೊರಟಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ ಕುಮಾರಸ್ವಾಮಿ, ಬಿಜೆಪಿ ಹೊರತಾಗಿ ದೇಶದಲ್ಲಿ ಯಾವುದೇ ಪಕ್ಷ ಇರುವುದು ಬೇಡ ಎಂದು ಕೇಂದ್ರ ಸರ್ಕಾರವೇ ಶಾಸನ ರೂಪಿಸಿಬಿಡಲಿ ಎಂದು ವ್ಯಂಗ್ಯವಾಡಿದರು.
ಬೇರೆ ಪಕ್ಷದ ಚುನಾಯಿತ ಸರ್ಕಾರಗಳಿಗೆ ಸ್ಪಷ್ಟ ಬಹುಮತ ಇದ್ದರೂ ಅವು ಉಳಿಯುವುದು ಅನುಮಾನ ಇದೆ. ವಿರೋಧ ಪಕ್ಷಗಳೇ ಇರಬಾರದು ಎಂಬುದು ಬಿಜೆಪಿಯವರ ಸಿದ್ದಂತ. ದೇಶದ ಜನ ಇದಕ್ಕೆ ಅಂತಿಮವಾಗಿ ಹೇಗೆ ಸ್ಪಂದಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ ಎಂದರು.
ಕರ್ನಾಟಕದಲ್ಲಿ ಜೆಡಿಎಸ್ ನೇತೃತ್ವದ ಮೈತ್ರಿ ಸರ್ಕಾರವನ್ನು ಕಾಂಗ್ರೆಸ್ ನಾಯಕರ ಸಹಕಾರದಿಂದಲೇ ಕೆಡವಲಾಯಿತು. ಆಗಲೂ ಅಮಿತ್ ಶಾ ನೇತೃತ್ವ ವಹಿಸಿದ್ದರು. ಆಗ ಶಾಸಕರು ಕರ್ನಾಟಕದಿಂದ ಮುಂಬೈಗೆ ಹೋಗಿದ್ದರು. ಈಗ ಮುಂಬೈನಿಂದ ಸೂರತ್ ಗೆ ಅಲ್ಲಿಂದ ಗೌಹಾಟಿಗೆ ಹೋಗಿದ್ದಾರೆ. ನಮ್ಮ ಸರ್ಕಾರ ತೆಗೆಯಲು ಆಗ ಒಂದೂವರೆ ವರ್ಷದಿಂದ ಪ್ರಯತ್ನ ನಡೆಸಿದ್ದರು. ಅದರಲ್ಲಿ ಯಶಸ್ವಿಯೂ ಆಗಿದ್ದರು ಎಂದರು.
ಉಪದೇಶ ಮಾಡುವ ಬಿಜೆಪಿ ನಾಯಕರಾಗಲಿ, ಅದರ ಅಂಗ ಸಂಘಟನೆಗಳ ನಾಯಕರಾಗಲಿ ಚುನಾಯಿತ ಸರ್ಕಾರ ಅಸ್ಥಿರಗೊಳಿಸುವ ಬಗ್ಗೆ ಯಾವುದೇ ಆಕ್ಷೇಪ ವ್ಯಕ್ತಪಡಿಸುತ್ತಿಲ್ಲ. ಅವರೇ ಸರ್ಕಾರ ಹಿಡಿಯಬೇಕು ಎಂದು ತೀರ್ಮಾನಿಸಿದಂತಿದೆ. ಮುಂದೆ ರಾಜಸ್ಥಾನ, ಜಾರ್ಖಂಡ್ ನಲ್ಲೂ ಅಲ್ಲಿನ ಸರ್ಕಾರಗಳನ್ನು ಬದಲಾಯಿಸುವ ಕೆಲಸ ನಡೆಯಲಿದೆ ಎಂದು ಕುಮಾರಸ್ವಾಮಿ ಭವಿಷ್ಯ ನುಡಿದರು.
‘ಆಗಸ್ಟ್ ತಿಂಗಳಿನಿಂದ ಪ್ರತಿದಿನ ಒಂದೊಂದು ಕ್ಷೇತ್ರದಲ್ಲಿ ಗ್ರಾಮ ವಾಸ್ತವ್ಯ ಮಾಡುತ್ತೇನೆ. ಬಡವರಿಗೋಸ್ಕರ ನಾನು ಮತ್ತೊಂದು ಬಾರಿ ಅಧಿಕಾರ ಹಿಡಿಯುವ ವಿಶ್ವಾಸ ಇದೆ. ಶಿವಸೇನೆಯಲ್ಲಿ 50 ಜನ ಬಿಟ್ಟು ಹೋಗ್ತಿದ್ದಾರೆ. ಏನು ಆ ಪಕ್ಷ ಮುಳುಗಿ ಹೋಗ್ತಿದೆಯಾ. ವೈಎಸ್‌ವಿ ದತ್ತ ಅವರಿಗೆ ಪಕ್ಷ ಎಲ್ಲಾ ಕೊಟ್ಟಿದೆ. ಎಲ್ಲಾ ಪಡೆದುಕೊಂಡು ಹೋಗ್ತಿನಿ ಅಂದರೆ ಅವರೇ ಯೋಚನೆ ಮಾಡಬೇಕು’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.