ಬೆಂಗಳೂರು: ‘ಮೊಘಲರ ಆಳ್ವಿಕೆಯಲ್ಲಿ ಅವರ ಆಸ್ಥಾನದಲ್ಲಿ ಉನ್ನತ ಹುದ್ದೆಯಲ್ಲಿದ್ದ ಜನರ ಪೀಳಿಗೆಗೆ ಸೇರಿದವರೇ ಆರ್‌ಎಸ್‌ಎಸ್ ನಾಯಕರಾಗಿದ್ದಾರೆ. ಇವರು ನಮಗೆ ಭಾರತೀಯತೆ, ದೇಶ ಭಕ್ತಿಯ ಪಾಠ ಮಾಡುತ್ತಾರೆ’ ಎಂದು ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಕಿಡಿಕಾರಿದರು
ಕೆಪಿಸಿಸಿ ಕಚೇರಿಯಲ್ಲಿ ಕ್ವಿಟ್ ಇಂಡಿಯಾ ಸ್ಮರಣಾರ್ಥ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಆರ್‌ಎಸ್‌ಎಸ್ ಮತ್ತು ಬಿಜೆಪಿ ವಿರುದ್ಧ ಹರಿಹಾಯ್ದರು. ಮೊಘಲ್ ಆಳ್ವಿಕೆಯಲ್ಲಿ ಉನ್ನತ ಸ್ಥಾನ ಹಿಡಿದವರ ಪೀಳಿಗೆಯವರೇ ಈಗಿನ ಆರ್‌ಎಸ್‌ಎಸ್ ನಾಯಕರು ಎಂದು ವ್ಯಾಖ್ಯಾನಿಸಿದರು.
ಟಿಪ್ಪು ಜಯಂತಿ ಆಚರಣೆ ಮಾಡಿದ ಕಾರಣ ಇವರು ನನ್ನ ವಿರುದ್ಧ ಜನರನ್ನು ಎತ್ತಿ ಕಟ್ಟಿದರು. ಟಿಪ್ಪು ದೇಶ ದ್ರೋಹ ಮಾಡಿದ್ದನೆ? ಅವನ ದಿವಾನರಾಗಿದ್ದ ಪೂರ್ಣಯ್ಯ ಹಿಂದುವಲ್ಲವೇ? ಹಣಕಾಸು ಮಂತ್ರಿಯಾಗಿದ್ದ ಕೃಷ್ಣಸ್ವಾಮಿ ಹಿಂದುವಲ್ಲವೇ ಎಂದು ಪ್ರಶ್ನಿಸಿದರು.
ಬ್ರಿಟಿಷರ ವಿರುದ್ಧ ಹೈದರಾಲಿ ಮತ್ತು ಟಿಪ್ಪು ನಾಲ್ಕು ಮಹಾಯುದ್ಧಗಳನ್ನು ಮಾಡಿದ್ದರು. ಬ್ರಿಟಿಷರನ್ನು ದೇಶದಿಂದ ಹೊರ ಹಾಕುವ ಪ್ರಯತ್ನ ಮಾಡಿದ್ದರು. ಇಂತಹ ಟಿಪ್ಪುವಿನ ಜಯಂತಿ ಮಾಡಿದರೆ, ಬಿಜೆಪಿಯವರಿಗೆ ಕೋಪ ಬರುತ್ತದೆ. ಟಿಪ್ಪು ಮೇಲಿರುವ ಕೋಪ ಪೂರ್ಣಯ್ಯನ ಮೇಲೆ ಏಕಿಲ್ಲ ಎಂದೂ ಸಿದ್ದರಾಮಯ್ಯ ಪ್ರಶ್ನಿಸಿದರು.
‘ಈಸ್ಟ್ ಇಂಡಿಯಾ ಕಂಪನಿ ನಮ್ಮ ದೇಶವನ್ನು ಲೂಟಿ ಮಾಡಿತು. ನಮ್ಮ ದೇಶಕ್ಕೆ ಬರುವ ಮುಂಚೆ ಜಗತ್ತಿನ ಜಿ.ಡಿ.ಪಿಗೆ ಬ್ರಿಟೀಷರ ಕೊಡುಗೆ ಶೇ 2 ಇತ್ತು, ನಮ್ಮ ದೇಶದಿಂದ ಅವರು ಹೊರಹೋಗುವಾಗ ಶೇ 10ಕ್ಕೆ ಹೋಗಿತ್ತು. ನಮ್ಮ ದೇಶ ಹಿಂದೆಯೇ ಸಮೃದ್ಧವಾಗಿತ್ತು. ದೇಶದ ಜಿ.ಡಿ.ಪಿ ಶೇ 23ರಷ್ಟಿತ್ತು, ಬ್ರಿಟಿಷರು ಕೊಳ್ಳೆ ಹೊಡೆದ ಪರಿಣಾಮ ಭಾರತ ಬಡ ದೇಶವಾಯಿತು. ಇವತ್ತು ಮತ್ತೆ ಭಾರತ ಬಡದೇಶವಾಗುತ್ತಿದ್ದರೆ ಅದಕ್ಕೆ ಕಾರಣ ಬಿಜೆಪಿಗರು ಎಂದು ಹೇಳಿದರು.
ಹಿಂದೆ ಬ್ರಿಟಿಷರ ವಿರುದ್ಧ ಮಾಡಿದ ಹೋರಾಟದ ಮಾದರಿಯಲ್ಲೇ ಈಗ ಮತ್ತೆ ಬಿಜೆಪಿ ಮತ್ತು ಆರ್‌ಎಸ್‌ಎಸ್ ವಿರುದ್ಧ ಹೋರಾಟ ಮಾಡಬೇಕಿದೆ. ಕ್ವಿಟ್ ಇಂಡಿಯಾ ಚಳವಳಿ ದಿನ, ಗಣರಾಜ್ಯೋತ್ಸವ ದಿನ, ಸ್ವಾತಂತ್ರ್ಯ ದಿನಾಚರಣೆ ಮುಂತಾದ ಪ್ರಮುಖ ದಿನಗಳಂದು ನಾವೆಲ್ಲ ತ್ಯಾಗ ಬಲಿದಾನದ ಮನಸ್ಥಿತಿ ಬೆಳೆಸಿಕೊಳ್ಳುವ ಪ್ರತಿಜ್ಞೆ ಮಾಡಬೇಕಾಗುತ್ತದೆ. ಜೊತೆಗೆ ಬಿಜೆಪಿಯನ್ನು ತೊಲಗಿಸುವ ಕೆಲಸಕ್ಕೆ ಒಂದಾಗಿ ಕೆಲಸ ಮಾಡಬೇಕು ಎಂದು ಕರೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.