ಬೆಂಗಳೂರು: ತಮ್ಮ ಸಂಘಟನೆ ಜೊತೆ ಗುರುತಿಸಿಕೊಂಡಿರುವ ಯುವಜನರಿಗೆ ನಾಯಕತ್ವ ನೀಡಿ, ಅವರನ್ನು ಸಾಮಾಜಿಕ ಪರಿವರ್ತನೆಯಲ್ಲಿ ಪರಿಣಾಮಕಾರಿಯಾಗಿ ಬಳಸಿಕೊಳ್ಳಲು ರಾಷ್ಟ್ರೀಯ ಸ್ವಯಂಸೇವಕ ಸಂಘ ಮುಂದಾಗಿದೆ.
ನಗರದಲ್ಲಿ ಏರ್ಪಡಿಸಿದ್ದ ಅಖಿಲ ಭಾರತೀಯ ಕಾರ್ಯಕಾರಿ ಮಂಡಲದ ಸಭೆಯಲ್ಲಿ ಈ ಕುರಿತು ಗಂಭೀರ ಚಿಂತನೆ ನಡೆಸಲಾಗಿದೆ.
ಸಭೆಯ ಕುರಿತು ಸುದ್ದಿಗೋಷ್ಠಿಯಲ್ಲಿ ಸೋಮವಾರ ಮಾತನಾಡಿದ ಆರ್‌ಎಸ್ಎಸ್‌ನ ಸಹಕಾರ್ಯವಾಹ ಸುರೇಶ್ ಭಯ್ಯಾಜಿ ಜೋಶಿ, ‘18 ವರ್ಷದಿಂದ 22 ವರ್ಷ ಹಾಗೂ 22ವರ್ಷಗಳಿಂದ 35 ವರ್ಷಗಳೊಳಗಿನ ಯುವಜನರಿಗೆ ನಾಯಕತ್ವ ನೀಡುವ ಬಗ್ಗೆ ಚಿಂತನೆ ನಡೆಸಿದ್ದೇವೆ. ಅವರ ಹೆಗಲಿಗೆ ಇನ್ನಷ್ಟು ಜವಾಬ್ದಾರಿಗಳನ್ನು ವಹಿಸುವ ಮೂಲಕ ಸಂಘಟನೆಯನ್ನು ಬಲಪಡಿಸಬೇಕಾಗಿದೆ. ಸುಮಾರು 15 ಲಕ್ಷ ಯುವಜನರಿಗೆ ತರಬೇತಿ ನೀಡಲಿದ್ದೇವೆ’ ಎಂದರು.
‘ಸಂಘಟನೆಗೆ 95 ವರ್ಷಗಳಾಗಿವೆ. ಯುವಜನರ ವಯಸ್ಸು, ಶೈಕ್ಷಣಿಕ ಹಿನ್ನೆಲೆ, ಸಾಮಾಜಿಕ ಸ್ಥಾನಮಾನ ಆಧಾರದಲ್ಲಿ ಎರಡು ವರ್ಷಗಳ ಕಾಲ ಸಮೀಕ್ಷೆ ನಡೆಸಿದ್ದೇವೆ. ಯುವ ಸಂಪನ್ಮೂಲವನ್ನು ಅವರ ಉದ್ಯೋಗ, ವ್ಯಾಪಾರ, ಕೃಷಿ ಮುಂತಾದ ಹಿನ್ನೆಲೆಗಳಿಗೆ ಅನುಗುಣವಾಗಿ ಸಾಮಾಜಿಕ ಪರಿವರ್ತನೆಯಲ್ಲಿ ಹಂತ ಹಂತವಾಗಿ ಹೇಗೆ ಬಳಸಬಹುದು ಎಂಬ ಬಗ್ಗೆ ಯೋಜನೆ ಸಿದ್ಧಪಡಿಸಿದ್ದೇವೆ’ ಎಂದರು.
‘ಯುವಜನರಲ್ಲಿ ಸುಪ್ತ ಶಕ್ತಿ ಇದೆ. ಇದುವರೆಗೆ ಕೆಲವೇ ಚಟುವಟಿಕೆಗಳಿಗೆ ಮಾತ್ರ ಅವರನ್ನು ಬಳಸಿಕೊಳ್ಳಲಾಗುತ್ತಿತ್ತು. ಅವರಿಗೆ ಮುಂದಿನ ವರ್ಷ ಔಪಚಾರಿಕ ಹಾಗೂ ಅನೌಪಚಾರಿಕ ತರಬೇತಿ ನೀಡುತ್ತೇವೆ. ಅವರು ತಮ್ಮ ಸಮಯ ಹಾಗೂ ಶಕ್ತಿಯನ್ನು ಸಾಮಾಜಿಕ ಬದಲಾವಣೆಗೆ ವಿನಿಯೋಗಿಸುತ್ತಾರೆ’ ಎಂದರು.
‘ಸಂಘದ ಕಾರ್ಯ ಚಟುವಟಿಕೆಯನ್ನು ವಿಸ್ತರಿಸಲಿದ್ದೇವೆ. ಗ್ರಾಮ ವಿಕಾಸಕ್ಕೆ ಯುವಜನರನ್ನು ಬಳಸಿಕೊಳ್ಳುತ್ತೇವೆ. 1000 ಗ್ರಾಮಗಳನ್ನು ಈಗಾಗಲೇ ಗುರುತಿಸಿದ್ದು, ಪ್ರಸ್ತುತ 300 ಗ್ರಾಮಗಳಲ್ಲಿ ವೇಗವಾಗಿ ಕೆಲಸಗಳು ನಡೆಯುತ್ತಿವೆ. ಶಿಕ್ಷಣ, ಆರೋಗ್ಯ, ಕೃಷಿ, ಸಾಮಾಜಿಕ ಸಾಮರಸ್ಯ, ಸ್ವಾವಲಂಬನೆ ಸೇರಿ ಐದು ಆಯಾಮಗಳಲ್ಲಿ ಚಟುವಟಿಕೆಗಳು ನಡೆಯಲಿವೆ’ ಎಂದರು.
‘ಸಾಮಾಜಿಕ ಪರಿವರ್ತನೆಗಾಗಿ ‘ಕುಟುಂಬ ಪ್ರಭೋದನ’ದಂತಹ ಕೆಲವು ಕಾರ್ಯಕ್ರಮಗಳನ್ನು ಈಗಾಗಲೇ ಆರಂಭಿಸಿದ್ದೇವೆ. ಸಮಾಜದಲ್ಲಿ ಕೌಟುಂಬಿಕ ವ್ಯವಸ್ಥೆ ಬೇರೆ ಬೇರೆ ಕಾರಣಗಳಿಂದಾಗಿ ಶಿಥಿಲವಾಗಿದ್ದು, ಇದನ್ನು ಸರಿಪಡಿಸಬೇಕಿದೆ. ಈ ನಿಟ್ಟಿನಲ್ಲಿ ನಮ್ಮ ತಂಡಗಳು ಕಾರ್ಯನಿರ್ವಹಿಸಲಿವೆ. ಕುಟುಂಬಗಳು ಒಗ್ಗೂಡಬೇಕು. ಆರ್‌ಎಸ್‌ಎಸ್ ಜೊತೆ ನೇರ ಸಂಪರ್ಕ ಇಲ್ಲದ ಅನೇಕರೂ ಕುಟುಂಬ ವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಕಾಳಜಿ ವಹಿಸುತ್ತಿದ್ದು, ಅವರ ನೆರವನ್ನೂ ಪಡೆಯುತ್ತೇವೆ’ ಎಂದರು.
‘ಪರಿಸರ ಸಂರಕ್ಷಣೆ ವಿಚಾರದಲ್ಲೂ ನಮ್ಮ ಚಟುವಟಿಕೆ ಮುಮದುವರಿಯಲಿದೆ. ನೀರು ಉಳಿಸಿ, ಮರ ಬೆಳೆಸಿ, ಪ್ಲಾಸ್ಟಿಕ್ ಅಳಿಸಿ ಎಂಬ ಮೂರು ಸೂತ್ರಗಳನ್ನು ಮುಂದಿಟ್ಟುಕೊಂಡು ಕೆಲಸ ಮಾಡುತ್ತೇವೆ’ ಎಂದರು.
'ಕಳೆದ ವರ್ಷಕ್ಕೆ ಹೋಲಿಸಿದರೆ ಸಂಘದ ಶಾಖಾ ಚಟುವಟಿಕೆಗಳು ಹೆಚ್ಚಾಗಿವೆ. ನಾವು ಪ್ರಸ್ತುತ ದೇಶದಲ್ಲಿ 8೦ ಸಾವಿರ ಹಳ್ಳಿಗಳನ್ನು ತಲುಪಿದ್ದೇವೆ. 39,500 ಊರುಗಳಲ್ಲಿ ನಿತ್ಯ ಕಾರ್ಯನಿರ್ವಹಿಸುವ ಶಾಖೆಗಳಿವೆ. ನಿತ್ಯ ಶಾಖೆಗಳ ಸಂಖ್ಯೆ 3 ಸಾವಿರ ಹಾಗೂ ಸಾಪ್ತಾಹಿಕ ಮಿಲನಗಳ ಸಂಖ್ಯೆ 4 ಸಾವಿರಗಳಷ್ಟು ಹೆಚ್ಚಾಗಿವೆ' ಎಂದರು.
‘ಸಭೆ ರದ್ದು ಇತಿಹಾಸದಲ್ಲೇ ಮೊದಲು’
'ಕೊರೋನ ಸೋಂಕು ಹಬ್ಬದಂತೆ ತಡೆಯಲು ರಾಜ್ಯ ಸರ್ಕಾರ ಕೆಲವೊಂದು ನಿರ್ಬಂಧಗಳನ್ನು ವಿಧಿಸಿದ್ದರಿಂದ ಸಂಘದ ಅಖಿಲ ಭಾರತ ಪ್ರತಿನಿಧಿ ಸಭೆಯನ್ನು ರದ್ದುಪಡಿಸಲಾಯಿತು. ಆದರೆ, ಅಖಿಲ ಭಾರತ ಕಾರ್ಯಕಾರಿ ಮಂಡಲದ ಸಭೆ ನಡೆದಿದೆ’ ಎಂದು ಆರ್‌ಎಸ್‌ಎಸ್‌ನ ಅಖಿಲ ಭಾರತ ಸಹ ಪ್ರಚಾರ ಪ್ರಮುಖ ಅರುಣ್ ಕುಮಾರ್ ತಿಳಿಸಿದರು.
‘1951ರಿಂದ ಅಖಿಲ ಭಾರತ ಪ್ರತಿನಿಧಿ ಸಭೆ ಪ್ರತಿ ವರ್ಷವೂ ನಡೆಯುತ್ತಾ ಬಂದಿದೆ. ಆರ್‌ಎಸ್‌ಎಸ್ ಸ್ವಯಂಪ್ರೇರಿತವಾಗಿ ಈ ಸಭೆಯನ್ನು ರದ್ದುಪಡಿಸಿದ್ದು ಇದೇ ಮೊದಲು. ಈ ಹಿಂದೆ 1975–76ರಲ್ಲಿ ಹಾಗೂ 1992ರಲ್ಲಿ ಸಭೆ ನಡೆಸಲು ಸರ್ಕಾರವೇ ಅವಕಾಶ ನೀಡಿರಲಿಲ್ಲ’ ಎಂದು ಸುರೇಶ್ ಭಯ್ಯಾಜಿ ಜೋಶಿ ತಿಳಿಸಿದರು.
ಕಾರ್ಯಕಾರಿ ಮಂಡಲ ಸಭೆಯ ನಿರ್ಣಯಗಳು
* ಸಂವಿಧಾನದ 370ನೇ ಅನುಚ್ಚೇದವನ್ನು ರಾಷ್ಟ್ರಪತಿ ಆದೇಶದ ಮೂಲಕ ನಿಷ್ಕ್ರಿಯಗೊಳಿಸಿ ನಂತರ ಸಂಸತ್ತಿನ ಉಭಯ ಸದನಗಳಲ್ಲಿ ಅಂಗೀಕಾರ ಪಡೆದ ಕೇಂದ್ರ ಸರ್ಕಾರದ ನಡೆಗೆ ಮೆಚ್ಚುಗೆ
* ರಾಮನ ಜನ್ಮಸ್ಥಳದಲ್ಲಿ ರಾಮ ಮಂದಿರ ನಿರ್ಮಾಣ ರಾಷ್ಟ್ರೀಯ ಅಭಿಮಾನದ ಸಂಕೇತ. ಈ ಕುರಿತು ಐತಿಹಾಸಿಕ ತೀರ್ಪು ನೀಡಿದ ಸುಪ್ರೀಂ ಕೋರ್ಟ್‌ಗೆ ಅಭಿನಂದನೆ
* ಭಾರತ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) 2019 ಅಂಗೀಕರಿಸಿದ ಸಂಸತ್ತು ಹಾಗೂ ಕೇಂದ್ರ ಸರ್ಕಾರಕ್ಕೆ ಅಭಿನಂದನೆ
ಅಂಕಿ ಅಂಶ
ನಿತ್ಯ ಚಟುವಟಿಕೆ ನಡೆಯುವ ಆರ್‌ಎಸ್‌ಎಸ್ ಶಾಖೆಗಳು -62,500
ಆರ್‌ಎಸ್‌ಎಸ್ ಸಾಪ್ತಾಹಿಕ ಮಿಲನಗಳು -28,500
ಆಗಾಗ್ಗೆ ಚಟುವಟಿಕೆ ನಡೆಸುವ ಆರ್‌ಎಸ್‌ಎಸ್ ಸಂಪರ್ಕ ಕೇಂದ್ರಗಳು -10 ಸಾವಿರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.