ADVERTISEMENT

ವದಂತಿ ಸೃಷ್ಟಿಸಿ ಹರಡುವ ಆರ್‌ಎಸ್‌ಎಸ್‌: ಬಿ.ಕೆ. ಹರಿಪ್ರಸಾದ್‌

‘ಚಿಮಣಿ ಬೆಳಕಿನಿಂದ’ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಬಿ.ಕೆ. ಹರಿಪ್ರಸಾದ್

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2024, 15:15 IST
Last Updated 17 ಅಕ್ಟೋಬರ್ 2024, 15:15 IST
ಬಿ.ಕೆ. ಹರಿಪ್ರಸಾದ್‌
ಬಿ.ಕೆ. ಹರಿಪ್ರಸಾದ್‌   

ಬೆಂಗಳೂರು: ವದಂತಿಗಳನ್ನು ಸೃಷ್ಟಿಸಿ ಹಂಚುವ ಸಂಸ್ಥೆಯೇ ಆರ್‌ಎಸ್‌ಎಸ್‌. ಅದೊಂದು ಸುಳ್ಳಿನ ಕಾರ್ಖಾನೆ ಎಂದು ವಿಧಾನಪರಿಷತ್‌ ಸದಸ್ಯ ಬಿ.ಕೆ. ಹರಿಪ್ರಸಾದ್‌ ಹೇಳಿದರು.

ಎಂ.ಜಿ. ಹೆಗಡೆ ಅವರ ಆತ್ಮಕತೆ ‘ಚಿಮಣಿ ಬೆಳಕಿನಿಂದ’ ಕೃತಿಯನ್ನು ಗುರುವಾರ ಬಿಡುಗಡೆ ಮಾಡಿ ಅವರು ಮಾತನಾಡಿದರು.

‘ಸುಭಾಶ್ಚಂದ್ರ ಬೋಸ್‌ ಅವರ ಸಾವಿಗೆ ಕಾರಣ ಯಾರು? ಲಾಲ್‌ ಬಹದ್ದೂರು ಶಾಸ್ತ್ರಿ ಸಾವಿಗೆ ಕಾರಣ ಯಾರು? ದೀನ ದಯಾಳ್‌ ಉಪಾಧ್ಯರನ್ನು ಕೊಂದವರು ಯಾರು? ಹೀಗೆ ಪ್ರಶ್ನೆಗಳನ್ನು ಹರಡಿ, ಜನರ ತಲೆಯಲ್ಲಿ ಹುಳ ಬಿಟ್ಟು ಆಮೇಲೆ ಕಾಂಗ್ರೆಸ್‌ ಕಡೆ ಕೈ ತೋರಿಸುವುದನ್ನು ಹಿಂದಿನಿಂದಲೂ ಮಾಡಿಕೊಂಡು ಬಂದಿದ್ದಾರೆ. ಈಗ 10 ವರ್ಷಗಳಿಂದ ಅಧಿಕಾರದಲ್ಲಿ ಅವರೇ ಇರುವುದರಿಂದ ಈ ಪ್ರಶ್ನೆಗಳನ್ನು ಕೇಳುವುದಾಗಲಿ, ತನಿಖೆಗೆ ಮುಂದಾಗುವುದಾಗಲಿ ಮಾಡುತ್ತಿಲ್ಲ. ಸುಳ್ಳುಗಳನ್ನು ಪದೇ ಪದೇ ಹೇಳಿ ಹೇಳಿ ಸತ್ಯ ಎಂದು ನಂಬಿಸುವುದಷ್ಟೇ ಇವರ ಕೆಲಸ’ ಎಂದು ಆರೋಪಿಸಿದರು.

ADVERTISEMENT

ದೇಶ ಕಟ್ಟುವ ಬಗ್ಗೆ ಅದ್ಭುತವಾಗಿ ಮಾತನಾಡಿ ಯುವಜನರನ್ನು ಸೆಳೆಯುತ್ತಾರೆ. ಆನಂತರ ನಿಧಾನಕ್ಕೆ ಹಿಂದೂ ಮುಸ್ಲಿಂ ದ್ವೇಷವನ್ನು ಯುವಜನರ ತಲೆಗೆ ತುಂಬುತ್ತಾರೆ. ಹಿಂದುತ್ವದ ಹೆಸರಿನಲ್ಲಿ ಅಮಾಯಕರನ್ನು ಬಲಿ ಕೊಡುತ್ತಾರೆ. ಇದನ್ನೆಲ್ಲ ತಿಳಿಯಲು ‘ಚಿಮಣಿ ಬೆಳಕಿನಿಂದ’ ಓದಬೇಕು ಎಂದು ಸಲಹೆ ನೀಡಿದರು.

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಮಾತನಾಡಿ, ‘ಕಾವ್ಯ, ಕಾದಂಬರಿಗಳಿಗೆ ಓದುಗರು ಕಡಿಮೆಯಾಗಿರಬಹುದು. ಆದರೆ, ಆತ್ಮಚರಿತ್ರೆಗೆ ಓದುಗರು ಇದ್ದಾರೆ. ಹಲವು ವಿಚಾರಗಳನ್ನು ಬಚ್ಚಿಟ್ಟು, ತಮ್ಮನ್ನು ವೈಭವೀಕರಿಸಲು ಬರೆಯುವ ಆತ್ಮಕಥೆಗಳು ಪ್ರಯೋಜನವಿಲ್ಲ. ನಮ್ಮ ನೆನಪಿನಲ್ಲಿ ಉಳಿಯುವ ವಿಚಾರಗಳನ್ನು ಯಾಕೆ ಉಳಿಯಿತು ಎಂಬ ನೋಟದೊಂದಿಗೆ ಕಟ್ಟಿಕೊಡಬೇಕು. ಅಂಥ ಆತ್ಮಚರಿತ್ರೆಗಳಲ್ಲಿ ‘ಚಿಮಣಿ ಬೆಳಕಿನಿಂದ’ ಕೂಡ ಒಂದು’ ಎಂದು ಹೇಳಿದರು.

‘ಊರುಗೋಲು ಆಗಬೇಕಿದ್ದ ದೊಣ್ಣೆಯನ್ನು ಇನ್ನೊಬ್ಬರ ತಲೆ ಒಡೆಯಲು ಬಳಸಿದರೆ ಯಾವ ದೇಶವೂ ಉದ್ದಾರವಾಗದು. ಆರ್‌ಎಸ್‌ಎಸ್‌ನ ನೀತಿ ಹಿಂದೂ ಧರ್ಮಕ್ಕೆ ಮಾರಕವಾಗಿದೆ. ಆರ್‌ಎಸ್‌ಎಸ್‌ನ ನಾಯಕರಿಂದ ಕಾಲಾಳುವರೆಗೆ ಎಲ್ಲರೂ ಈ ಪುಸ್ತಕವನ್ನು ಓದಬೇಕು’ ಎಂದರು.

ಕೃತಿಕಾರ ಎಂ.ಜಿ. ಹೆಗಡೆ ಮಾತನಾಡಿ, ‘ಗಾಂಧೀಜಿಯ ಬಗೆಗಿನ ನಿಂದನಾತ್ಮಕ ವಿಚಾರಗಳು, ನಿಂದನಾತ್ಮಕ ಪ್ರಶ್ನೆಗಳಿಗೆ ಮೂಲ ಯಾವುದು ಎಂದು ಹುಡುಕಿಕೊಂಡು ಹೋದಾಗ ಅದು ‘ನಾನೇಕೆ ಗಾಂಧಿಯನ್ನು ಗೊಂದೆ’ ಎಂಬ ಗೋಡ್ಸೆಯ ಕೃತಿಗೆ ಬಂದು ನಿಲ್ಲುತ್ತದೆ’ ಎಂದು ಹೇಳಿದರು.

‘ಅದನ್ನು ನಾಥೂರಾಂ ಗೋಡ್ಸೆ ಬರೆದಿಲ್ಲ. ಆತ ಸತ್ತ ಕೆಲವು ವರ್ಷಗಳ ಬಳಿಕ ಗೋಪಾಲ ಗೋಡ್ಸೆ ಬರೆದಿರುವುದು. ನಾಥೂರಾಂ ಗೋಡ್ಸೆ ನ್ಯಾಯಾಲಯದಲ್ಲಿ ನೀಡಿದ ಹೇಳಿಕೆ ಎಂದು 200 ಪುಟಗಳು ಆ ಕೃತಿಯಲ್ಲಿವೆ. ನಾನು ಮಾಹಿತಿ ಹಕ್ಕಿನಲ್ಲಿ ಅರ್ಜಿ ಸಲ್ಲಿಸಿ ಪಡೆದ ಮಾಹಿತಿ ಪ್ರಕಾರ, ಹೇಳಿಕೆ ಕೇವಲ 8 ಪುಟಗಳಿವೆ. ಹಾಗಾದರೆ 200 ಪುಟಗಳು ಹೇಗಾದವು? ಇದನ್ನೆಲ್ಲ ಹುಡುಕಿಕೊಂಡು ಗಾಂಧೀಜಿಯನ್ನು ಸಮಗ್ರವಾಗಿ ಓದಿದ ಮೇಲೆ ನನ್ನ ದಾರಿ ಯಾವುದು ಎಂಬುದು ಸ್ಪಷ್ಟವಾಯಿತು’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.