ಬೆಂಗಳೂರು: ‘ಹಳೆಯ ಟಿ.ವಿ, ಕಂಪ್ಯೂಟರ್, ಮೊಬೈಲ್, ಚಾರ್ಜರ್ ಇತ್ಯಾದಿ ಉಪಕರಣಗಳನ್ನು ಕನಿಷ್ಠ ಬೆಲೆ ನೀಡಿ ಮಾರಾಟಗಾರರೇ ಕಡ್ಡಾಯವಾಗಿ ಮರು ಖರೀದಿ ಮಾಡಬೇಕೆಂಬ ನಿಯಮ ಜಾರಿಗೆ ತಂದರೆ ಇ– ತ್ಯಾಜ್ಯವನ್ನು ನಿಯಂತ್ರಿಸಲು ಸಾಧ್ಯವಿದೆ’ ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ಅಭಿಪ್ರಾಯಪಟ್ಟಿದ್ದಾರೆ.
ಈ ಕುರಿತು ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ಟಿಪ್ಪಣಿ ನೀಡಿರುವ ಸಚಿವರು, ‘ಕಂಪ್ಯೂಟರ್, ಮೊಬೈಲ್ ದತ್ತಾಂಶ ದುರ್ಬಳಕೆ ಆಗದ ರೀತಿಯಲ್ಲಿ ಹಳೆಯ ವಿದ್ಯುನ್ಮಾನ ಸಲಕರಣೆಗಳ ಮರು ಖರೀದಿಯ ಸಾಧಕ–ಬಾಧಕ ಮತ್ತು ಅನುಷ್ಠಾನ ಕುರಿತಂತೆ 30 ದಿನಗಳ ಒಳಗೆ ಕಡತದಲ್ಲಿ ಪ್ರಸ್ತಾವ ಸಲ್ಲಿಸಬೇಕು’ ಎಂದು ಸೂಚಿಸಿದ್ದಾರೆ.
‘ಮನೆಗಳಲ್ಲಿಯೂ ದಿನದಿಂದ ದಿನಕ್ಕೆ ಅಪಾಯಕಾರಿಯಾದ ಇ– ತ್ಯಾಜ್ಯ ಹೆಚ್ಚಳ ಆಗುತ್ತಿದೆ. ಗುಜರಿ ಅಂಗಡಿಗಳಲ್ಲಿ ವಿದ್ಯುನ್ಮಾನ ಉಪಕರಣಗಳಿಂದ ಆಯ್ದ ವಸ್ತುಗಳನ್ನು ಮಾತ್ರ ತೆಗೆದುಕೊಂಡು ಉಳಿದ ವಸ್ತುಗಳನ್ನು ವೈಜ್ಞಾನಿಕವಾಗಿ ಸಂಸ್ಕರಿಸದೇ ಇರುವುದು ಗಮನಕ್ಕೆ ಬಂದಿದೆ. ಸಾರ್ವಜನಿಕರ ಮತ್ತು ಸಮುದಾಯ ಆರೋಗ್ಯ ರಕ್ಷಣೆಯ ಹಿನ್ನೆಲೆಯಲ್ಲಿ ಇ– ತ್ಯಾಜ್ಯದ ವೈಜ್ಞಾನಿಕ ವಿಲೇವಾರಿ ಇಂದಿನ ಅಗತ್ಯವಾಗಿದೆ. ಇದಕ್ಕಾಗಿ ಹೊಸ ಟಿ.ವಿ, ಕಂಪ್ಯೂಟರ್, ಮೊಬೈಲ್ ಇತ್ಯಾದಿ ಯಾವುದೇ ವಿದ್ಯುನ್ಮಾನ ಉಪಕರಣಗಳನ್ನು ಖರೀದಿಸುವ ಸಂದರ್ಭದಲ್ಲಿ ಗ್ರಾಹಕರು ಇಚ್ಛಿಸಿದರೆ, ಅವರ ಹಳೆಯ ಉಪಕರಣಗಳನ್ನು ಮಾರಾಟಗಾರರು ಕನಿಷ್ಠ ಬೆಲೆ ನೀಡಿ ಮತ್ತೆ ಖರೀದಿ ಮಾಡಬೇಕೆಂಬ ನಿಯಮ ಜಾರಿಗೆ ಬರಬೇಕಿದೆ’ ಎಂದೂ ಖಂಡ್ರೆ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.