ADVERTISEMENT

ರಾಜಮನೆತನದ ಘೋರ್ಪಡೆಗೂ ಸಾಲ!

ಆನಂದ್‌ ಸಿಂಗ್‌ ವಿರುದ್ಧ 18 ಕ್ರಿಮಿನಲ್‌ ಪ್ರಕರಣ; ಮಾಜಿಸಚಿವರ ಬಳಿ ಕಾರಿಲ್ಲ; ಕೋಟ್ಯಧಿಪತಿ ಕವಿರಾಜ

​ಪ್ರಜಾವಾಣಿ ವಾರ್ತೆ
Published 1 ಡಿಸೆಂಬರ್ 2019, 10:47 IST
Last Updated 1 ಡಿಸೆಂಬರ್ 2019, 10:47 IST
   

ಹೊಸಪೇಟೆ: ವಿಜಯನಗರ ಕ್ಷೇತ್ರದ ಉಪಚುನಾವಣೆಗೆ ಸ್ಪರ್ಧಿಸಿರುವ ಕಾಂಗ್ರೆಸ್‌, ಬಿಜೆಪಿ, ಜೆ.ಡಿ.ಎಸ್‌. ಹಾಗೂ ಪಕ್ಷೇತರ (ಬಿಜೆಪಿ ಬಂಡಾಯ) ಅಭ್ಯರ್ಥಿಗಳು ನಾಮಪತ್ರದ ಜತೆಗೆ ಸಲ್ಲಿಸಿರುವ ಆಸ್ತಿ ವಿವರದಲ್ಲಿ ದಾಖಲಿಸಿದ ಮಹತ್ವದ ಅಂಶಗಳು ಅಭ್ಯರ್ಥಿವಾರು ಕೆಳಗಿನಂತಿದೆ.

ಸಂಡೂರು ರಾಜಮನೆತನದ ಎಂ.ವೈ. ಘೋರ್ಪಡೆ ಅವರ ಸೋದರ ವೆಂಕಟರಾವ ಘೋರ್ಪಡೆ ಅವರು ₹1.96 ಕೋಟಿ ಕೈ ಸಾಲ ಮಾಡಿಕೊಂಡಿದ್ದಾರೆ.

ಕಾಂಗ್ರೆಸ್‌ನಿಂದ ಕಣಕ್ಕಿಳಿದಿರುವ ಅವರ ವಿರುದ್ಧ ಚುನಾವಣೆಗೆ ಸಂಬಂಧಿಸಿದಂತೆ ಇಲ್ಲಿನ ಗ್ರಾಮೀಣ ಠಾಣೆಯಲ್ಲಿ 2018ರಲ್ಲಿ ಪ್ರಕರಣ ದಾಖಲಾಗಿದೆ. ಬಿ.ಎಸ್ಸಿ, ಡಿ.ಎಂ.ಐ.ಟಿ., ವಿದ್ಯಾರ್ಹತೆ ಜತೆಗೆ ಅಮೆರಿಕದ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದಲ್ಲಿ ಮಾಸ್ಟರ್ಸ್‌ ಆಫ್‌ ಸೈನ್ಸ್‌ ಇನ್‌ ಎಲೆಕ್ಟ್ರಿಕಲ್‌ ಎಂಜಿನಿಯರಿಂಗ್‌ (ಎಂ.ಎಸ್‌.ಇ.ಇ.) ಮುಗಿಸಿದ್ದಾರೆ.

ADVERTISEMENT

₹1.57 ಕೋಟಿ ಚರಾಸ್ತಿ ಹಾಗೂ ₹5.87 ಕೋಟಿ ಸ್ಥಿರಾಸ್ತಿ ಹೊಂದಿದ್ದಾರೆ. 600 ಗ್ರಾಮ ಒಡವೆ, ಹತ್ತು ಕಿಲೋ ಬೆಳ್ಳಿ ಹೊಂದಿದ್ದಾರೆ. ಇವರ ಪತ್ನಿ ವಿಧ್ಯುಲ್ಲತಾ ಬಳಿ ಚಿನ್ನಾಭರಣಗಳಿಲ್ಲ. ₹2.28 ಲಕ್ಷ ಸಾಲ ಇದೆ.

ಆನಂದ್‌ ಸಿಂಗ್‌ ವಿರುದ್ಧ 18 ಕ್ರಿಮಿನಲ್‌ ಪ್ರಕರಣ

ಬಿಜೆಪಿಯಿಂದ ಸ್ಪರ್ಧಿಸುತ್ತಿರುವ ಆನಂದ್‌ ಸಿಂಗ್‌ ವಿರುದ್ಧ ವಂಚನೆ ಸೇರಿದಂತೆ ಒಟ್ಟು 18 ಕ್ರಿಮಿನಲ್‌ ಪ್ರಕರಣಗಳಿವೆ. ಲೋಕಾಯುಕ್ತದಲ್ಲಿ 11, ಸಿ.ಬಿ.ಐ., ಎ.ಸಿ.ಬಿ.ಯಲ್ಲಿ ತಲಾ ಮೂರು, ಅರಣ್ಯ ಇಲಾಖೆಯಲ್ಲಿ ಒಂದು ಪ್ರಕರಣ ಇದೆ.

ಬಿ.ಎಂ.ಡಬ್ಲ್ಯೂ, ರೇಂಜ್‌ ರೋವರ್‌ ಸೇರಿದಂತೆ ಒಟ್ಟು 19 ಐಷಾರಾಮಿ ವಾಹನಗಳಿವೆ. ಸಿಂಗ್‌ ಒಟ್ಟು ಆಸ್ತಿ ₹104.42 ಕೋಟಿ ಇದೆ. ಜತೆಗೆ ₹30.84 ಕೋಟಿ ಸಾಲ ಇದೆ. ಪತ್ನಿ ಲಕ್ಷ್ಮಿ ಸಿಂಗ್‌ ₹72.29 ಕೋಟಿಯ ಒಡತಿಯಾಗಿದ್ದು, ₹42.64 ಕೋಟಿ ಸಾಲ ಹೊಂದಿದ್ದಾರೆ. 2018ರಲ್ಲಿ ಅವರು ಯಾವುದೇ ಸಾಲ ಪಡೆದಿರಲಿಲ್ಲ.

ಮಾಜಿ ಸಚಿವರ ಬಳಿ ಕಾರೇ ಇಲ್ಲ!

ಜೆ.ಡಿ.ಎಸ್. ಅಭ್ಯರ್ಥಿ, ಮಾಜಿ ಸಚಿವ ಎನ್‌.ಎಂ. ನಬಿ ಅವರ ಬಳಿ ಕಾರೇ ಇಲ್ಲ. ಬ್ಯಾಂಕ್‌ನಲ್ಲಿ ಠೇವಣಿಯೂ ಇಲ್ಲ!

ಬಿ.ಎಸ್ಸಿ. ಪದವಿ ಪೂರೈಸಿರುವ ಅವರ ಆದಾಯದ ಮೂಲ ಕೃಷಿಯಾಗಿದೆ. ಯಾವುದೇ ಕ್ರಿಮಿನಲ್‌ ಪ್ರಕರಣ ಅವರ ವಿರುದ್ಧ ಇಲ್ಲ. ₹12.74 ಲಕ್ಷ ಚರಾಸ್ತಿ, ₹1.48 ಕೋಟಿ ಸ್ಥಿರಾಸ್ತಿ ಹೊಂದಿದ್ದಾರೆ. 300 ಗ್ರಾಂ ಚಿನ್ನ, 400 ಗ್ರಾಂ ಬೆಳ್ಳಿ ಆಭರಣಗಳಿವೆ. ಈ ಹಿಂದೆ ಕೂಡ್ಲಿಗಿಯಿಂದ ಗೆದ್ದು ಸಚಿವರಾಗಿ ಕೆಲಸ ನಿರ್ವಹಿಸಿದ ಅನುಭವ ಅವರಿಗಿದೆ.

ಕೋಟ್ಯಧಿಪತಿ ಕವಿರಾಜ

ವಿಜಯನಗರ ಕ್ಷೇತ್ರದ ಉಪಚುನಾವಣೆಗೆ ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿರುವ ಕವಿರಾಜ ಅರಸ್‌ ಕೋಟ್ಯಂತರ ರೂಪಾಯಿ ಆಸ್ತಿಯ ಒಡೆಯರಾಗಿದ್ದಾರೆ.

₹6.99 ಕೋಟಿ ಚರಾಸ್ತಿ, ₹29.23 ಕೋಟಿ ಸ್ಥಿರಾಸ್ತಿ ಹೊಂದಿದ್ದಾರೆ. 10.42 ಕೆ.ಜಿ. ಚಿನ್ನಾಭರಣ ಇದ್ದರೆ, ಪತ್ನಿ ಬಳಿ 30 ಗ್ರಾಮ ಬಂಗಾರ ಇದೆ. 16 ಟಿಪ್ಪರ್‌ ಸೇರಿದಂತೆ 70 ವಾಹನಗಳನ್ನು ಹೊಂದಿರುವ ಅವರು ಬೆಂಗಳೂರಿನಲ್ಲಿ 14 ಬ್ಯಾಂಕ್‌ ಖಾತೆಗಳನ್ನು ಹೊಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.