ADVERTISEMENT

ನಿಯಮ ಉಲ್ಲಂಘಿಸಿ ಅರಣ್ಯಾಧಿಕಾರಿಗಳಿಗೆ ಬಡ್ತಿ: ನ್ಯಾಯಾಂಗ ನಿಂದನೆ ದೂರು ದಾಖಲು

ಚಂದ್ರಹಾಸ ಹಿರೇಮಳಲಿ
Published 7 ಆಗಸ್ಟ್ 2024, 23:40 IST
Last Updated 7 ಆಗಸ್ಟ್ 2024, 23:40 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

ಬೆಂಗಳೂರು: ಹೈಕೋರ್ಟ್‌ 2020ರಲ್ಲಿ ರದ್ದು ಮಾಡಿದ್ದ ದೋಷಪೂರಿತ ಜ್ಯೇಷ್ಠತಾ ಪಟ್ಟಿ ಆಧಾರದಲ್ಲೇ ವಲಯ ಅರಣ್ಯಾಧಿ ಕಾರಿಗಳಿಗೆ (ಆರ್‌ಎಫ್‌ಒ) ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ (ಎಸಿಎಫ್‌) ಹುದ್ದೆಗೆ ಬಡ್ತಿ ನೀಡಲು ಅರಣ್ಯ ಇಲಾಖೆ ಬಡ್ತಿ ಸಮಿತಿ ಅನುಮೋದನೆ ನೀಡಿದೆ.

ಆರ್‌ಎಫ್‌ಒ ಹುದ್ದೆಗೆ ನೇರ ನೇಮಕಾತಿ ಆದವರು ಹಾಗೂ ವಲಯ ಅರಣ್ಯಾಧಿಕಾರಿ ಹುದ್ದೆಯಿಂದ ಬಡ್ತಿ ಪಡೆದು ಆರ್‌ಎಫ್ಒ ಆದವರಿಗೆ ಬಡ್ತಿ ನೀಡುವಾಗ 50:50ರ ಅನುಪಾತದಂತೆ ಕ್ರಮಕೈಗೊಳ್ಳಲು ನಿಯಮ ರೂಪಿಸಲಾಗಿದೆ. ಆದರೆ, ನೇರ ನೇಮಕಾತಿಯಾದ ಅಧಿಕಾರಿ ಗಳನ್ನು ಕಡೆಗಣಿಸಿ, ಬಡ್ತಿ ಪ್ರಕ್ರಿಯೆ ಕೈಗೊಳ್ಳಲಾಗಿದೆ.

ADVERTISEMENT

1976ರ ನೇಮಕಾತಿ ಆದೇಶವನ್ನು ಉಲ್ಲಂಘಿಸಿ ಅರಣ್ಯ ಇಲಾಖೆ ಹಲವು ಹೆಚ್ಚುವರಿ ಹುದ್ದೆಗಳನ್ನು ನೇರ ನೇಮಕಾತಿ ನಿಯಮಗಳಿಗೆ ವಿರುದ್ಧವಾಗಿ ಕೆಲ ವರ್ಷಗಳ ಹಿಂದೆ ಭರ್ತಿ ಮಾಡಿಕೊಂಡಿತ್ತು. ನಿಗದಿತ ನಮೂನೆಗಳಲ್ಲಿ ವಿವಿಧ ಹಂತದ ಅಧಿಕಾರಿಗಳ ಜ್ಯೇಷ್ಠತೆಯನ್ನು ಕ್ರಮಬದ್ಧವಾಗಿ ನಿರ್ವಹಿಸದೇ 2018ರಲ್ಲಿ ಬಡ್ತಿ ಪಟ್ಟಿ ಸಿದ್ಧಪಡಿಸಿತ್ತು. ಇಂತಹ ದೋಷಪೂರಿತ ಪಟ್ಟಿಯನ್ನು ಪ್ರಶ್ನಿಸಿ ಹಲವರು ಹೈಕೋರ್ಟ್‌ ಮೊರೆ ಹೋಗಿದ್ದರು. ವಿಚಾರಣೆ ನಡೆಸಿದ್ದ ಹೈಕೋರ್ಟ್‌ ಜ್ಯೇಷ್ಠತಾ ಪಟ್ಟಿಯನ್ನು ರದ್ದು ಮಾಡಿತ್ತು. 

‘ದೋಷ ಪೂರಿತ ಜ್ಯೇಷ್ಠತಾ ಪಟ್ಟಿ ವಿರುದ್ಧದ ಪ್ರಕರಣಗಳ ಕುರಿತು ಇಂದಿಗೂ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿವೆ. ಪ್ರಕರಣ ಇತ್ಯರ್ಥಗೊಳ್ಳು ವವರೆಗೂ ಬಡ್ತಿ ನೀಡದಂತೆ ಹೈಕೋರ್ಟ್‌ ತಡೆಯಾಜ್ಞೆ ನೀಡಿದೆ. ಇದರ ನಡುವೆಯೇ ಅರಣ್ಯ ಇಲಾಖೆ ಕೋರ್ಟ್‌ನಲ್ಲಿ ಪ್ರಕರಣ ದಾಖಲಿಸಿದವರ ಹೆಸರನ್ನು ಮಾತ್ರ ಜ್ಯೇಷ್ಠತಾ ಪಟ್ಟಿಯಲ್ಲಿ ಸೇರಿಸಿದೆ. 2020 ರಲ್ಲಿ ರದ್ದುಗೊಂಡಿದ್ದ ಪಟ್ಟಿಗೆ ಸಣ್ಣಪುಟ್ಟ ಬದಲಾವಣೆ ತಂದು ತರಾತುರಿಯಲ್ಲಿ ಇದೇ ಜೂನ್‌ 29ರಂದು ಪ್ರಕಟಿಸಿದೆ. ಜುಲೈ 29ರಂದು ಇಲಾಖಾ ಬಡ್ತಿ ಸಮಿತಿ ಸಭೆ ನಡೆಸಿ 72 ವಲಯ ಅರಣ್ಯಾಧಿಕಾರಿಗಳಿಗೆ ಎಸಿಎಫ್‌ ಹುದ್ದೆಗೆ ಬಡ್ತಿ ನೀಡಲು ಅನುಮೋದನೆ ನೀಡಿದೆ. ಇದರ ಹಿಂದೆ ದೊಡ್ಡ ಪ್ರಮಾಣದ ಹಣಕಾಸಿನ ವ್ಯವಹಾರ ನಡೆದಿದೆ’ ಎಂದು ಹೆಸರು ಹೇಳಲು ಇಚ್ಛಿಸದ ಅಧಿಕಾರಿಗಳು ಆರೋಪಿಸಿದ್ದಾರೆ.

‘ದೋಷಪೂರಿತ ಜ್ಯೇಷ್ಠತಾ ಪಟ್ಟಿ ಸರಿಪಡಿಸಿ, ಎಲ್ಲ ಅಧಿಕಾರಿಗಳಿಗೆ ನ್ಯಾಯ ದೊರಕಿಸಲು ಅರಣ್ಯ ಇಲಾಖೆ ಕ್ರಮ ಕೈಗೊಂಡಿಲ್ಲ. ಹೈಕೋರ್ಟ್‌ ಆದೇಶದ ಹೊರತಾಗಿಯೂ ಬಡ್ತಿ ನೀಡಲು ಜ್ಯೇಷ್ಠತಾ ಪಟ್ಟಿ ಬಿಡುಗಡೆ ಮಾಡಿದೆ. ನೇರ ನೇಮಕಾತಿ ಮೂಲಕ ವಲಯ ಅರಣ್ಯಾಧಿಕಾರಿ ಹುದ್ದೆ ಪಡೆದವರಿಗೆ ಅನ್ಯಾಯ ಮಾಡಲಾಗುತ್ತಿದೆ. ಕೆಲ ಪ್ರಭಾವಿಗಳು, ಸಂಸದರು, ಶಾಸಕರು ಇಲಾಖೆ ಸಚಿವರಿಗೆ ತಪ್ಪು ಮಾಹಿತಿ ನೀಡಿದ್ದಾರೆ.

ಈ ಸಂಬಂಧ ಜುಲೈ 24ರಂದು ನ್ಯಾಯಾಂಗ ನಿಂದನೆ ಅರ್ಜಿ ದಾಖಲಾಗಿದೆ. ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ಅರಣ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ಕೋರ್ಟ್‌ ನೋಟಿಸ್‌ ಜಾರಿ ಮಾಡಿದೆ. ಆದರೂ, 29ರಂದು ಡಿಪಿಸಿ ಸಭೆ ನಡೆಸಲಾಗಿದೆ’ ಎಂದು ಅಧಿಕಾರಿಗಳು
ದೂರಿದರು.

ಕಲ್ಯಾಣ ಕರ್ನಾಟಕ ದ ಪ್ರಕರಣ ಹೊರತುಪಡಿಸಿ, ಉಳಿದ ಹುದ್ದೆಗಳಿಗೆ ಕೋರ್ಟ್‌ ಆದೇಶ, ಸರ್ಕಾರದ ನಿಯಮದಂತೆಯೇ ಬಡ್ತಿ ನೀಡಲಾಗುತ್ತಿದೆ ಎನ್‌. ಮಂಜುನಾಥ್ ಪ್ರಸಾದ್ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ,
ಅರಣ್ಯ ಇಲಾಖೆ
ಹೆಸರು ಸೇರ್ಪಡೆಗೆ ‘ಕಣ್ತಪ್ಪಿನ’ ಅಸ್ತ್ರ
ಅರಣ್ಯ ಇಲಾಖೆ ವಲಯ ಅರಣ್ಯಾಧಿಕಾರಿಗಳ ಜ್ಯೇಷ್ಠತಾ ಪಟ್ಟಿ ಪ್ರಕಟಿಸಿದ ನಂತರವೂ ತಿದ್ದುಪಡಿ ಆದೇಶದ ಮೂಲಕ ಮತ್ತೆ ಕೆಲವರನ್ನು ಸೇರ್ಪಡೆ ಮಾಡಿದೆ. ಹೀಗೆ ಸೇರ್ಪಡೆ ಮಾಡಲು ಹೊರಡಿಸಿದ ಆದೇಶಗಳಲ್ಲಿ ಕಣ್ತಪ್ಪಿನಿಂದ ಬಿಟ್ಟುಹೋದ ಕಾರಣ ನೀಡಲಾಗಿದೆ. ಅಲ್ಲದೇ, ಬಡ್ತಿ ಪ್ರಕ್ರಿಯೆಯೂ ಕೋರ್ಟ್‌ ಅಂತಿಮ ಆದೇಶಕ್ಕೆ ಒಳಪಟ್ಟಿರುತ್ತದೆ ಎಂದು ಷರಾ ಸೇರಿಸಲಾಗಿದೆ. ತಮಗೆ ಬೇಕಾದವರು ಬಡ್ತಿಯಿಂದ ಪಡೆದ ಸ್ಥಾನವನ್ನು ಕೋರ್ಟ್ ಪ್ರಕರಣಗಳು ಇತ್ಯರ್ಥವಾಗುವರೆಗೆ ಅನುಭವಿಸಲು ಇಲಾಖೆಯೇ ಅವಕಾಶ ಮಾಡಿಕೊಡುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.