ಬೆಂಗಳೂರು: ‘ರಾಜ್ಯದಾದ್ಯಂತ ಕಾನೂನುಬಾಹಿರವಾಗಿ ಟ್ಯೂಷನ್, ಕೋಚಿಂಗ್ ತರಗತಿಗಳು ನಡೆಯುತ್ತಿದ್ದು, ಈ ಹಾವಳಿ ತಡೆಗಟ್ಟಬೇಕು’ ಎಂದು ಆಗ್ರಹಿಸಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ನೋಂದಾಯಿತ ಅನುದಾನರಹಿತ ಖಾಸಗಿ ಶಾಲೆಗಳ ಆಡಳಿತ ಸಂಘ (ರುಪ್ಸ) ಮನವಿ ಸಲ್ಲಿಸಿದೆ.
‘ಕರ್ನಾಟಕ ಶಿಕ್ಷಣ ಕಾಯ್ದೆ 1983ರ ನಿಯಮ 4 ಮತ್ತು ಉಚಿತ ಮತ್ತು ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆ– 2009 (ಆರ್‌ಟಿಇ) ನಿಯಮ 28ರ ಅನ್ವಯ ಮಾನ್ಯತೆ ಪಡೆದ ಯಾವುದೇ ಶಾಲಾ ಕಾಲೇಜು ಕೊಠಡಿಗಳಲ್ಲಿ ಅಥವಾ ಆ ಶಾಲೆಗಳ ಸಿಬ್ಬಂದಿ ಟ್ಯೂಷನ್ ತರಗತಿ ನಡೆಸುವಂತೆ ಇಲ್ಲ. ಒಂದೊಮ್ಮೆ ನಡೆಸಬೇಕೆಂದರೆ ಶಿಕ್ಷಣ ಇಲಾಖೆಯಿಂದ ಮಾನ್ಯತೆ ಪಡೆಯಬೇಕು. ಅಲ್ಲದೆ, ಎಲ್ಲ ನಿಯಮಗಳನ್ನು ಅಂದರೆ ನಿವೇಶನ, ಕಟ್ಟಡ, ಮಕ್ಕಳ ಸುರಕ್ಷತೆಯಂಥ ವಿಚಾರಗಳಲ್ಲಿ ಹೊಸ ಶಾಲೆಗಳಿಗಿರುವ ಮಾನದಂಡಗಳನ್ನು ಅನುಸರಿಸಬೇಕು. ಆದರೆ, ರಾಜ್ಯದಾದ್ಯಂತ ಸಾವಿರಾರು ಟ್ಯೂಷನ್ ಕೇಂದ್ರಗಳು, ಕೋಚಿಂಗ್ ಸೆಂಟರ್‌ಗಳು ಸರ್ಕಾರದಿಂದ ಮಾನ್ಯತೆ ಪಡೆಯದೆ, ಶಿಕ್ಷಣ ಇಲಾಖೆಯ ನಿಯಮಗಳನ್ನೂ ಪಾಲಿಸದೆ ರಾಜಾರೋಷವಾಗಿ ತಲೆ ಎತ್ತಿವೆ’ ಎಂದು ರುಪ್ಸ ಅಧ್ಯಕ್ಷ ಲೋಕೇಶ್ ತಾಳಿಕಟ್ಟೆ ಆರೋಪಿಸಿದ್ದಾರೆ.
‘ಶಾಲಾ ಕಾಲೇಜುಗಳ ಶುಲ್ಕಕ್ಕಿಂತ ಟ್ಯೂಷನ್ ಶುಲ್ಕವೇ ಹೆಚ್ಚು ಇದೆ. ಸಾಮಾನ್ಯ ಸೌಲಭ್ಯಗಳಾದ ಪೀಠೋಪಕರಣ, ಸ್ವಚ್ಛತೆ, ಶುದ್ಧ ಕುಡಿಯುವ ನೀರಿನ ವ್ಯವಸ್ಥೆ, ಆಟ, ಸಾಂಸ್ಕೃತಿಕ ಚಟುವಟಿಕೆಯನ್ನು ಒದಗಿಸದೆ, ಬೆಳಿಗ್ಗೆ 7ಗಂಟೆಯಿಂದ ಸಂಜೆವರೆಗೂ ಮಕ್ಕಳನ್ನು ಹಿಡಿದಿಟ್ಟು ಶಿಕ್ಷಣದ ಹೆಸರಲ್ಲಿ ಮೋಸ ಮಾಡುತ್ತಿವೆ. ಇವುಗಳನ್ನು ನಿಯಂತ್ರಿಸಬೇಕಾದ ಶಿಕ್ಷಣ ಇಲಾಖೆ ಅಧಿಕಾರಿಗಳು ಕೆಲವು ಪ್ರತಿಷ್ಠಿತ ಟ್ಯೂಷನ್ ಕೇಂದ್ರಗಳ ಆಮಿಷಕ್ಕೆ ಮಣಿದು ಮೌನವಾಗಿದ್ದಾರೆ‘ ಎಂದು ಅವರು ದೂರಿದ್ದಾರೆ.
‘ಕಾನೂನುಬಾಹಿರ ಟ್ಯೂಷನ್, ಕೋಚಿಂಗ್ ಸೆಂಟರ್‌ಗಳ ನಿಯಂತ್ರಣಕ್ಕರ ನಿಯಮಗಳಿರುವುದೇ ಜೇಬು ತುಂಬಿಸಿಕೊಳ್ಳಲೆಂಬಂತೆ ಅಧಿಕಾರಿಗಳು ವರ್ತಿಸುತ್ತಿದ್ದಾರೆ. ಟ್ಯೂಷನ್ ಶುಲ್ಕ ನೀಡಲಾಗದ ಬಡ ವಿದ್ಯಾರ್ಥಿಗಳು ತಾವು ಸೇರಿದ ಶಾಲಾ-ಕಾಲೇಜುಗಳಲ್ಲಿ ಸರಿಯಾಗಿ ಪಾಠ ಪ್ರವಚನ ನಡೆಯದೆ, ಮೂಕವೇದನೆ ಅನುಭವಿಸುತ್ತಿದ್ದಾರೆ’ ಎಂದಿದ್ದಾರೆ.
‘ಪ್ರಮುಖ ಶಿಕ್ಷಣ ಸಂಸ್ಥೆಗಳೂ ಪಿಯುಸಿ ಕಾಲೇಜುಗಳ ಆವರಣದಲ್ಲಿ ಬಹಿರಂಗವಾಗಿಯೇ ಟ್ಯೂಷನ್ ತರಗತಿಗಳನ್ನು ನಡೆಸುತ್ತಿವೆ. ಅಲ್ಲಿ ಕಾರ್ಯನಿರ್ವಹಿಸುವ ಶಿಕ್ಷಕರನ್ನು ಬಳಸಿಕೊಂಡು ಸರ್ಕಾರಕ್ಕೂ ತೆರಿಗೆ ಕಟ್ಟದೆ, ನೀಟ್, ಜೆಇಇ, ಸಿಇಟಿ ಹೆಸರಿನಲ್ಲಿ ಲಕ್ಷಾಂತರ ಶುಲ್ಕ ವಸೂಲಿ ಮಾಡುತ್ತಿವೆ. ಉತ್ತರ ಕರ್ನಾಟಕದಲ್ಲಿ ಸೈನಿಕ ಶಾಲೆ, ನವೋದಯ ಶಾಲೆ, ಮೊರಾರ್ಜಿ ಶಾಲೆಗಳ ಪ್ರವೇಶ ಪರೀಕ್ಷೆಗೆಂದು ಶ್ರೀಮಂತ ವಿದ್ಯಾರ್ಥಿಗಳು ಸರ್ಕಾರಿ ಶಾಲೆಗಳಲ್ಲಿ ನೋಂದಾಯಿಸಿಕೊಂಡು, ಅನೇಕ ಖಾಸಗಿ ಶಾಲೆಗಳಲ್ಲಿ ನಡೆಸುವ ವಸತಿ ಟ್ಯೂಷನ್ ತರಗತಿಗಳನ್ನು ಪಡೆಯುತ್ತಿದ್ದಾರೆ. ಹೀಗೆಯೇ ಮುಂದುವರೆದರೆ ಐಐಟಿ, ವೈದ್ಯಕೀಯ, ಎಂಜಿನಿಯರಿಂಗ್ ಕೋರ್ಸ್‌ಗಳಿಗೆ ಹಣವಿಲ್ಲದ ಬಡ ವಿದ್ಯಾರ್ಥಿಗಳು ಸೇರಲು ಸಾಧ್ಯವೇ? ಇದರಿಂದ ಪ್ರತಿಭಾವಂತ ಬಡ ವಿದ್ಯಾರ್ಥಿಗಳಿಗೆ ಮೋಸ ಆಗುವುದಿಲ್ಲವೇ? ಆದ್ದರಿಂದ, ಕಾನೂನುಬಾಹಿರ ಟ್ಯೂಷನ್ ತರಗತಿಗಳ ವಿರುದ್ಧ ಕ್ರಮ ಜರುಗಿಸಲುಶಿಕ್ಷಣ ಸಚಿವರ ಮೂಲಕ ಇಲಾಖೆಯ ಉನ್ನತ ಅಧಿಕಾರಿಗಳಿಗೆ ನಿರ್ದೇಶನ ನೀಡಬೇಕು’ ಎಂದೂ ಮನವಿಯಲ್ಲಿ ಅವರು ಆಗ್ರಹಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.