ADVERTISEMENT

ಭಾರತೀಯರೆಲ್ಲರೂ ಸುರಕ್ಷಿತವಾಗಿ ಮರಳುವ ವಿಶ್ವಾಸವಿದೆ: ಸಿಎಂ ಬೊಮ್ಮಾಯಿ

​ಪ್ರಜಾವಾಣಿ ವಾರ್ತೆ
Published 26 ಫೆಬ್ರುವರಿ 2022, 10:55 IST
Last Updated 26 ಫೆಬ್ರುವರಿ 2022, 10:55 IST
ಬಸವರಾಜ ಬೊಮ್ಮಾಯಿ
ಬಸವರಾಜ ಬೊಮ್ಮಾಯಿ   

ಬೆಂಗಳೂರು: ರಷ್ಯಾದೊಂದಿಗೆ ಯುದ್ಧ ಎದುರಿಸುತ್ತಿರುವ ಉಕ್ರೇನ್‌ ದೇಶದಲ್ಲಿ ಸಿಲುಕಿರುವ ಎಲ್ಲ ಭಾರತೀಯರೂ ಸುರಕ್ಷಿತವಾಗಿ ದೇಶಕ್ಕೆ ಮರಳುವ ವಿಶ್ವಾಸ ತಮಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಸುದ್ದಿಗಾರರ ಜತೆ ಶನಿವಾರ ಮಾತನಾಡಿದ ಅವರು, ‘ಭಾರತೀಯರು ಸುರಕ್ಷಿತವಾಗಿ ದೇಶಕ್ಕೆ ಮರಳಲು ಅವಕಾಶ ನೀಡುವಂತೆ ಪ್ರಧಾನಿ ನರೇಂದ್ರ ಮೋದಿಯವರು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಅವರಿಗೆ ಕೋರಿಕೆ ಸಲ್ಲಿಸಿದ್ದರು. ಅದನ್ನು ರಷ್ಯಾ ಕೂಡ ಒಪ್ಪಿಕೊಂಡಿದೆ. ಹೀಗಾಗಿ ಉಕ್ರೇನ್‌ನಲ್ಲಿರುವ ಭಾರತೀಯರಿಗೆ ಯಾವುದೇ ರೀತಿಯ ತೊಂದರೆ ಆಗುವುದಿಲ್ಲ ಎಂಬ ಭಾವನೆ ಇದೆ’ ಎಂದರು.

ಉಕ್ರೇನ್‌ನಲ್ಲಿರುವ ಕನ್ನಡಿಗರು ನೆರವು ಕೋರಿ ರಾಜ್ಯ ಸರ್ಕಾರವನ್ನು ಸಂಪರ್ಕಿಸುತ್ತಿದ್ದಾರೆ. ಅವರ ಮಾಹಿತಿಯನ್ನು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಜತೆ ಹಂಚಿಕೊಳ್ಳಲಾಗಿದೆ. ರೊಮೇನಿಯಾ ಮತ್ತು ಇತರ ರಾಷ್ಟ್ರಗಳ ಗಡಿಭಾಗಳಲ್ಲಿ ಭಾರತೀಯರನ್ನು ಬರಮಾಡಿಕೊಂಡು ದೇಶಕ್ಕೆ ಕರೆತರಲಾಗುತ್ತಿದೆ. ಇದಕ್ಕಾಗಿ ಹಲವು ತಂಡಗಳು ಕೆಲಸ ಮಾಡುತ್ತಿವೆ ಎಂದು ಹೇಳಿದರು.

ADVERTISEMENT

‘ಕೆಲವರ ಜತೆ ನಾನು ದೂರವಾಣಿ ಮೂಲಕ ಮಾತನಾಡಿದ್ದೇನೆ. ಅಲ್ಲಿ ಸಿಲುಕಿರುವವರನ್ನು ಮೆಟ್ರೊ ಸುರಂಗ ಮಾರ್ಗಗಳಲ್ಲಿ ಇರಿಸಲಾಗಿದೆ. ಪಶ್ಚಿಮ ಭಾಗದಲ್ಲಿರುವವರು ಬೇಗ ದೇಶಕ್ಕೆ ಮರಳಲು ಸಾಧ್ಯ. ಪೂರ್ವ ಭಾಗದಲ್ಲಿರುವವರಿಗೆ ಸ್ವಲ್ಪ ಸಮಸ್ಯೆಗಳಿವೆ’ ಎಂದರು.

ರಷ್ಯನ್‌ ಭಾಷೆ ತಿಳಿದಿರುವ ರಾಜತಾಂತ್ರಿಕ ಸಿಬ್ಬಂದಿಯನ್ನು ಕೇಂದ್ರ ಸರ್ಕಾರ ಉಕ್ರೇನ್‌ಗೆ ಕಳುಹಿಸಿದೆ. ಅವರು ಭಾರತೀಯರು ಸುರಕ್ಷಿತವಾಗಿ ಉಕ್ರೇನ್‌ನಿಂದ ಹೊರಬರಲು ನೆರವು ನೀಡಲಿದ್ದಾರೆ ಎಂದು ಹೇಳಿದರು.

ರಾಜಕೀಯಕ್ಕಾಗಿ ಪಾದಯಾತ್ರೆ: ಮೇಕೆದಾಟು ಯೋಜನೆ ಅನುಷ್ಠಾನಕ್ಕೆ ಆಗ್ರಹಿಸಿ ಕಾಂಗ್ರೆಸ್‌ ಮತ್ತೆ ಪಾದಯಾತ್ರೆ ನಡೆಸುತ್ತಿರುವ ಕುರಿತು ಪ್ರತಿಕ್ರಿಯಿಸಿದ ಮುಖ್ಯಮಂತ್ರಿ, ‘ಕಾಂಗ್ರೆಸ್‌ನವರು ರಾಜಕೀಯಕ್ಕಾಗಿ ಪಾದಯಾತ್ರೆ ಮಾಡುತ್ತಿದ್ದಾರೆ. ವಿಧಾನಮಂಡಲ ಅಧಿವೇಶನವನ್ನೂ ರಾಜಕೀಯಕ್ಕೆ ಬಳಸಿಕೊಂಡರು. ರಾಜಕೀಯವೇ ಅವರಿಗೆ ಮುಖ್ಯವಾಗಿ. ಎಲ್ಲವನ್ನೂ ಜನರು ಗಮನಿಸುತ್ತಿದ್ದಾರೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.