ಶಿವಮೊಗ್ಗ: ದೀಪಾವಳಿ ಹಬ್ಬದ ದಿನ ಮನೆಗೆ ಹೊಸ ವಾಹನ ಕೊಂಡೊಯ್ಯುವ ಹಲವರ ಕನಸು ನನಸಾಗಲು ರಷ್ಯಾ–ಉಕ್ರೇನ್ ಯುದ್ಧದ ಕರಿನೆರಳು ಅಡ್ಡಿಯಾಗಿದೆ.
ವಾಹನಗಳಲ್ಲಿ ಬಳಕೆಯಾಗುವ ಸೆಮಿಕಂಡಕ್ಟರ್ ಸೇರಿದಂತೆ ಬೇರೆ ಬೇರೆ ಕಚ್ಚಾ ವಸ್ತುಗಳ ಪೂರೈಕೆ ಯುದ್ಧದ ಕಾರಣದಿಂದ ವ್ಯತ್ಯಯವಾಗಿದೆ. ಇದು ಆಟೊಮೊಬೈಲ್ ಕ್ಷೇತ್ರದಲ್ಲಿ ಬೇಡಿಕೆ ಹಾಗೂ ಪೂರೈಕೆ ನಡುವಿನ ಸಮತೋಲನಕ್ಕೆ ಅಡ್ಡಿಯಾಗಿದೆ.
ಹಬ್ಬದ ದಿನ ಕನಸಿನ ಬೈಕ್, ಕಾರು ಖರೀದಿಸಲು ಶೋ ರೂಂಗಳಿಗೆ ಹೋದರೆ ಹೆಚ್ಚಿನ ಕಡೆ ಬುಕಿಂಗ್ ಮಾತ್ರ ಮಾಡಿಕೊಳ್ಳಲಾಗುತ್ತಿದೆ. ವಾಹನ ಮನೆಗೆ ಬರಲು ಎರಡರಿಂದ ಮೂರು ತಿಂಗಳ ಕಾಲಾವಕಾಶ ಆಗುತ್ತಿದೆ. ಶೋ ರೂಂನಲ್ಲಿ ಲಭ್ಯವಿರುವ ವಾಹನ ಖರೀದಿಗೆ ಮನಸ್ಸು ಒಪ್ಪುತ್ತಿಲ್ಲ.
ಬೇಕಾದ ವಾಹನ ತಕ್ಷಣ ಸಿಗುತ್ತಿಲ್ಲ. ಇದು ಹಬ್ಬದ ದಿನ ಹೊಸ ವಾಹನ ಮನೆಗೆ ತರಲು ಹೋಗಿದ್ದ ಬಹಳಷ್ಟು ಜನರಲ್ಲಿ ನಿರಾಶೆ ಮೂಡಿಸಿದೆ. ಈ ಮೊದಲೇ ಬುಕಿಂಗ್ ಮಾಡಿದವರು ಹಬ್ಬದ ದಿನ ವಾಹನಗಳ ಪಡೆದಿದ್ದಾರೆ.
‘ಕಳೆದ ಜನವರಿಯಿಂದ ಈ ಸಮಸ್ಯೆ ಇದೆ. ಬೇಡಿಕೆಯಷ್ಟು ಪೂರೈಕೆಗೆ ವಾಹನ ಉತ್ಪಾದನಾ ಸಂಸ್ಥೆಗಳಿಂದ ಆಗುತ್ತಿಲ್ಲ. ಶಿವಮೊಗ್ಗದಲ್ಲೇ ಕಾರು ಡೀಲರ್‌ಗಳ ಬಳಿ 200 ರಿಂದ 250ರಷ್ಟು ಬುಕಿಂಗ್ ಇವೆ’ ಎಂದು ಶಿವಮೊಗ್ಗ ಡೀಲರ್ಸ್ ಅಸೋಸಿಯೇಶನ್ ಅಧ್ಯಕ್ಷ ಎ. ಪ್ರಭಾಕರ ರಾವ್ ಹೇಳುತ್ತಾರೆ.
‘ವಾಹನಗಳ ಉತ್ಪಾದನೆಯಲ್ಲಿ ಮಹತ್ವದ್ದಾಗಿರುವ ಕಚ್ಚಾ ವಸ್ತುಗಳಿಗೆ ನಾವು ರಷ್ಯಾ, ಉಕ್ರೇನ್ ದೇಶಗಳನ್ನು ಅವಲಂಬಿಸಿದ್ದೇವೆ. ಅಲ್ಲಿ ಯುದ್ಧ ನಡೆಯುತ್ತಿರು ವುದರಿಂದ ಆಮದು ಕಷ್ಟವಾಗಿದೆ. ಜೊತೆಗೆ ಚೀನಾದಿಂದ ಬಿಡಿಭಾಗಗಳ ಪೂರೈಕೆಯೂ ಕಡಿತಗೊಂಡಿದೆ. ಇದು ಆಟೊಮೊಬೈಲ್ ಉದ್ಯಮದ ಮೇಲೆ ಪರಿಣಾಮ ಬೀರಿದೆ’ ಎನ್ನುತ್ತಾರೆ.
ಹೀಗಾಗಿ, ದೀಪಾವಳಿಯಲ್ಲಿ ಬಹಳಷ್ಟು ಕಡೆ ಬುಕಿಂಗ್ ಮಾಡಿದ ದಿನವೇ ವಾಹನ ಡಿಲೆವರಿ ಕೊಡಲು ಸಾಧ್ಯವಾಗುತ್ತಿಲ್ಲ. ದಸರಾದಲ್ಲೂ ಇದೇ ಪರಿಸ್ಥಿತಿ ಆಗಿತ್ತು ಎಂದು ಪ್ರಭಾಕರ ರಾವ್
ಹೇಳುತ್ತಾರೆ.
ವಹಿವಾಟಿಗೆ ತೊಂದರೆ: ಹಣಕಾಸು ವರ್ಷದಲ್ಲಿ ಶೇ 30ರಷ್ಟು ವಾಹನಗಳ ವಹಿವಾಟು ದಸರಾ ಹಾಗೂ ದೀಪಾವಳಿ ಹಬ್ಬದ ವೇಳೆಯೇ ಆಗುತ್ತದೆ. ಆದರೆ ಈ ಬಾರಿ ಆಗಿಲ್ಲ. ಪ್ರತಿ ವರ್ಷ ದೀಪಾವಳಿ ಹಬ್ಬದಲ್ಲಿ ನಾವು 500ರಷ್ಟು ಬೈಕ್‌ಗಳನ್ನು ಮಾರಾಟ ಮಾಡುತ್ತಿದ್ದೆವು. ಈ ವರ್ಷ 200 ಬೈಕ್‌ಗಳ ಮಾರಾಟ ಮಾತ್ರ ಸಾಧ್ಯವಾಗಿದೆ ಎಂದು ಸ್ವತಃ ಬೈಕ್ ಶೋರೂಂ ಮಾಲೀಕರೂ ಆಗಿರುವ ಪ್ರಭಾಕರ ರಾವ್ ಮಾಹಿತಿ ನೀಡುತ್ತಾರೆ.
‘ಹಬ್ಬದ ದಿನ ವಾಹನ ಕೊಂಡರೆ ಶುಭವಾಗಲಿದೆ. ಜೊತೆಗೆ ಈ ಅವಧಿಯಲ್ಲಿ ಬೆಲೆಯಲ್ಲಿ ಡಿಸ್ಕೌಂಟ್, ಗ್ರಾಹಕರಿಗೆ ಆಕರ್ಷಕ ಕೊಡುಗೆಗಳು ಇರುತ್ತವೆ. ಹೀಗಾಗಿ ದೀಪಾವಳಿ ದಿನ ಹೊಸ ಕಾರು ಕೊಂಡೊಯ್ದು ಪೂಜೆ ಮಾಡುವ ಯೋಜನೆ ಇತ್ತು. ಆದರೆ ಅದು ಈಡೇರಲಿಲ್ಲ’ ಎಂದು ಇಲ್ಲಿನ ಗಾಡಿಕೊಪ್ಪ ರಸ್ತೆಯ ನಿವಾಸಿ, ಬ್ಯಾಂಕ್ ಉದ್ಯೋಗಿ ಬಿ.ಕೆ. ರವೀಂದ್ರ
ಹೇಳಿದರು. ಆದರೆ ಹಬ್ಬದ ದಿನವೇ ಬುಕಿಂಗ್ ಮಾಡಿದ ಖುಷಿ ಇದೆ. ಜನವರಿಗೆ ಕಾರು ಡಿಲೆವರಿಗೆ ಸಿಗಲಿದೆ ಎಂದರು.
ಸೆಪ್ಟೆಂಬರ್‌ನಲ್ಲಿ ನೋಂದಣಿ ಅಲ್ಪ ಇಳಿಕೆ..
ದಸರಾ ಹಬ್ಬದ ಸಂದರ್ಭದಲ್ಲಿ ಕಳೆದ ವರ್ಷ (2021) ಸೆಪ್ಟೆಂಬರ್‌ನಲ್ಲಿ ಶಿವಮೊಗ್ಗ ಪ್ರಾದೇಶಿಕ ಸಾರಿಗೆ ಇಲಾಖೆ ಕಚೇರಿಯಲ್ಲಿ 2,298 ವಾಹನಗಳು ನೋಂದಣಿ ಆಗಿವೆ. ಈ ವರ್ಷ ಸೆಪ್ಟೆಂಬರ್ ತಿಂಗಳಲ್ಲಿ 2,170 ವಾಹನಗಳು ನೋಂದಣಿಯಾಗಿವೆ. ಕಳೆದ ವರ್ಷ ಇದೇ ಅವಧಿಯಲ್ಲಿ 722 ಕಾರು, 1080 ದ್ವಿಚಕ್ರ ವಾಹನ, 110 ಟ್ರ್ಯಾಕ್ಟರ್ ನೋಂದಣಿ ಆಗಿದ್ದವು. ಈ ವರ್ಷ 687 ಕಾರು ಹಾಗೂ 978 ದ್ವಿಚಕ್ರ ವಾಹನ ಹಾಗೂ 75 ಟ್ರ್ಯಾಕ್ಟರ್ ನೋಂದಣಿ ಆಗಿವೆ.
ಅಡಿಕೆಗೆ ಎಲೆ ಚುಕ್ಕಿ ರೋಗ, ಅತಿಯಾದ ಮಳೆಯಿಂದ ಕೃಷಿ ಚಟುವಟಿಕೆಗೆ ಆಗಿರುವ ಹಿನ್ನಡೆಯಿಂದಲೂ ಈ ಬಾರಿ ಹಬ್ಬದ ವೇಳೆ ಹೊಸ ವಾಹನಗಳ ಖರೀದಿಯ ಬುಕಿಂಗ್ ಮೇಲೆ ಪರಿಣಾಮ ಬೀರಿದೆ. ಹಬ್ಬದ ದಿನ ಹೊಸ ವಾಹನ ಕೊಂಡೊಯ್ಯುವ ಸೆಂಟಿಮೆಂಟ್ ಕೂಡ ಈ ಬಾರಿ ತಗ್ಗಿದೆ ಎಂದು ಎ. ಪ್ರಭಾಕರ್ ರಾವ್ ಹೇಳುತ್ತಾರೆ.
ಮೈಸೂರಿನಲ್ಲಿ ಉತ್ಪಾದನೆಗೆ ಸಿದ್ಧತೆ..
ಸೆಮಿ ಕಂಡಕ್ಟರ್ ಸ್ಥಳೀಯವಾಗಿಯೇ ಉತ್ಪಾದಿಸಲು ಸರ್ಕಾರ ಮೈಸೂರಿನಲ್ಲಿ ಕಾರ್ಖಾನೆ ಆರಂಭಿಸಲು ಅನುಮತಿ ನೀಡಿದೆ. ಅದರ ಕಾಮಗಾರಿ ಆರಂಭವಾಗಿದ್ದು, 2023ರ ಡಿಸೆಂಬರ್ ವೇಳೆಗೆ ಅದು ಕಾರ್ಯಾರಂಭ ಮಾಡಬಹುದು. ಆಗ ಈ ಸಮಸ್ಯೆ ಪರಿಹಾರ ಆಗಬಹುದು ಎಂದು ಪ್ರಭಾಕರ ರಾವ್ ತಿಳಿಸಿದರು.
ಏನಿದು ಸೆಮಿಕಂಡಕ್ಟರ್..
ವಾಹಕಗಳು ಮತ್ತು ಅವಾಹಕಗಳ ನಡುವಣ ವಿದ್ಯುತ್ ವಾಹಕತೆ ಹೊಂದಿರುವ ಘನ ವಸ್ತುಗಳೇ ಅರೆವಾಹಕಗಳು (ಸೆಮಿ ಕಂಡಕ್ಟರ್). ಇವು ವಾಹಕ ಮತ್ತು ಅವಾಹಕಗಳೆರಡರ ಗುಣಗಳ ಸಮ್ಮಿಶ್ರಣವಾಗಿವೆ. ಸಿಲಿಕಾನ್ ಮತ್ತು ಜರ್ಮೇನಿಯಂ ಧಾತುಗಳನ್ನು ಬಳಸಿ ಸಿದ್ಧಪಡಿಸುವ ಸೆಮಿಕಂಡಕ್ಟರ್‌ಗಳನ್ನು ಕಾರು, ಬೈಕ್ ಸೇರಿದಂತೆ ವಾಹನಗಳ ಸ್ವಯಂ ಚಾಲಿತ ವ್ಯವಸ್ಥೆಯಲ್ಲಿ ಪ್ರಮುಖವಾಗಿ ಬಳಸಲಾಗುತ್ತದೆ.
.......
ಈಗ ನೋಂದಣಿ ಪ್ರಕ್ರಿಯೆ ನೇರವಾಗಿ ಡೀಲರ್‌ಗಳೇ ಆನ್‌ಲೈನ್ ಮೂಲಕ ಮಾಡಲು ಸಾಧ್ಯವಿರುವುದರಿಂದ ಹಬ್ಬದ ಸಂದರ್ಭದಲ್ಲಿ ಕಚೇರಿಯಲ್ಲಿ ವಾಹನಗಳ ನೋಂದಣಿಗೆ ನೂಕುನುಗ್ಗಲು ಆಗಿಲ್ಲ.
-ಗಂಗಾಧರ, ಆರ್‌ಟಿಒ, ಶಿವಮೊಗ್ಗ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.