ADVERTISEMENT

ಪ್ರಮಾಣ ವಚನ ಸ್ವೀಕರಿಸದ 16 ಶಾಸಕರು; ಹಂಗಾಮಿ ಸಭಾಧ್ಯಕ್ಷ ಆರ್‌.ವಿ.ದೇಶಪಾಂಡೆ ಬೇಸರ

​ಪ್ರಜಾವಾಣಿ ವಾರ್ತೆ
Published 23 ಮೇ 2023, 10:56 IST
Last Updated 23 ಮೇ 2023, 10:56 IST
ಆರ್‌.ವಿ.ದೇಶಪಾಂಡೆ
ಆರ್‌.ವಿ.ದೇಶಪಾಂಡೆ   

ಬೆಂಗಳೂರು: ವಿಧಾನಸಭೆಯ ನೂತನ ಶಾಸಕರ ಪ್ರಮಾಣ ವಚನ ಸ್ವೀಕಾರದ ಎರಡನೇ ದಿನವಾದ ಮಂಗಳವಾರ ಪ್ರಮಾಣ ಸ್ವೀಕರಿಸಬೇಕಾದ 43 ಮಂದಿಯಲ್ಲಿ 16 ಶಾಸಕರು ಹಾಜರಾಗಲೇ ಇಲ್ಲ. ಕಲಾಪದಲ್ಲಿ ಭಾಗವಹಿಸಿದವರ ಸಂಖ್ಯೆಯೂ ಕಡಿಮೆ ಇತ್ತು.

ಜೆಡಿಎಸ್‌ ನಾಯಕರಾದ ಎಚ್‌.ಡಿ.ಕುಮಾರಸ್ವಾಮಿ ಮತ್ತು ಎಚ್‌.ಡಿ.ರೇವಣ್ಣ ಅವರ ಗೈರು ಎರಡನೇ ದಿನವೂ ಎದ್ದು ಕಾಣುತ್ತಿತ್ತು. ಕಾರ್ಯದರ್ಶಿಯವರು ಗೈರಾದವರ ಹೆಸರುಗಳನ್ನು ಪದೇ ಪದೇ ಕರೆದರು. ಬಳಿಕ ಕಲಾಪ ಮುಂದೂಡಲು ಹಂಗಾಮಿ ಸಭಾಧ್ಯಕ್ಷರಿಗೆ ಸಲಹೆ ನೀಡಿದರು.

ಈ ಬಗ್ಗೆ ಬೇಸರ ವ್ಯಕ್ತಪಡಿಸಿದ ಹಂಗಾಮಿ ಸಭಾಧ್ಯಕ್ಷ ಆರ್‌.ವಿ.ದೇಶಪಾಂಡೆ, ಈವರೆಗೆ 16 ಶಾಸಕರು ಪ್ರಮಾಣ ಸ್ವೀಕರಿಸಿಲ್ಲ. ನಾಳೆ (ಬುಧವಾರ) ಸಭಾಧ್ಯಕ್ಷರ ಚುನಾವಣೆ ಇದೆ. ಇವತ್ತು ಸಂಜೆಯ ಒಳಗೆ ಪ್ರಮಾಣ ಸ್ವೀಕರಿಸದಿದ್ದರೆ, ಚುನಾವಣೆ ಪ್ರಕ್ರಿಯೆಯಲ್ಲಿ ಭಾಗವಹಿಸಲು ಅವಕಾಶ ನೀಡುವುದಿಲ್ಲ ಎಂದು ಹೇಳಿದರು.

ADVERTISEMENT

ಪ್ರಮಾಣ ಸ್ವೀಕರಿಸಿದ ಹರೀಶ್‌ ಪೂಂಜಾ ಶ್ರೀರಾಮಚಂದ್ರನ ಹೆಸರಿನಲ್ಲಿ, ಲಕ್ಷ್ಮಿಹೆಬ್ಬಾಳ್ಕರ್‌ ಅವರು ಬಸವಣ್ಣ, ಮಹೇಶ್‌ ಟೆಂಗಿನಕಾಯಿ– ಮಹಾಕೂಟೇಶ್ವರ, ಮಾನಪ್ಪ ಡಿ ವಜ್ಜಲ್– ವೀರನಾಗಮ್ಮ, ರಿಜ್ವಾನ್ ಅರ್ಷದ್‌– ಸಂವಿಧಾನ, ಶರಣು ಸಲಗರ ಅವರು ಬಸವಣ್ಣ ಮತ್ತು ಛತ್ರಪತಿ ಶಿವಾಜಿ, ಎನ್‌.ಎಚ್‌. ಕೋನರಡ್ಡಿ– ರೈತರು, ಬಿ.ವೈ.ವಿಜಯೇಂದ್ರ– ಹುಚ್ಚೂರಾಯಸ್ವಾಮಿ, ಯಶವಂತ ಸುವರ್ಣ ಅವರು ಉಡುಪಿ ಶ್ರೀಕೃಷ್ಣ, ಗೋಮಾತೆ ಮತ್ತು ವಿಭುದೇಶ ಸ್ವಾಮೀಜಿ ಹೆಸರಿನಲ್ಲಿ ಪ್ರಮಾಣ ಸ್ವೀಕರಿಸಿದರು.

ಹಂಗಾಮಿ ಸಭಾಧ್ಯಕ್ಷರ ಸೂಚನೆ ಮೇರೆಗೆ ಮಂಗಳವಾರ ಸಂಜೆಯೊಳಗೆ ಸಭಾಧ್ಯಕ್ಷರ ಕೊಠಡಿಯಲ್ಲಿ 7 ಶಾಸಕರು ಪ್ರಮಾಣ ಸ್ವೀಕರಿಸಿದರು. ಉಳಿದ 9 ಶಾಸಕರು ಬುಧವಾರ ಸಭಾಧ್ಯಕ್ಷರ ಚುನಾವಣೆ ಪ್ರಕ್ರಿಯೆ ಮೊದಲೇ ಪ್ರಮಾಣ ಸ್ವೀಕರಿಸಲು ಸೂಚನೆ ನೀಡಲಾಗಿದೆ.

ಒಳ್ಳೆ ಸಮಯಕ್ಕಾಗಿ ಕಾದ ಕೋನರಡ್ಡಿ: ನವಲಗುಂದ ಶಾಸಕ ಎನ್.ಎಚ್‌.ಕೋನರಡ್ಡಿ ಅವರನ್ನು ಪ್ರಮಾಣ ವಚನ ಸ್ವೀಕರಿಸಲು ಕಾರ್ಯದರ್ಶಿಯವರು ಕರೆದಾಗ ಅವರು ಬರಲಿಲ್ಲ. ‘ಹತ್ತು ನಿಮಿಷದ ಬಳಿಕ ಪ್ರಮಾಣ ತೆಗೆದುಕೊಳ್ಳುತ್ತೇನೆ’ ಎಂದು ಹೇಳಿದರು. ‘ಏನ್‌ ಟೈಮ್‌ ನೋಡ್ತಿದ್ದೀಯಾ, ಎಲ್ಲರೂ ತಗೊಂಡಿದ್ದಾರೆ. ಎಲ್ಲವೂ ಟೈಮೂ ಒಳ್ಳೆಯದೆ’ ಎಂದು ಸಿದ್ದರಾಮಯ್ಯ ಹೇಳಿದರು. ಆದರೂ ಕೋನರಡ್ಡಿ ತಡವಾಗಿಯೇ ಪ್ರಮಾಣ ವಚನ ಸ್ವೀಕರಿಸಿದರು.

ವಿಜಯೇಂದ್ರ ಬೆನ್ನು ತಟ್ಟಿದ್ದ ಸಿದ್ದರಾಮಯ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶಿಕಾರಿಪುರದ ನೂತನ ಶಾಸಕ ಬಿ.ವೈ.ವಿಜಯೇಂದ್ರ ಅವರ ಬೆನ್ನುತಟ್ಟಿ ಕುಶಲೋಪರಿ ವಿಚಾರಿಸಿದರು. ಪ್ರಮಾಣ ಸ್ವೀಕರಿಸಲು ಒಳಗೆ ಬರುವಾಗಲೇ  ಎದುರಾದ ಸಿದ್ದರಾಮಯ್ಯ ಅವರ ಬಳಿಗೆ ಹೋದ ವಿಜಯೇಂದ್ರ ಕೈ ಮುಗಿದರು. ವಿಧಾನಸಭೆಯೊಳಗೂ ಅವರು ಆಡಳಿತ ಮತ್ತು ವಿರೋಧ ಪಕ್ಷದ ಸಾಲಿನಲ್ಲಿದ್ದ ಎಲ್ಲ ಹಿರಿಯರು ಮತ್ತು ಕಿರಿಯ ಶಾಸಕರ ಬಳಿಗೆ ಹೋಗಿ ಮಾತನಾಡಿಸಿ ಅಭಿನಂದಿಸಿದರು. ವಿಧಾನಸಭೆಗೆ ಬರುವಾಗ ಮೆಟ್ಟಿಲುಗಳಿಗೆ ನಮಸ್ಕರಿಸಿದರು.

ಸುಧಾಕರ್‌ ಸೋಲಿನದ್ದೇ ಚರ್ಚೆ: ಮಾಜಿ ಆರೋಗ್ಯ ಸಚಿವ ಡಾ.ಕೆ. ಸುಧಾಕರ್‌ ಈ ವಿಧಾನಸಭಾ ಚುನಾವಣೆಯಲ್ಲಿ ಸೋತಿರುವ ಕುರಿತು ವಿಧಾನಸಭೆಯ ವಿರೋಧ ಪಕ್ಷದ ಮೊಗಸಾಲೆಯಲ್ಲಿ ಮಂಗಳವಾರ ಹೆಚ್ಚು ಚರ್ಚೆಯಾಗುತ್ತಿತ್ತು. ಬಿಜೆಪಿ ಶಾಸಕರಲ್ಲೇ ಸುಧಾಕರ್‌ ಸೋಲಿನ ಕುರಿತು ವಿಶ್ಲೇಷಣೆ ನಡೆಯುತ್ತಿತ್ತು. ಆರೋಗ್ಯ ಇಲಾಖೆಯಲ್ಲಿನ ಆಡಳಿತ ವೈಖರಿ ಕೋವಿಡ್‌ ಅವಧಿಯಲ್ಲಿನ ಭ್ರಷ್ಟಾಚಾರದ ಆರೋಪಗಳು ಮತ್ತಿತರ ಅಂಶಗಳೇ ಮಾಜಿ ಸಚಿವರ ಸೋಲಿಗೆ ಕಾರಣ ಎಂದು ಕೆಲವು ಶಾಸಕರು ಚರ್ಚೆಯಲ್ಲಿ ತೊಡಗಿದ್ದರು.

‘ಈ ಚುನಾವಣೆಯಲ್ಲಿ ಬಿಜೆಪಿ ಭಾರಿ ಹಿನ್ನಡೆ ಅನುಭವಿಸಲು ಸುಧಾಕರ್‌ ಪ್ರಮುಖ ಕಾರಣ’ ಎಂದು ಸಂಪುಟದಲ್ಲಿ ಅವರ ಒಡನಾಡಿಯಾಗಿದ್ದ ಶಾಸಕರೊಬ್ಬರು ಹೇಳಿದ್ದು ಕೇಳಿ ಬಂತು. ಸವದಿಗೆ ಶಹಬ್ಬಾಸ್‌ ಅಥಣಿ ಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್‌ ಕೈತಪ್ಪಿದ ಬಳಿಕ ಕಾಂಗ್ರೆಸ್‌ ಪಕ್ಷದಿಂದ ಸ್ಪರ್ಧಿಸಿ ಗೆದ್ದು ಬಂದಿರುವ ಲಕ್ಷ್ಮಣ ಸವದಿ ಅವರ ಸಾಧನೆಯನ್ನು ಬಿಜೆಪಿ ಶಾಸಕರೇ ಕೊಂಡಾಡಿದರು.

‘ನೀವು ನಾಯಕ...’ ಎಂದು ಶಹಬ್ಬಾಸ್‌ ನೀಡಿದರು. ಮಂಗಳವಾರ ವಿಧಾನಸಭೆಯ ಮೊಗಸಾಲೆಯಲ್ಲಿ ಸವದಿ ಅವರಿಗೆ ವಿ. ಸುನಿಲ್‌ ಕುಮಾರ್‌ ಬಾಲಚಂದ್ರ ಜಾರಕಿಹೊಳಿ ಸೇರಿದಂತೆ ಬಿಜೆಪಿಯ ಕೆಲವು ಶಾಸಕರು ಎದುರಾದರು. ‘ನಾಯಕರೇ ಚಲೋ ಇದ್ದೀರಾ’ ಎಂದು ಬಾಲಚಂದ್ರ ಕೇಳಿದರು. ಮಾತು ಅಥಣಿ ಕ್ಷೇತ್ರದ ಚುನಾವಣೆಯತ್ತ ಹೊರಳಿತು. ‘ದೊಡ್ಡ ಗೆಲುವು. ನೀವು ನಿಜವಾದ ನಾಯಕ’ ಎಂದು ಬಿಜೆಪಿ ಶಾಸಕರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.