ADVERTISEMENT

SC/ST ಆಯೋಗದ ಅಧ್ಯಕ್ಷ ಸ್ಥಾನ ನಿರಾಕರಿಸಿದ್ದ ಎಸ್‌. ಜಯಣ್ಣಗೆ ಉಗ್ರಾಣ ನಿಗಮದ ಹೊಣೆ

​ಪ್ರಜಾವಾಣಿ ವಾರ್ತೆ
Published 14 ಮಾರ್ಚ್ 2024, 15:39 IST
Last Updated 14 ಮಾರ್ಚ್ 2024, 15:39 IST
ಜಯಣ್ಣ
ಜಯಣ್ಣ   

ಕೊಳ್ಳೇಗಾಲ: ಕರ್ನಾಟಕ ರಾಜ್ಯ ಅನುಸೂಚಿತ ಜಾತಿ (ಎಸ್‌ಸಿ) ಅನುಸೂಚಿತ ಬುಡಕಟ್ಟುಗಳ (ಎಸ್‌ಟಿ) ಆಯೋಗದ ಅಧ್ಯಕ್ಷ ಸ್ಥಾನವನ್ನು ನಿರಾಕರಿಸಿದ್ದ ಮಾಜಿ ಶಾಸಕ ಎಸ್‌.ಜಯಣ್ಣ ಅವರನ್ನು ಕರ್ನಾಟಕ ರಾಜ್ಯ ಉಗ್ರಾಣ ನಿಗಮದ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ. 

ಫೆ.29ರಂದು ನಡೆದಿದ್ದ ಎರಡನೇ ಹಂತದ ನಿಗಮ ಮಂಡಳಿಗಳ ನೇಮಕಾತಿಯಲ್ಲಿ ಜಯಣ್ಣ ಅವರಿಗೆ ಕರ್ನಾಟಕ ರಾಜ್ಯ ಅನುಸೂಚಿತ ಜಾತಿ (ಎಸ್‌ಸಿ) ಅನುಸೂಚಿತ ಬುಡಕಟ್ಟುಗಳ (ಎಸ್‌ಟಿ) ಆಯೋಗದ ಅಧ್ಯಕ್ಷ ಸ್ಥಾನ ನೀಡಲಾಗಿತ್ತು. 

ಪ್ರಮುಖ ನಿಗಮವನ್ನು ನಿರೀಕ್ಷಿಸಿದ್ದ ಜಯಣ್ಣ ಅವರಿಗೆ ಸರ್ಕಾರದ ನಿರ್ಧಾರದಿಂದ ಅಸಮಾಧಾನವಾಗಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಆಯೋಗದ ಅಧ್ಯಕ್ಷ ಸ್ಥಾನವನ್ನು ಒಪ್ಪುವುದಿಲ್ಲ ಬೇರೆ ಪ್ರಮುಖ ನಿಗಮ–ಮಂಡಳಿಗೆ ನೇಮಕ ಮಾಡುವಂತೆ ಒತ್ತಾಯಿಸಿದ್ದರು.    

ADVERTISEMENT

ಜಯಣ್ಣ ಒತ್ತಾಯಕ್ಕೆ ಮಣಿದಿರುವ ಮುಖ್ಯಮಂತ್ರಿಯವರು ಅವರಿಗೆ ಉಗ್ರಾಣ ನಿಗಮದ ಹೊಣೆಯನ್ನು ನೀಡಿದ್ದಾರೆ.

ಮುಂದಿನ ಎರಡು ವರ್ಷಗಳ ಅವಧಿಯವರೆಗೆ ಜಯಣ್ಣ ಅವರನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡಿ ಸರ್ಕಾರ ಗುರುವಾರ ಅಧಿಸೂಚನೆ ಹೊರಡಿಸಿದರ.  

ಸಿದ್ದರಾಮಯ್ಯ ಆಪ್ತರಾಗಿರುವ ಜಯಣ್ಣ, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕೊಳ್ಳೇಗಾಲ ಕ್ಷೇತ್ರದ ಟಿಕೆಟ್‌ ಆಕಾಂಕ್ಷಿಯಾಗಿದ್ದರು. ಕಾಂಗ್ರೆಸ್‌ ಎ.ಆರ್‌.ಕೃಷ್ಣಮೂರ್ತಿಯವರಿಗೆ ಟಿಕೆಟ್‌ ನೀಡಿತ್ತು.

ಸರ್ಕಾರ ಬಂದರೆ ನಿಗಮ ಮಂಡಳಿಯಲ್ಲಿ ಸ್ಥಾನ ನೀಡಲಾಗುವುದು ಎಂದು ಸಿದ್ದರಾಮಯ್ಯ ಅವರು ಜಯಣ್ಣ ಮನವೊಲಿಸಿದ್ದರು. ಹೀಗಾಗಿ ಅವರು ಚುನಾವಣೆಯಲ್ಲಿ ಕೃಷ್ಣಮೂರ್ತಿಯವರನ್ನು ಬೆಂಬಲಿಸಿದ್ದರು. 

ಹೊಸ ಜವಾಬ್ದಾರಿ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಎಸ್‌.ಜಯಣ್ಣ ಅವರು, ‘ನನಗೆ ಬೇರೆ ನಿಗಮ ಮಂಡಳಿ ಸ್ಥಾನ ನೀಡಿ ಎಂದು ಮುಖ್ಯಮಂತ್ರಿಯವರಿಗೆ ತಿಳಿಸಿದ್ದಾರೆ. ನನ್ನ ಮಾತಿಗೆ ಬೆಲೆಕೊಟ್ಟು ಈ ಹೊಣೆಗಾರಿಕೆ ನೀಡಿದ್ದಾರೆ. ಉಗ್ರಾಣ ನಿಗಮದ ಅಧ್ಯಕ್ಷನಾಗಿ ಪ್ರಮಾಣಿಕವಾಗಿ ನನ್ನ ಜವಾಬ್ದಾರಿ ನಿಭಾಯಿಸುವೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.