ಬೆಂಗಳೂರು: ‘ಸಿಐಡಿ ಎಂದರೆ ಕರ್ತವ್ಯ ಲೋಪ ಎಸಗಿದವರು, ಅದಕ್ಷತೆ ತೋರಿದವರು, ಭ್ರಷ್ಟಾಚಾರ ಪ್ರಕರಣಗಳನ್ನು ಎದುರಿಸಿದವರನ್ನು ವರ್ಗಾವಣೆ ಮಾಡುವ ಕೇಂದ್ರವೇ’ ಎಂದು ಬಿಜೆಪಿ ಶಾಸಕ ಎಸ್.ಸುರೇಶ್ ಕುಮಾರ್ ಪ್ರಶ್ನಿಸಿದ್ದಾರೆ.
ಹಲಸೂರು ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ಮಂಜುನಾಥ್ ಅವರನ್ನು ನಗರದ ಪೊಲೀಸ್ ಆಯುಕ್ತರು ಒಂದು ಪ್ರಕರಣದಲ್ಲಿ ವಿಚಾರಣೆ ನಡೆಸಿದ ಬಳಿಕ ಅಮಾನತು ಮಾಡಿದ್ದರು. ಇದರ ಬೆನ್ನಲ್ಲೇ ಈ ಅಧಿಕಾರಿಯನ್ನು ಸಿಐಡಿ ವಿಭಾಗಕ್ಕೆ ವರ್ಗಾವಣೆ ಮಾಡಲಾಗಿದೆ. ಇದು ಸರಿಯೇ ಎಂದು ಪ್ರಶ್ನಿಸಿ ಅವರು ಗೃಹ ಸಚಿವ ಜಿ.ಪರಮೇಶ್ವರ ಅವರಿಗೆ ಪತ್ರ ಬರೆದಿದ್ದಾರೆ.
ಇನ್ಸ್‌ಪೆಕ್ಟರ್ ಅವರನ್ನು ಪೊಲೀಸ್ ಆಯುಕ್ತರು ಅಮಾನತು ಮಾಡಿರುವ ಆದೇಶ ಇಂದು ಯಾವ ಸ್ಥಿತಿಯಲ್ಲಿದೆ?, ಅಮಾನತುಗೊಳಿಸಿದ ಬೆನ್ನಲ್ಲೇ ಅವರನ್ನು ಸಿಐಡಿಗೆ ವರ್ಗಾವಣೆ ಮಾಡಿಸಿರುವುದರ ಹಿಂದಿನ ಶಕ್ತಿ ಯಾವುದು ಎಂದು ಪ್ರಶ್ನಿಸಿದ್ದಾರೆ.
ಇನ್ಸ್‌ಪೆಕ್ಟರ್ ಕರ್ತವ್ಯಲೋಪದ ಎಸಗಿದ್ದರಿಂದಲೇ ಆಯುಕ್ತರು ಅಮಾನತು ಮಾಡಿದ್ದರು. ಆ ಆದೇಶವನ್ನು ನಿರ್ಲಕ್ಷಿಸಿ ವರ್ಗಾವಣೆ ಮಾಡಿರುವುದರಿಂದ ಆಯುಕ್ತರ ನೈತಿಕ ಬಲ ಕುಸಿದಂತೆ ಆಗಿದೆಯಲ್ಲವೇ ಎಂದೂ ಸುರೇಶ್ ಕುಮಾರ್ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.