ADVERTISEMENT

‘ಪವಿತ್ರ ಆರ್ಥಿಕತೆ’ಗಾಗಿ ಉಪವಾಸ

ಗೌರವಯುತವಾಗಿ ಜೀವನ ನಡೆಸುವ ಆರ್ಥಿಕತೆ ಬೇಕಾಗಿದೆ: ಪ್ರಸನ್ನ

​ಪ್ರಜಾವಾಣಿ ವಾರ್ತೆ
Published 15 ಸೆಪ್ಟೆಂಬರ್ 2019, 19:56 IST
Last Updated 15 ಸೆಪ್ಟೆಂಬರ್ 2019, 19:56 IST
ಕಾರ್ಯಕ್ರಮದಲ್ಲಿ (ಎಡದಿಂದ) ಆರ್‌.ಪ್ರತಿಭಾ, ಗ್ರಾಮ ಸೇವಾ ಸಂಘದ ಉಪಾಧ್ಯಕ್ಷ ಚೊಕ್ಕ ಲಿಂಗಮ್, ರಂಗಕರ್ಮಿ ಪ್ರಸನ್ನ, ಸಿಐಟಿಯು ಉಪಾಧ್ಯಕ್ಷೆ ಲೀಲಾವತಿ ಹಾಗೂ ಆರ್‌ಬಿಐ ನಿವೃತ್ತ ನೌಕರ ವೆಂಕಟನಾಥನ್ ಕರಕುಶಲ ವಸ್ತುಗಳನ್ನು ಪ್ರದರ್ಶಿಸಿದರು --  – -ಪ್ರಜಾವಾಣಿ ಚಿತ್ರ
ಕಾರ್ಯಕ್ರಮದಲ್ಲಿ (ಎಡದಿಂದ) ಆರ್‌.ಪ್ರತಿಭಾ, ಗ್ರಾಮ ಸೇವಾ ಸಂಘದ ಉಪಾಧ್ಯಕ್ಷ ಚೊಕ್ಕ ಲಿಂಗಮ್, ರಂಗಕರ್ಮಿ ಪ್ರಸನ್ನ, ಸಿಐಟಿಯು ಉಪಾಧ್ಯಕ್ಷೆ ಲೀಲಾವತಿ ಹಾಗೂ ಆರ್‌ಬಿಐ ನಿವೃತ್ತ ನೌಕರ ವೆಂಕಟನಾಥನ್ ಕರಕುಶಲ ವಸ್ತುಗಳನ್ನು ಪ್ರದರ್ಶಿಸಿದರು --  – -ಪ್ರಜಾವಾಣಿ ಚಿತ್ರ   

ಬೆಂಗಳೂರು:ಕುಸಿಯುತ್ತಿರುವ ಆರ್ಥಿಕತೆಯ ಬದಲಿಗೆ ದೇಶದಲ್ಲಿ ‘ಪವಿತ್ರ ಆರ್ಥಿಕತೆ’ಗೆ ಆಗ್ರಹಿಸಿ ಕರಕುಶಲ ನೌಕರರು, ಗಾರ್ಮೆಂಟ್ಸ್‌ ನೌಕರರು, ಪೌರಕಾರ್ಮಿಕರು, ಸಣ್ಣ ಉದ್ಯಮಿಗಳು, ಬೀದಿಬದಿ ವ್ಯಾಪಾರಿಗಳು, ಅಂಗನವಾಡಿ ನೌಕರರು ಒಗ್ಗೂಡಿ ಅಕ್ಟೋಬರ್‌ 2ರಿಂದ ಉಪವಾಸ ಸತ್ಯಾಗ್ರಹ ಚಳವಳಿ ನಡೆಸಲು ನಿರ್ಧರಿಸಿದ್ದಾರೆ. ಸತ್ಯಾಗ್ರಹವು ನಗರದ ಗಾಂಧಿಭವನ ಸಮೀಪದ ವಲ್ಲಭ ನಿಕೇತನ್‌ನಲ್ಲಿ ಆರಂಭವಾಗಲಿದೆ.

ಗ್ರಾಮ ಸೇವಾ ಸಂಘವು ಭಾನುವಾರ ಆಯೋಜಿಸಿದ್ದ ‘ಪವಿತ್ರ ಆರ್ಥಿಕತೆ’ ಚರ್ಚೆಯಲ್ಲಿ ಭಾಗವಹಿಸಿದ್ದ ಎಲ್ಲ ವಲಯಗಳ ಪ್ರತಿನಿಧಿಗಳು ಈ ನಿರ್ಧಾರ ಕೈಗೊಂಡರು.

ರಂಗಕರ್ಮಿ ಪ್ರಸನ್ನ, ‘ದೇಶದಲ್ಲಿ ಆರ್ಥಿಕ ಬಿಕ್ಕಟ್ಟು ಹೆಮ್ಮರವಾಗಿ ಬೆಳೆಯುತ್ತಿದೆ. ನಮ್ಮ ಪ್ರಕಾರ ಇದು ಒಳ್ಳೆಯ ಬೆಳವಣಿಗೆ. ಏಕೆಂದರೆ ರಾಕ್ಷಸಿ ಆರ್ಥಿಕತೆಯನ್ನು ತೊಲಗಿಸಿ, ಪವಿತ್ರ ಆರ್ಥಿಕತೆಯನ್ನು ಅನುಷ್ಠಾನಗೊಳಿಸಲು ಇದು ಸರಿಯಾದ ಸಮಯ.ಅಂದು ಅಜ್ಞಾನದಿಂದ ಗಾಂಧಿಯನ್ನು ಕೊಂದೆವು. ಇಂದು ನಮ್ಮ ಚಳವಳಿ ಮೂಲಕ ಅವರನ್ನು ಜೀವಂತವಾಗಿರಿಸೋಣ’ ಎಂದರು.

ADVERTISEMENT

‘ಸಮಾಜದಲ್ಲಿ ಗೌರವಯುತವಾಗಿ ಜೀವನ ನಡೆಸುವ ಆರ್ಥಿಕತೆ ಬೇಕಾಗಿದೆ.ಗಾರ್ಮೆಂಟ್ಸ್‌ ನೌಕರರಿಗೆ ಇಂದಿಗೂ ಕನಿಷ್ಠ ವೇತನ ನೀಡುತ್ತಿಲ್ಲ. ಇಲ್ಲಿವರೆಗೆ ವೇತನ ಪರಿಷ್ಕರಣೆ ಮಾಡಲಿಲ್ಲ. ಆರ್ಥಿಕತೆಯ ಹೆಸರಲ್ಲಿ ನೆರವು ನೀಡಿ, ರೆಪೋ ದರ ಕಡಿಮೆ ಮಾಡುತ್ತಿವೆ. ಆದರೆ, ಜನಸಾಮಾನ್ಯರಿಗೆ ಯಾವುದೇ ಅನುಕೂಲ ಮಾಡುತ್ತಿಲ್ಲ’ ಎಂದು ಗಾರ್ಮೆಂಟ್‌ ಮತ್ತು ಟೆಕ್ಸ್‌ಟೈಲ್ ನೌಕರರ ಸಂಘದ ಅಧ್ಯಕ್ಷೆ ಆರ್‌.ಪ್ರತಿಭಾ ದೂರಿದರು.

ಗ್ರಾಮೀಣ ಕೂಲಿ ಕಾರ್ಮಿಕರ ಸಂಘಟನೆಯ ಖಜಾಂಚಿ ಮಲ್ಲೇಶ್‌, ‘ಆಡಳಿತ ಸರ್ಕಾರಗಳು ಮಹಿಳಾ ಸಬಲೀಕರಣ ಯಶಸ್ವಿಯಾಗಿದೆ ಎಂದು ಹೇಳುತ್ತಿವೆ. ಆದರೆ, ಮಹಿಳೆಯರಪರಿಶ್ರಮಕ್ಕೆ ತಕ್ಕ ವೇತನ ಪಡೆಯುತ್ತಿದ್ದಾರೆ ಎಂದು ಯಾರೂ ಹೇಳುತ್ತಿಲ್ಲ. ಗ್ರಾಮೀಣ ಭಾಗದ ಮಕ್ಕಳಿಗೆ ಇಂದು ಶಿಕ್ಷಣ ದೊರೆಯುತ್ತಿದೆ. ಆದರೂ ದೇಶದಲ್ಲಿ ನಿರುದ್ಯೋಗ ಹಾಗೆಯೇ ಇದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.