ಚಾಮರಾಜನಗರ: ಧ್ರುವನಾರಾಯಣ ಹಠಾತ್ ನಿಧನ ಅವರ ಹುಟ್ಟೂರು, ತಾಲ್ಲೂಕಿನ ಹೆಗ್ಗವಾಡಿ ಗ್ರಾಮಸ್ಥರಲ್ಲಿ ಆಘಾತ ತಂದಿದೆ. ಇಡೀ ಊರಲ್ಲಿ ನೀರವ ಮೌನ ಆವರಿಸಿದೆ.
ಧ್ರುವನಾರಾಯಣ ಅವರು ಹೆಗ್ಗವಾಡಿಯಲ್ಲಿ ಏಳೂವರೆ ಎಕರೆ ಜಮೀನು ಹೊಂದಿದ್ದಾರೆ. ಅವರ ಅಕ್ಕನ ಮಗ ರೇವಣ್ಣ ಅವರು ಜಮೀನು ನೋಡಿಕೊಳ್ಳುತ್ತಿದ್ದಾರೆ. ಗುರುವಾರ ಊರಿಗೆ ಬಂದಿದ್ದ ಧ್ರುವನಾರಾಯಣ, ಮದುವೆಯೊಂದರಲ್ಲಿ ಭಾಗವಹಿಸಿ ಸಂಜೆ ಜಮೀನು ಸುತ್ತಾಡಿ ಮೈಸೂರಿಗೆ ತೆರಳಿದ್ದರು.
ಶನಿವಾರ ಬೆಳಿಗ್ಗೆ ಗ್ರಾಮಸ್ಥರಿಗೆ ಸಾವಿನ ಸುದ್ದಿ ಬರಸಿಡಿಲಿನಂತೆ ಎರಗಿದೆ. ಕುಟುಂಬಸ್ಥರು, ಗ್ರಾಮಸ್ಥರು ಆಘಾತಗೊಂಡಿದ್ದು, ಸುದ್ದಿಯನ್ನು ಅರಗಿಸಿಕೊಳ್ಳಲು ಆಗುತ್ತಿಲ್ಲ.
'ನಮ್ಮ ಊರಿನ ನಾಯಕರಾಗಿದ್ದರು. ದೊಡ್ಡ ರಾಜಕಾರಣಿಯಾಗಿದ್ದರೂ ಊರಿನೊಂದಿಗೆ ಅವಿನಾಭಾವ ಸಂಬಂಧ ಹೊಂದಿದ್ದರು. ಎಲ್ಲ ಸಮಾರಂಭಗಳಲ್ಲಿ ಭಾಗವಹಿಸುತ್ತಿದ್ದರು. ಗ್ರಾಮಸ್ಥರನ್ನೂ ಮನೆಯವರಂತೆಯೇ ನೋಡುತ್ತಿದ್ದರು' ಎಂದು ಅವರ ಸಂಬಂಧಿ ದೇವಿ ಕಣ್ಣೀರಾದರು.
'ನಮ್ಮ ಗ್ರಾಮವನ್ನು ಅಭಿವೃದ್ಧಿ ಪಡಿಸಿದವರು ಅವರು. ಕುಟುಂಬಸ್ಥರು, ಬಡವರ ಮನೆ ಮದುವೆಗೆ ಸಹಾಯ ಮಾಡುತ್ತಿದ್ದರು. ಇವತ್ತು ಬೆಳಿಗ್ಗೆ ಎದ್ದಾಗ, ಅವರ ಸಾವಿನ ಸುದ್ದಿ ಬಂತು. ನಂಬುವುದಕ್ಕೇ ಆಗುತ್ತಿಲ್ಲ' ಎಂದು ಸಾಕಮ್ಮ ಹೇಳಿದರು.
'ಆಗಾಗ ಊರಿಗೆ ಬರುತ್ತಿದ್ದರು. ಜಮೀನುಗಳ ಮೇಲ್ವಿಚಾರಣೆಯನ್ನೂ ಮಾಡುತ್ತಿದ್ದರು. ಕೃಷಿ ಬಗ್ಗೆ ಆಸಕ್ತಿಯನ್ನೂ ಹೊಂದಿದ್ದರು' ಎಂದು ಅವರ ಸಂಬಂಧಿ ಮಹೇಶ್ ತಿಳಿಸಿದರು.
ಇವನ್ನೂ ಓದಿ:
ಚಾಮರಾಜನಗರದ ಮಾಜಿ ಸಂಸದ ಆರ್. ಧ್ರುವನಾರಾಯಣ ನಿಧನ
ಧ್ರುವನಾರಾಯಣ: ಒಂದು ಮತದಿಂದ ಗೆದ್ದಿದ್ದ ಶಾಸಕ, ಸಂಸದರಾಗಿ ಮನೆ ಮಾತು
PHOTOS | 2004ರಲ್ಲಿ ಧ್ರುವನಾರಾಯಣ ಅವರು ಒಂದು ಮತದಿಂದ ಗೆದ್ದ ಕ್ಷಣಗಳು...
ಮಾಜಿ ಸಂಸದ ಆರ್. ಧ್ರವನಾರಾಯಣ ನಿಧನಕ್ಕೆ ಗಣ್ಯರಿಂದ ಸಂತಾಪ
ಹುಟ್ಟೂರು ಹೆಗ್ಗವಾಡಿಯಲ್ಲಿ ನಾಳೆ ಧ್ರುವನಾರಾಯಣ ಅಂತ್ಯಕ್ರಿಯೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.