ಬೆಂಗಳೂರು: ‘ಉದ್ಯೋಗ ಎಂದರೆ ಸರ್ಕಾರಿ ಕೆಲಸವಷ್ಟೇ ಅಲ್ಲ. ಪಕೋಡ ಮಾಡುವುದು, ಮಾರುವುದೂ ಕೂಡ ಉದ್ಯೋಗ. ಯಾವುದರಿಂದ ಜೀವನ ನಿರ್ವಹಣೆ ಸಾಧ್ಯವೋ ಅವೆಲ್ಲವೂ ಉದ್ಯೋಗಗಳೇ’ ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ಹೇಳಿದರು.
‘ಪ್ರಜಾವಾಣಿ’ ಹಾಗೂ ‘ಡೆಕ್ಕನ್ ಹೆರಾಲ್ಡ್’ ಪತ್ರಿಕೆಗಳು ಸೋಮವಾರ ಆಯೋಜಿಸಿದ್ದ ಮುಕ್ತ ಸಂವಾದದಲ್ಲಿ ಅವರು ಮಾತನಾಡಿದರು.
‘ಎರಡು ಕೋಟಿ ಉದ್ಯೋಗ ಸೃಷ್ಟಿ ಮಾಡುವುದಾಗಿ ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದರು. ಐದು ವರ್ಷದ ಅವಧಿಯಲ್ಲಿ ಸಾಕಷ್ಟು ಉದ್ಯೋಗಗಳು ಸೃಷ್ಟಿಯಾಗಿವೆ. ಈ ವಿಚಾರದಲ್ಲಿ ಕೆಲವು ಗೊಂದಲಗಳು ಇರಬಹುದು. ಆದರೆ, ಗುರಿಯ ಸನಿಹವಂತೂ ಹೋಗಿದ್ದೇವೆ’ ಎಂದರು.
‘ಸರ್ಕಾರ ತೆಗೆದುಕೊಂಡ ಯೋಜನೆಗಳಿಂದಲೂ ಕೆಲಸಗಳು ಸೃಷ್ಟಿಯಾಗಿವೆ. ಉದಾಹರಣೆಗೆ ಹೇಳುವುದಾದರೆ, ಬೆಂಗಳೂರು–ಮೈಸೂರು ರಾಷ್ಟ್ರೀಯ ಹೆದ್ದಾರಿ ವಿಸ್ತರಣೆ ಕಾಮಗಾರಿಯಿಂದ ಆರು ಸಾವಿರ ಮಂದಿಗೆ ಕೆಲಸ ಸಿಕ್ಕಿದೆ.ಮುದ್ರಾ ಯೋಜನೆಯಿಂದ ಲಕ್ಷಾಂತರ ಯುವಕರಿಗೆ ಅನುಕೂಲವಾಗಿದೆ’ ಎಂದೂ ಸದಾನಂದ ಗೌಡ ಹೇಳಿದರು.
ನಗು ಬಗ್ಗೆ ಮಾತಾಡ್ತಾರೆ: ‘ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದಾಗ, ವಿರೋಧ ಪಕ್ಷದಲ್ಲಿದ್ದ ನಾನು ಬಜೆಟ್‌ನ ಲೋಪದೋಷಗಳನ್ನು ಹೇಳಿದ್ದೆ. ನಾನು ಕೊಟ್ಟ ಅಂಕಿ–ಅಂಶಗಳನ್ನು ಅವರು ಒಪ್ಪಿಕೊಂಡಿದ್ದರು. ಈಗಿನ ವಿರೋಧ ಪಕ್ಷಗಳಿಗೆ ದೇಶದ ಹಿತಾಸಕ್ತಿ ಬೇಕಿಲ್ಲ. ವೈಯಕ್ತಿಕ ವಿಚಾರಗಳನ್ನು ಪ್ರಸ್ತಾಪಿಸಿ ಟೀಕೆ ಮಾಡುವುದನ್ನೇ ಕಾಯಕ ಮಾಡಿಕೊಂಡಿವೆ. ವಿರೋಧ ಪಕ್ಷದವರು ಜವಾಬ್ದಾರಿ ಮರೆತು ಬೇರೆಯವರ ಜುಬ್ಬಾದ ಬಗ್ಗೆ, ನಗುವಿನ ಬಗ್ಗೆಯೇ ಮಾತನಾಡುತ್ತ ಕುಳಿತಿದ್ದಾರೆ. ಅದರಿಂದ ಪ್ರಯೋಜನವೇನು’ ಎಂದು ಖಾರವಾಗಿ ಪ್ರಶ್ನಿಸಿದರು.
ಮೋದಿಯವರ ದೌರ್ಬಲ್ಯ!
‘ಪ್ರಧಾನಿ ಅವರು ವಿರೋಧ ಪಕ್ಷದವರ ಹಾಗೆ ಖಜಾನೆ ಲೂಟಿ ಹೊಡೆಯಲಿಲ್ಲ, ಐದು ವರ್ಷಗಳಲ್ಲಿ ಒಮ್ಮೆಯೂ ರಜೆ ತೆಗೆದುಕೊಳ್ಳದೆ ಕೆಲಸ ಮಾಡಿದರು. ಇವೇ ಅವರ ದೌರ್ಬಲ್ಯಗಳು’ ಎಂದರು.
‘ಅವರ ಅವಧಿಯಲ್ಲಿ ಒಬ್ಬ ಸಚಿವನೂ ಭ್ರಷ್ಟಾಚಾರದಲ್ಲಿ ಭಾಗಿಯಾಗಲಿಲ್ಲ. ಆದರೆ, ಮಣ್ಣಿನ ಅಡಿಯಲ್ಲಿರುವ ‘ಕೋಲ್’ನಿಂದ ಹಿಡಿದು ಆಕಾಶದಲ್ಲಿ ಹಾರುವ ಹೆಲಿಕಾಪ್ಟರ್‌ವರೆಗೆ, ಮೊಬೈಲ್‌ನ ತರಂಗವನ್ನೇ ಕದ್ದವರೂ ಈಗ ನಮ್ಮನ್ನೇ ದೂರುತ್ತಿದ್ದಾರೆ. ಉತ್ತರ ಪ್ರದೇಶದಲ್ಲಿ ಈಗಾಗಲೇ ಕಾಂಗ್ರೆಸ್ಸನ್ನು ಹೊರಗಿಡಲಾಗಿದೆ. ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಬಾಗಿಲಿನಿಂದ ಆಚೆ ನಿಲ್ಲಿಸಿದ್ದಾರೆ’ ಎಂದು ಹರಿಹಾಯ್ದರು.
* ಈ ಸಲ ದಕ್ಷಿಣ ಕನ್ನಡದಲ್ಲಿ ನಿಮ್ಮ ಪಕ್ಷ ಗೆಲ್ಲುತ್ತದೆಯೇ?
ದಕ್ಷಿಣ ಕನ್ನಡದಲ್ಲಿ ಗೆಲ್ಲದಿದ್ದರೆ ರಾಜ್ಯದ ಎಲ್ಲಿಯೂ ಗೆಲ್ಲುವುದಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.