ಬೆಂಗಳೂರು: ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದ್ದ ಭರವಸೆಯಂತೆ ನ್ಯಾಯಮೂರ್ತಿ ಸದಾಶಿವ ಆಯೋಗದ ವರದಿಯನ್ನು ಮುಂದಿನ ತಿಂಗಳು ನಡೆಯುವ ಬಜೆಟ್ ಅಧಿವೇಶನದಲ್ಲೇ ಮಂಡಿಸಲು ಪ್ರಯತ್ನಿಸಲಾಗುವುದು ಎಂದು ಗೃಹ ಸಚಿವ ಜಿ.ಪರಮೇಶ್ವರ ಹೇಳಿದರು.
ನಗರದ ಅಂಬೇಡ್ಕರ್ ಭವನದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಪರಿಶಿಷ್ಟ ಸಮುದಾಯಗಳ ಸಹೋದರತ್ವ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.
’ಕಾಂಗ್ರೆಸ್‌ನ ಚುನಾವಣಾ ಪ್ರಣಾಳಿಕೆಗೆ ನಾನೇ ಅಧ್ಯಕ್ಷನಾಗಿದ್ದೆ. ಕೊಟ್ಟ ಭರವಸೆಯಂತೆ ಮೊದಲ ಅಧಿವೇಶನದಲ್ಲೇ ವರದಿಯನ್ನು ಮಂಡಿಸಲು ಮುಖ್ಯಮಂತ್ರಿ ಜತೆ ಚರ್ಚಿಸಲಾಗುವುದು. ವರದಿಯ ಕುರಿತು ಸದನದಲ್ಲಿ ವಿಸ್ತೃತ ಚರ್ಚೆಗಳು ನಡೆಯಬೇಕು. ನಂತರ ಒಳಮೀಸಲಾತಿ ನಿಗದಿಮಾಡಿ ಕೇಂದ್ರಕ್ಕೆ ಶಿಫಾರಸು ಮಾಡಲಾಗುವುದು‘ ಎಂದು ಸುಳಿವು ನೀಡಿದರು.
ಪರಿಶಿಷ್ಟರ ಒಳ ಮೀಸಲಾತಿ ಕುರಿತು ಬಿಜೆಪಿ ಸರ್ಕಾರ ಸದಾಶಿವ ಆಯೋಗದ ವರದಿಯನ್ನು ಬದಿಗೆ ಸರಿಸಿ, ಮನಸ್ಸಿಗೆ ತೋಚಿದಂತೆ ಚುನಾವಣಾ ಹೊಸ್ತಿಲಲ್ಲಿ ತರಾತುರಿಯಲ್ಲಿ ಮೀಸಲಾತಿ ಘೋಷಿಸಿತು. ಪರಿಶಿಷ್ಟರ ಮಧ್ಯೆಯೇ ಒಡೆದು ಆಳುವ ನೀತಿ ಅನುಸರಿಸಿತು. ಆದರೆ, ಪರಿಶಿಷ್ಟ ಸಮುದಾಯದ ಸಹೋದರರು ಅದಕ್ಕೆ ಅವಕಾಶ ನೀಡದೆ ಬಿಜೆಪಿಗೆ ತಕ್ಕ ಉತ್ತರ ನೀಡಿದರು. ಅದರ ಫಲವಾಗಿಯೇ 51 ಮೀಸಲು ಕ್ಷೇತ್ರಗಳಲ್ಲಿ ಕಾಂಗ್ರೆಸ್ 37 ಸ್ಥಾನ ಪಡೆಯಲು ಸಾಧ್ಯವಾಯಿತು ಎಂದರು.
ಪರಿಶಿಷ್ಟರು ಎಡ, ಬಲ, ಬೇರೆ ಜಾತಿಗಳು ಎನ್ನುವ ಮನೋಭಾವ ತೊರೆಯಬೇಕು. ಎಲ್ಲರೂ ಸಹೋದರರಂತೆ ಒಗ್ಗಟ್ಟಾಗಬೇಕು. ಅಂಬೇಡ್ಕರ್ ಅವರ ಆಶಯಗಳನ್ನು ಸಾಕಾರಗೊಳಿಸಲು ದೃಢಸಂಕಲ್ಪ ಮಾಡಬೇಕು ಎಂದು ಹೇಳಿದರು.
ಪ್ರಜಾ ಪರಿವರ್ತನಾ ವೇದಿಕೆ ಅಧ್ಯಕ್ಷ ಬಿ.ಗೋಪಾಲ್, ಚುನಾವಣಾ ಸಮಯದಲ್ಲಿ ಪರಿಶಿಷ್ಟರು ಒಂದು ಕಡೆ ಸೇರಿದ್ದಕ್ಕೆ ರಾಜ್ಯದಲ್ಲಿ ಬಿಜೆಪಿ ಮೂಲೆಗುಂಪಾಯಿತು. ಆದರೂ, ಬಿಜೆಪಿ ವೋಟ್ ಬ್ಯಾಂಕ್ ಕಡಿಮೆಯಾಗಿಲ್ಲ. ಎಲ್ಲರೂ ಒಂದಾದರೆ ಆ ಪಕ್ಷವೇ ನಾಶವಾಗಲಿದೆ ಎಂದರು.
ದಸಂಸ ರಾಜ್ಯ ಸಂಚಾಲಕ ಹೆಣ್ಣೂರು ಶ್ರೀನಿವಾಸ್ ಪ್ರಾಸ್ತಾವಿಕ ಮಾತನಾಡಿದರು. ಮೈಸೂರಿನ ಉರಿಲಿಂಗಪೆದ್ದಿ ಮಠದ ಜ್ಞಾನಪ್ರಕಾಶ ಸ್ವಾಮೀಜಿ, ಸಚಿವ ಕೆ.ಎಚ್.ಮುನಿಯಪ್ಪ, ಮಾಜಿ ಸಂಸದ ಚಂದ್ರಪ್ಪ, ಮುಖಂಡರಾದ ಸುಧಾಮ ದಾಸ್, ಹೊಂಬಣ್ಣ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.