ಬೆಂಗಳೂರು: ವಿಧಾನಸಭೆ ಚುನಾವಣೆ ಹೊಸ್ತಿಲಲ್ಲಿರುವಂತೆ, ಪರಿಶಿಷ್ಟ ಜಾತಿಗಳ ಒಳ ಮೀಸಲಾತಿ ವರ್ಗೀಕರಣ ಕುರಿತು ಕೇಂದ್ರಕ್ಕೆ ಶಿಫಾರಸು ಮಾಡಲು ರಾಜ್ಯ ಸರ್ಕಾರ ಮುಂದಾಗಿದೆ.
ಕಾನೂನು ಮತ್ತು ಸಂಸದೀಯ ಸಚಿವ ಜೆ.ಸಿ. ಮಾಧುಸ್ವಾಮಿ ಅಧ್ಯಕ್ಷತೆಯಲ್ಲಿ ರಚಿಸಲಾಗಿದ್ದ ಸಚಿವ ಸಂಪುಟ ಉಪ ಸಮಿತಿ ಈ ಸಂಬಂಧ ಸಿದ್ಧಪಡಿಸಿರುವ ವರದಿಯು ಬುಧವಾರ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಚರ್ಚೆಯಾಗಿ, ಅಂಗೀಕಾರಗೊಳ್ಳುವ ಸಾಧ್ಯತೆ ಹೆಚ್ಚಾಗಿದೆ.
ಒಳ ಮೀಸಲಾತಿ ವಿಚಾರದಲ್ಲಿ ನ್ಯಾಯಮೂರ್ತಿ ಎ.ಜೆ. ಸದಾಶಿವ ಆಯೋಗ 2012ರ ಜೂನ್ 14 ರಂದು ಸಲ್ಲಿಸಿದ್ದ ವರದಿಯಲ್ಲಿರುವ ಟಿಪ್ಪಣಿಗಳ ಮೇಲೆ ಚರ್ಚೆ ನಡೆಸಿ, ಸಮಿತಿ ವರದಿ ಸಿದ್ಧಪಡಿಸಿದೆ. ಆದರೆ, ಸಮಿತಿಯ ಸದಸ್ಯರ ಪೈಕಿ, ಪಶು ಸಂಗೋಪನೆ ಸಚಿವ ಪ್ರಭು ಚವ್ಹಾಣ ಅವರು ಒಳ ಮೀಸಲಾತಿಗೆ ತೀವ್ರ ವಿರೋಧ ವ್ಯಕ್ತಪಡಿಸಿ ಅಭಿಪ್ರಾಯ ನೀಡಿದ್ದಾರೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ.
ಜಲಸಂಪನ್ಮೂಲ ಸಚಿವ ಗೋವಿಂದ ಎಂ. ಕಾರಜೋಳ, ಮೀನುಗಾರಿಕೆ ಸಚಿವ ಎಸ್. ಅಂಗಾರ, ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಸಮಿತಿಯ ಇತರ ಸದಸ್ಯರು. ಕಳೆದ ನ. 17ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ತೆಗೆದುಕೊಂಡಿದ್ದ ನಿರ್ಣಯದಂತೆ ಸಂಪುಟ ಉಪ ಸಮಿತಿ ರಚಿಸಲಾಗಿತ್ತು.
ಸದಾಶಿವ ಆಯೋಗವು ಜನಸಂಖ್ಯೆಯನ್ನು ಆಧರಿಸಿ, ಆಗ ಪರಿಶಿಷ್ಟರಿಗೆ ಇದ್ದ ಶೇ 15 ಮೀಸಲಾತಿ ಪ್ರಮಾಣವನ್ನು ಶಿಕ್ಷಣ ಮತ್ತು ಉದ್ಯೋಗದಲ್ಲಿ ಗುಂಪು 1ಕ್ಕೆ (ಎಡಗೈ) ಶೇ 6, ಗುಂಪು 2ಕ್ಕೆ (ಬಲಗೈ) ಶೇ 5, ಗುಂಪು 3 (ಆದಿ ಆಂಧ್ರ, ಅಡಿಯಾ, ಭಂಧಿ, ಬೇಡ ಜಂಗಮ, ಹೊಲಯದಾಸರಿ ಸೇರಿ 42 ಜಾತಿಗಳು) ಶೇ 1, ಗುಂಪು 4ಕ್ಕೆ (ಅಸ್ಪೃಶ್ಯರಲ್ಲದ ಗುಂಪು– ಬಂಜಾರ, ಭೋವಿ, ಕೊರಚ, ಕೊರಮ ಮತ್ತು ಇತರ ಸಂಬಂಧಿತ ಜಾತಿಗಳು) ಶೇ 3 ಎಂದು ವರ್ಗೀಕರಿಸಿ ಶಿಫಾರಸು ಮಾಡಿತ್ತು.
ಸಂಪುಟ ಉಪ ಸಮಿತಿಯು ನಾಲ್ಕು ಬಾರಿ ಸಭೆ ಸೇರಿ ಚರ್ಚೆ ನಡೆಸಿ, ಅಂತಿಮ ವರದಿಯನ್ನು ಸಿದ್ಧಪಡಿಸಿದೆ. ಆದರೆ, ಈ ಸಭೆಗಳಲ್ಲಿ ಭಾಗವಹಿಸಿದ್ದ ಪ್ರಭು ಚವ್ಹಾಣ, ಒಳ ಮೀಸಲಾತಿಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಅಲ್ಲದೆ, ಕೊನೆಯ ಸಭೆಯಲ್ಲಿ ಸಮಿತಿ ಶಿಫಾರಸುಗಳಿಗೆ ತಮ್ಮ ಸಹಮತಿ ಇಲ್ಲ ಎಂದು ಭಿನ್ನಭಿಪ್ರಾಯದ ಪತ್ರ ನೀಡಿದ್ದಾರೆ ಎಂದು ಅವರ ಆಪ್ತ ಮೂಲಗಳು ಖಚಿತಪಡಿಸಿವೆ.
ಹಲವು ಬಾರಿ ಸಭೆ: ಸಚಿವ ಸಂಪುಟ ಉಪ ಸಮಿತಿಯ ಸಭೆ ನಡೆಯುತ್ತಿರುವ ಮಧ್ಯೆಯೇ, ಸದಾಶಿವ ಆಯೋಗದ ವರದಿ ಯಥಾವತ್ ಜಾರಿ ವಿಚಾರಕ್ಕೆ ಸಂಬಂಧಿಸಿದಂತೆ ಬಂಜಾರ, ಭೋವಿ ಸಮುದಾಯದ ಪ್ರಮುಖರು ಸಚಿವ ಪ್ರಭು ಚವ್ಹಾಣ ಅವರ ಮನೆಯಲ್ಲಿ ಹಲವು ಬಾರಿ ಸಭೆ ಸೇರಿದ್ದರು. ಒಳ ಮೀಸಲಾತಿಯ ಶಿಫಾರಸಿಗೆ ಯಾವುದೇ ಕಾರಣಕ್ಕೂ ಸಮ್ಮತಿ ನೀಡಬಾರದು ಎಂದು ಈ ಸಭೆಗಳಲ್ಲಿ ತೀರ್ಮಾನ ತೆಗೆದುಕೊಳ್ಳಲಾಗಿತ್ತು. ಈ ಸಭೆಗಳಲ್ಲಿ ಕುಡಚಿ ಶಾಸಕ ಪಿ. ರಾಜೀವ್, ಅನಂತ ನಾಯಕ್, ಭೋವಿ ಗುರುಪೀಠದ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಮತ್ತಿತರರು ಭಾಗವಹಿಸಿದ್ದರು ಎಂದು ಮೂಲಗಳು ತಿಳಿಸಿವೆ.
ಭಿನ್ನಾಭಿಪ್ರಾಯದ ಪತ್ರ ನೀಡಿರುವ ಬಗ್ಗೆ ಪ್ರತಿಕ್ರಿಯೆ ಪಡೆಯಲು ಪ್ರಭು ಚವ್ಹಾಣ ಅವರಿಗೆ ಕರೆ ಮಾಡಿದರೂ ಅವರು ಸಂಪರ್ಕಕ್ಕೆ ಲಭ್ಯರಾಗಲಿಲ್ಲ.
ಸಂಪುಟ ಉಪ ಸಮಿತಿ ವರದಿಯಲ್ಲೇನಿದೆ?
ಪರಿಶಿಷ್ಟ ಜಾತಿಯ ಮೀಸಲಾತಿ ಪ್ರಮಾಣವನ್ನು ಇತ್ತೀಚೆಗೆ ಶೇ 17 ಕ್ಕೆ ಹೆಚ್ಚಿಸಲಾಗಿದೆ. ಮಾಧುಸ್ವಾಮಿ ನೇತೃತ್ವದ ಸಂಪುಟ ಉಪ ಸಮಿತಿಯು, ಲಭ್ಯ ಜನಸಂಖ್ಯೆಯ ಅಂಕಿಅಂಶಗಳನ್ನು ಆಧರಿಸಿ ಮಾದಿಗ, ಆದಿದ್ರಾವಿಡ, ಬಂಬಿ ಮತ್ತು ಇತರ ಸಂಬಂಧಿತ ಜಾತಿಗಳ ಎಡಗೈ ಗುಂಪಿಗೆ ಶೇ 5.5, ಹೊಲೆಯ, ಆದಿಕರ್ನಾಟಕ, ಛಲವಾದಿ ಮತ್ತು ಇತರ ಸಂಬಂಧಿಸಿದ ಜಾತಿಗಳ ಬಲಗೈಗೆ ಗುಂಪಿಗೆ ಶೇ 5.5, ಬಂಜಾರ, ಭೋವಿ, ಕೊರಚ, ಕೊರಮ (ಅಸ್ಪಶ್ಯರಲ್ಲದ) ಗುಂಪಿಗೆ ಶೇ 4, ಅಲೆಮಾರಿ, ಅರೆ ಅಲೆಮಾರಿ ಗುಂಪಿಗೆ ಶೇ 1, ಇತರ ಸೂಕ್ಷ್ಮ ಪರಿಶಿಷ್ಟ ಜಾತಿಗಳಿಗೆ ಶೇ 1ರಂತೆ ಒಳ ಮೀಸಲಾತಿ ನೀಡುವಂತೆ ವರದಿಯಲ್ಲಿ ಉಲ್ಲೇಖಿಸಲಾಗಿದೆ ಎಂದು ಗೊತ್ತಾಗಿದೆ.
*
ಎಲ್ಲರಿಗೂ ನ್ಯಾಯ ಒದಗಿಸಿ, ವೈಜ್ಞಾನಿಕವಾಗಿ ಒಳ ಮೀಸಲಾತಿ ವರ್ಗೀಕರಣಕ್ಕೆ ಅಭ್ಯಂತರ ಇಲ್ಲ. ಆದರೆ, ಯಾರನ್ನೋ ಸೇರಿಸಿ, ಇನ್ಯಾರನ್ನೋ ಕೈ ಬಿಡುವುದು ಸರಿಯಲ್ಲ.
-ಪಿ. ರಾಜೀವ್, ಶಾಸಕ, ಕುಡಚಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.