ADVERTISEMENT

‘ಶಿಕಾರಿ’ ಸುತ್ತಲೇ ಗಿರಕಿ ಹೊಡೆದ ಮರು ಓದು ಗೋಷ್ಠಿ

ರವಿ ಕುಲಕರ್ಣಿ
Published 21 ಜನವರಿ 2019, 3:32 IST
Last Updated 21 ಜನವರಿ 2019, 3:32 IST
ಸಾಹಿತ್ಯ ಕೃತಿಗಳ ಮರು ಓದು ಗೋಷ್ಠಿಯಲ್ಲಿ ಡಿ.ಎ.ಶಂಕರ್ ಹಾಗೂ ಹರ್ಷ ಡಂಬಳ (ಎಡದಿಂದ ಕೊನೆಯವರು) ಪರಸ್ಪರ ಸಮಾಲೋಚನೆ ನಡೆಸಿದರು. ಅಪ್ಪಗೆರೆ ಸೋಮಶೇಖರ, ಸುಭಾಸ ರಾಜಮಾನೆ ಇದ್ದಾರೆ
ಸಾಹಿತ್ಯ ಕೃತಿಗಳ ಮರು ಓದು ಗೋಷ್ಠಿಯಲ್ಲಿ ಡಿ.ಎ.ಶಂಕರ್ ಹಾಗೂ ಹರ್ಷ ಡಂಬಳ (ಎಡದಿಂದ ಕೊನೆಯವರು) ಪರಸ್ಪರ ಸಮಾಲೋಚನೆ ನಡೆಸಿದರು. ಅಪ್ಪಗೆರೆ ಸೋಮಶೇಖರ, ಸುಭಾಸ ರಾಜಮಾನೆ ಇದ್ದಾರೆ   

ಧಾರವಾಡ: ಒಂದು ಕಾಲಘಟ್ಟದ ಬೇರೆ, ಬೇರೆ ಪ್ರಕಾರದ ಸಾಹಿತ್ಯ ಕೃತಿಗಳ ಮರು ಓದು ಅಗತ್ಯವೇ..? ಹಾಗಿದ್ದರೆ ಓದು ಯಾವುದು..? ಮರು ಓದು ಯಾವುದು..? ಗ್ರಹಿಕೆ ಹೇಗೆ..? ಇಂಥ ಹಲವು ಪ್ರಶ್ನೆಗಳನ್ನಿಟ್ಟುಕೊಂಡು ನಡೆದ ‘ಸಾಹಿತ್ಯ ಕೃತಿಗಳ ಮರು ಓದು’ ಉತ್ತರ ಕಂಡುಕೊಳ್ಳುವುದಕ್ಕಿಂತ ಹೆಚ್ಚಾಗಿ ವಿಭಿನ್ನ ವ್ಯಾಖ್ಯಾನಗಳಿಗೆ ಸೀಮಿತವಾಯಿತು.

ಧಾರವಾಡ ಸಾಹಿತ್ಯ ಸಂಭ್ರಮದ 3ನೇ ದಿನದ ಎರಡನೇ ಗೋಷ್ಠಿಯಲ್ಲಿ ಯಶವಂತ ಚಿತ್ತಾಲರ ‘ಶಿಕಾರಿ’, ಗಿರೀಶ ಕಾರ್ನಾಡರ ‘ತುಘಲಕ್’ ಮತ್ತು ಚಂದ್ರಶೇಖರ ಕಂಬಾರರ ‘ಚಕೋರಿ’ ಕೃತಿಗಳನ್ನು ಪ್ರಾತಿನಿಧಿಕವಾಗಿ ನೀಡಲಾಗಿತ್ತು.

ಗೋಷ್ಠಿ ನಿರ್ವಹಿಸಿದ ಡಿ.ಎ. ಶಂಕರ, ‘ಒಂದು ಕಾದಂಬರಿ, ಇನ್ನೊಂದು ನಾಟಕ, ಮತ್ತೊಂದು ಮಹಾಕಾವ್ಯ. ಹೀಗೆ ಮೂರು ಪ್ರಕಾರಗಳ ವಸ್ತು ದೇಸಿಯಾಗಿದ್ದರೂ, ಅಭಿವ್ಯಕ್ತಿಯ ಮಾರ್ಗ ಭಿನ್ನವಾಗಿದೆ. ನಿರೂಪಣಾ ಕ್ರಮದಲ್ಲಿ ಭಿನ್ನತೆ ಇದೆ. ವಿಚಾರಗಳನ್ನು ರೂಪಿಸುವ ಪ್ರಕ್ರಿಯೆ ಭಿನ್ನವಾಗಿದೆ. ನಮ್ಮ ಬರಹಗಾರರನ್ನು ರೂಪಿಸಿದವರು ನಮ್ಮವರಲ್ಲ. ಆಲೋಚನೆಗಳು ಪಾಶ್ಚಾತ್ಯರಿಂದ ಬಂದದ್ದಾಗಿವೆ. ಯಾವುದೋ ದೇಹಕ್ಕೆ ಯಾವುದೋ ತಲೆ. ಹೀಗಿದ್ದಾಗ ಅಂಥ ಕೃತಿಗಳ ಮರು ಓದು ಅಗತ್ಯವೇ.. ನಮ್ಮ ಪ್ರಪಂಚದ ಸಣ್ಣ ಕಥೆಯೊಂದನ್ನು ತೆಗೆದುಕೊಂಡು ಅದನ್ನು ವಿಸ್ತರಿಸುವ, ಗ್ರಹಿಸುವ ಬಗೆ ಹೇಗೆ..? ಪ್ರತಿಕ್ರಿಯೆ ಏನು ..ಎನ್ನುವ ಪ್ರಶ್ನೆಗಳನ್ನು ಮುಂದಿಟ್ಟು ವಿಷಯದ ಚರ್ಚೆಗೆ ಪ್ರವೇಶ ನೀಡಿದರು.

ADVERTISEMENT

ಇದಕ್ಕೆ ಪ್ರತಿಕ್ರಿಯಿಸಿದ ಅಪ್ಪಗೆರೆ ಸೋಮಶೇಖರ, ‘ಕೃತಿಯೊಂದರ ಓದಿನ ಹಿಂದೆ ಸಾಂಸ್ಕೃತಿಕ ರಾಜಕಾರಣದ ಚರಿತ್ರೆ ಇದೆ. ಒಂದು ಕಾಲದಲ್ಲಿ ಸಮಾಜದ ಬಹುಸಂಖ್ಯಾತರನ್ನು ಸಂಪ್ರದಾಯವಾದಿ ಮನುಸ್ಮೃತಿ ಅಕ್ಷರದಿಂದ ವಂಚಿಸಿತ್ತು. ಓದನ್ನು ನಿರಾಕರಿಸಿತ್ತು. ಹಾಗೋ ಹೀಗೊ ಅವರು ಅಕ್ಷರಗಳಿಗೆ ತಮ್ಮನ್ನು ತೆರೆದುಕೊಂಡಾಗ ಅದನ್ನು ಭ್ರಷ್ಟಗೊಳಿಸುವ ಪ್ರಯತ್ನಗಳು ನಡೆದವು. ಓದು ಸ್ವಂತದ್ದಾ ಅಥವಾ ಬೇರೆಯವರು ಹೇಳಿಕೊಟ್ಟಿದ್ದಾ ಎನ್ನುವ ಪ್ರಶ್ನೆಗಳನ್ನು ಕೇಳಿಕೊಂಡಾಗ ಕೃತಿಯೊಂದರ ಮರು ಓದಿನ ಅಗತ್ಯ ಅರಿವಾಗುತ್ತದೆ’ ಎಂದು ಪ್ರತಿಪಾದಿಸಿದರು. ನಂತರ ಮಾತನಾಡಿದ ಸುಭಾಸ ರಾಜಮಾನೆ, ‘ಒಂದೇ ಕಾಲಘಟ್ಟದಲ್ಲಿಯೇ ಬರೆಯುವವರ ನಿಲುವುಗಳು ಬದಲಾಗಬಹುದು. ಹೀಗಾಗಿ ಆ ಕೃತಿಗಳ ಕುರಿತು ಒಂದೇ ವಿಮರ್ಶೆಯ ಮಾನದಂಡಗಳನ್ನು ಅನ್ವಯಿಸುವಂತಿಲ್ಲ. ಯಶವಂತ ಚಿತ್ತಾಲರ ಶಿಕಾರಿ ಕೃತಿಯ ಮುಖ್ಯ ಪಾತ್ರ ಪ್ರತಿಭಟನೆಯ ನೆಲೆಯಲ್ಲಿ ದಾಖಲಾಗುವುದೇ ಇಲ್ಲ. ಆದರೆ ಜಾತಿಯೊಂದರ ಒಳ ಸಂಘರ್ಷಗಳನ್ನು ಅತ್ಯಂತ ಪರಿಣಾಮಕಾರಿಯಾಗಿ ದಾಖಲಿಸುತ್ತದೆ. ಮರು ಓದಿನ ಮೂಲಕ ಹೊಸ ಅರ್ಥ ಸಾಧ್ಯತೆಗಳನ್ನು ಕೃತಿ ಒದಗಿಸುತ್ತದೆ’ ಎಂದರು.

‘40 ವರ್ಷಗಳ ನಂತರ ಈ ಕೃತಿಗಳು ಚರ್ಚೆಗೆ ಒಳಗಾಗುತ್ತಿವೆ ಎನ್ನುವುದೇ ಒಂದು ಅರ್ಥದಲ್ಲಿ ಕೃತಿಗಳ ಮರು ಓದು. ಇಂದಿಗೂ ಕೂಡಾ ಚಿತ್ತಾಲರ ‘ಶಿಕಾರಿ’ ಎಷ್ಟೇ ಸಲ, ಯಾರೇ ಓದಿದರೂ ಪ್ರತಿ ಓದುಗನಿಗೆ ಹೊಸತನ ನೀಡುವುದೇ ಆ ಕೃತಿಯ ವಿಶೇಷ’ ಎಂದು ವಿಷಯ ಪ್ರವೇಶಿಸಿದವರು ಹರ್ಷ ಡಂಬಳ.

ಗೋಷ್ಠಿಯಲ್ಲಿ ಮೂರು ವಿಷಯಗಳಿದ್ದರೂ ಬಹುತೇಕ ಚರ್ಚೆ ಯಶವಂತ ಚಿತ್ತಾಲರ ಶಿಕಾರಿ ಕಾದಂಬರಿಯ ಸುತ್ತಲೇ ಗಿರಕಿ ಹೊಡೆಯಿತು. ‘ಮರು ಓದು ಎನ್ನುವುದು ಕೇವಲ ಕೃತಿಯ ಪುನರ್ ಓದಲ್ಲ. ಅದು ನಮ್ಮನ್ನು ನಾವು ಓದಿಕೊಳ್ಳುವ ಒಂದು ಕ್ರಮ. ಆದರೆ ಅದು ಪೂರ್ವಗ್ರಹಗಳಿಲ್ಲದ ಓದಾಗಬೇಕು. ಮರೆಮಾಚಿದ ಬದುಕಿನ ಸತ್ಯಗಳಾವುವು ಎನ್ನುವುದಕ್ಕೆ ಉತ್ತರ ಹುಡುಕುವ ಕ್ರಿಯೆ’ ಎನ್ನುವ ವ್ಯಾಖ್ಯಾನದೊಂದಿಗೆ ಗೋಷ್ಠಿ ನಿರ್ವಹಿಸಿದ ಡಿ.ಎ. ಶಂಕರ ಮಾತು ಮುಗಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.