ADVERTISEMENT

ಸೆಂಟ್ರೆಲ್ ವಿವಿಯಲ್ಲೇ ಸಾಹಿತ್ಯ ಅಕಾಡೆಮಿ: ಅಶ್ವತ್ಥನಾರಾಯಣ ಬಳಿ ಸಾಹಿತಿಗಳ ಮನವಿ

​ಪ್ರಜಾವಾಣಿ ವಾರ್ತೆ
Published 5 ಜೂನ್ 2020, 11:33 IST
Last Updated 5 ಜೂನ್ 2020, 11:33 IST

ಬೆಂಗಳೂರು: ಕೇಂದ್ರ ಸಾಹಿತ್ಯ ಅಕಾಡೆಮಿಗೆ ಬೆಂಗಳೂರು ಕೇಂದ್ರ ವಿಶ್ವವಿದ್ಯಾಲಯದ ಗ್ರಂಥಾಲಯ ಕಟ್ಟಡದಲ್ಲೇ ಸದ್ಯಕ್ಕೆ ಕಾರ್ಯ ನಿರ್ವಹಿಸಲು ಅವಕಾಶ ನೀಡುವಂತೆ ಡಾ. ಸಿದ್ದಲಿಂಗಯ್ಯ ನೇತೃತ್ವದ ಸಾಹಿತಿಗಳ ತಂಡ ಉಪಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವತ್ಥನಾರಾಯಣ ಅವರ ಬಳಿ ಮನವಿ ಮಾಡಿದೆ.

ಸೆಂಟ್ರಲ್‌ ಕಾಲೇಜಿನ ಗ್ರಂಥಾಲಯ ಕಟ್ಟಡದಲ್ಲಿ ಕಾರ್ಯನಿರ್ವಹಿಸಲು ಕೇಂದ್ರ ಸಾಹಿತ್ಯ ಅಕಾಡೆಮಿಗೆ ಅನುಮತಿ ನೀಡುವ ಜತೆಗೆ ಬೆಂಗಳೂರು ಕೇಂದ್ರ ವಿಶ್ವವಿದ್ಯಾಲಯದಲ್ಲಿ ಕನ್ನಡ ವಿಭಾಗದ 7 ಹುದ್ದೆಗಳನ್ನು ಭರ್ತಿ ಮಾಡುವ ಸಂಬಂಧ ಹಿರಿಯ ಸಾಹಿತಿಗಳು ಶುಕ್ರವಾರ ಮನವಿ ಸಲ್ಲಿಸಿದರು. ಇದಕ್ಕೆ ಸ್ಪಂದಿಸಿದ ಡಾ. ಅಶ್ವತ್ಥನಾರಾಯಣ, ಈ ಸಂಬಂಧ ಸೂಕ್ತ ಕ್ರಮ ವಹಿಸುವ ಭರವಸೆ ನೀಡಿದರು.

"ಕರ್ನಾಟಕ ಸರ್ಕಾರದ ಆದೇಶದಂತೆ ಕೇಂದ್ರ ಸಾಹಿತ್ಯ ಅಕಾಡೆಮಿಯ ಕಟ್ಟಡ ನಿರ್ಮಾಣಕ್ಕೆ ಬೆಂಗಳೂರು ವಿಶ್ವವಿದ್ಯಾಲಯವು ಮಲ್ಲತ್ತಹಳ್ಳಿಯಲ್ಲಿ ಒಂದು ಎಕರೆ ಜಮೀನನ್ನು ಲೀಸ್‌ ಆದಾರದ ಮೇಲೆ ನೀಡಿದೆ. ಅಕಾಡೆಮಿಯ ಕಾರ್ಯಕಾರಿ ಸಮಿತಿಯ ನಿರ್ಣಯವನ್ನು ಒಪ್ಪಿ ಮುಂದಿನ ಆರ್ಥಿಕ ವರ್ಷದಲ್ಲಿ ಅನುದಾನ ನೀಡುವುದಾಗಿ ಕೇಂದ್ರ ಸರ್ಕಾರ ತಿಳಿಸಿದೆ. ಅನುದಾನ ಬಂದ ಕೂಡಲೇ ಕಟ್ಟಡ ನಿರ್ಮಾಣ ಕಾಮಗಾರಿ ಪ್ರಾರಂಭಿಸಲಾಗುವುದು. ಸದ್ಯ ಗುತ್ತಿಗೆ ನಿಯಮದಂತೆ ತನ್ನ ಕಾರ್ಯವನ್ನು ಸೆಂಟ್ರಲ್‌ ಕಾಲೇಜಿನ ಗ್ರಂಥಾಲಯದ ಕಟ್ಟಡದಲ್ಲಿ ಮುಂದುವರಿಸಲು ಅನುಮತಿ ನೀಡಬೇಕು. ಜತೆಗೆ, ಅಕಾಡೆಮಿಯ ವಿರುದ್ಧ ಬೆಂಗಳೂರು ಕೇಂದ್ರ ವಿಶ್ವವಿದ್ಯಾಲಯ ನ್ಯಾಯಾಲಯದಲ್ಲಿ ಹೂಡಿರುವ ದಾವೆಯನ್ನು ಹಿಂತೆಗೆದುಕೊಳ್ಳುವಂತೆ ಆದೇಶ ನೀಡಿ," ಎಂದು ಸಾಹಿತಿಗಳ ತಂಡ ಮನವಿ ಮಾಡಿದೆ.

"ಬೆಂಗಳೂರು ಕೇಂದ್ರ ವಿಶ್ವವಿದ್ಯಾಲಯದ ಎಲ್ಲಾ ವಿಭಾಗಗಳಿಗೆ 6-7 ಹುದ್ದೆಗಳನ್ನು ಭರ್ತಿಮಾಡಿಕೊಳ್ಳಲು ಸರ್ಕಾರ ಸಮ್ಮತಿಸಿದೆ. ಅದೇ ರೀತಿ ಕನ್ನಡ ವಿಭಾಗಕ್ಕೂ 7 ಹುದ್ದೆಗಳನ್ನು ಮಂಜೂರಾತಿ ಮಾಡಿರುವುದಕ್ಕಾಗಿ ಧನ್ಯವಾದ. ಆದರೆ, ಅನ್ಯ ವಿಭಾಗಗಳಿಗೆ 7 ಹುದ್ದೆಗಳನ್ನು ಭರ್ತಿ ಮಾಡಲು ಅನುಮತಿ ಕೊಟ್ಟು, ಕನ್ನಡ ವಿಭಾಗಕ್ಕೆ 2 ಅಧ್ಯಾಪಕರ ಹುದ್ದೆಗಳನ್ನು ಮಾತ್ರ ಭರ್ತಿ ಮಾಡುವಂತೆ ಆದೇಶಿಸಿರುವುದು ಭಾಷೆಗೆ ಅನ್ಯಾಯ ಮಾಡಿದಂತಾಗಿದೆ. ಹಾಗಾಗಿ ಕನ್ನಡ ವಿಭಾಗಕ್ಕೆ ಬಾಕಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅನುಮತಿ ನೀಡಿ" ಎಂದು ಪತ್ರದಲ್ಲಿ ಮನವಿ ಮಾಡಲಾಗಿದೆ.

ADVERTISEMENT

ಸಾಹಿತ್ಯ ಅಕಾಡೆಮಿಯ ಕನ್ನಡ ಸಲಹಾ ಸಮಿತಿ ಸಂಚಾಲಕರಾದ ಡಾ. ಸಿದ್ದಲಿಂಗಯ್ಯ, ಸಾಹಿತ್ಯ ಅಕಾಡೆಮಿಯ ಪ್ರಾಂತೀಯ ಕಾರ್ಯದರ್ಶಿ ಎಸ್.ಪಿ ಮಹಾಲಿಂಗೇಶ್ವರ, ವಿಜಯ್‌ ಶಂಕರ್‌ ನಿಯೋಗದಲ್ಲಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.