ADVERTISEMENT

85ನೇ ಸಾಹಿತ್ಯ ಸಮ್ಮೇಳನ: ಹೆಚ್ಚುತ್ತಿದೆ ಕನ್ನಡ ನುಡಿ ಜಾತ್ರೆಯ ವೆಚ್ಚ

23 ಗೋಷ್ಠಿಗಳು * ಒಟ್ಟು ₹ 14 ಕೋಟಿ ವೆಚ್ಚ

​ಪ್ರಜಾವಾಣಿ ವಾರ್ತೆ
Published 21 ಜನವರಿ 2020, 20:09 IST
Last Updated 21 ಜನವರಿ 2020, 20:09 IST
ಸಾಹಿತ್ಯ ಸಮ್ಮೇಳನ
ಸಾಹಿತ್ಯ ಸಮ್ಮೇಳನ   

ಬೆಂಗಳೂರು: ಸಾಹಿತಿಗಳು, ಸಾಹಿತ್ಯಾಸಕ್ತರು ಹಾಗೂ ಕನ್ನಡಿಗರನ್ನು ಒಂದೆಡೆ ಸೇರಿಸುವ ಅಕ್ಷರ ಜಾತ್ರೆಯ ವೆಚ್ಚವು ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆ.

ಮೈಸೂರಿನಲ್ಲಿ ನಡೆದ 83ನೇ ಸಾಹಿತ್ಯ ಸಮ್ಮೇಳನಕ್ಕೆ ₹10 ಕೋಟಿ ಅನುದಾನ ನೀಡುವಂತೆ ಜಿಲ್ಲಾಡಳಿತ ಸಲ್ಲಿಸಿದ ಮನವಿಗೆ, ಅಂದಿನ ಸರ್ಕಾರ ಅಂತಿಮವಾಗಿ ₹ 8 ಕೋಟಿ ಬಿಡುಗಡೆ ಮಾಡಿತ್ತು. ಅದೇ ರೀತಿ, ಧಾರವಾಡದಲ್ಲಿ ನಡೆದ 84ನೇ ಸಾಹಿತ್ಯ ಸಮ್ಮೇಳಕ್ಕೆ ₹ 12 ಕೋಟಿ ಒದಗಿಸುವಂತೆ ಸಲ್ಲಿಸಲಾಗಿದ್ದ ಪ್ರಸ್ತಾವಕ್ಕೆ, ಸರ್ಕಾರ ₹ 10 ಕೋಟಿ ನೀಡಿತ್ತು. ಅದರಲ್ಲಿ ಅರ್ಧದಷ್ಟು ಹಣ ಸಮ್ಮೇಳನ ಮುಗಿದ ಮೇಲೆಯೇ ಸಂದಾಯವಾಗಿತ್ತು.ಈ ಬಾರಿ ಸಮ್ಮೇಳನದ ಸ್ವಾಗತ ಸಮಿತಿ ಸಿದ್ಧಗೊಳಿಸಿರುವ ಅಂದಾಜು ಪಟ್ಟಿಯ ಪ್ರಕಾರ ಕಳೆದ ಬಾರಿಗಿಂತ ₹ 4 ಕೋಟಿ ಅಧಿಕ ವೆಚ್ಚ ಆಗಲಿದೆ. ಅಂದರೆ, ₹ 14 ಕೋಟಿ ಖರ್ಚಾಗಲಿದೆ.

‘ಊಟ ಹಾಗೂ ತಿಂಡಿಗೆ ಹೆಚ್ಚಿನ ಹಣ ಖರ್ಚಾಗುತ್ತದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಪರಿಷತ್ತಿಗೆ ₹ 1 ಕೋಟಿ ಬಿಡುಗಡೆಯಾಗಿದೆ. ಉಳಿದ ಹಣವನ್ನು ಸರ್ಕಾರ ನೇರವಾಗಿ ಜಿಲ್ಲಾಡಳಿತಕ್ಕೆ ನೀಡಲಿದ್ದು, ಖರ್ಚಿನ ಮೇಲುಸ್ತುವಾರಿ ಸ್ವಾಗತ ಸಮಿತಿಯದ್ದಾಗಿರುತ್ತದೆ’ ಎಂದುಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮನು ಬಳಿಗಾರ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

‘ಸಮ್ಮೇಳನದಲ್ಲಿ 500 ಪುಸ್ತಕ ಮಳಿಗೆಗಳು ಹಾಗೂ 300 ವಾಣಿಜ್ಯ ಮಳಿಗೆಗಳು ಇರಲಿವೆ. 60 ಜಾನಪದ ಕಲಾ ತಂಡಗಳು ಸಮ್ಮೇಳನಾಧ್ಯಕ್ಷರ ಮೆರವಣಿಗೆಯಲ್ಲಿ ಪಾಲ್ಗೊಳ್ಳಲಿವೆ.ಆ ಭಾಗದ ಸಮಸ್ಯೆಗಳ ಜತೆಗೆ ಭಾಷೆ, ಶಿಕ್ಷಣ, ತಂತ್ರಜ್ಞಾನ ಸೇರಿದಂತೆ ವಿವಿಧ ವಿಷಯಗಳ ಮೇಲೆ ವಿಷಯ ತಜ್ಞರು ಗೋಷ್ಠಿಯಲ್ಲಿ ಬೆಳಕು ಚೆಲ್ಲಲಿದ್ದಾರೆ’ ಎಂದರು.

ಕಲ್ಯಾಣ ಕರ್ನಾಟಕದ ಬಗ್ಗೆ ಚರ್ಚೆ: ಸಮ್ಮೇಳನದಲ್ಲಿ ಒಟ್ಟು 23 ಗೋಷ್ಠಿಗಳು ನಡೆಯಲಿವೆ. ‘ಕಲ್ಯಾಣ ಕರ್ನಾಟಕ: ಅಂದು–ಇಂದು–ಮುಂದು’ ಎಂಬ ವಿಷಯದ ಮೇಲೆ ಪ್ರಥಮ ಗೋಷ್ಠಿ ನಡೆಯಲಿದೆ. 371 ಜೆ ಅನುಷ್ಠಾನ ಮತ್ತು ಅಡಚಣೆಗಳು, ಕಲ್ಯಾಣ ಕರ್ನಾಟಕದ ಚರಿತ್ರೆ ಮತ್ತು ಪರಂಪರೆ, ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ವೈವಿಧ್ಯತೆ ಹಾಗೂ ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿಗತಿಗಳ ಬಗ್ಗೆ ತಜ್ಞರು ವಿಷಯ ಮಂಡಿಸಲಿದ್ದಾರೆ.

ಸ್ತ್ರೀ ಲೋಕ: ತಲ್ಲಣಗಳು, ದಲಿತ ಬಂಡಾಯ:ಸ್ಥಿತ್ಯಂತರದ ನೆಲೆಗಳು, ಕನ್ನಡ ಮಾಧ್ಯಮ ಮತ್ತು ಶಿಕ್ಷಣ, ಮಾಧ್ಯಮ: ಸವಾಲುಗಳು, ಕನ್ನಡ ಭಾಷೆ: ಹೊಸ ತಂತ್ರಜ್ಞಾನ, ಕೃಷಿ ಮತ್ತು ನೀರಾವರಿ, ಕನ್ನಡದಲ್ಲಿ ವಿಜ್ಞಾನ ಸಾಹಿತ್ಯ, ತತ್ವಪದ–ಸೂಫಿ–ಬೌದ್ಧ ಸಾಹಿತ್ಯ ಕುರಿತೂ ಗೋಷ್ಠಿಗಳು ನಡೆಯಲಿವೆ.

*
ಮೂರು ದಿನಗಳ ಸಮ್ಮೇಳನದಲ್ಲಿ 5 ಲಕ್ಷ ಜನ ಭೇಟಿ ನೀಡುವ ನಿರೀಕ್ಷೆಯಿದೆ. ಅದ್ದೂರಿ, ಅರ್ಥಪೂರ್ಣವಾಗಿ ಸಮ್ಮೇಳನ ಮಾಡಲು ಮುಂದಾಗಿದ್ದು, ಶೇ 75 ರಷ್ಟು ತಯಾರಿ ಆಗಿದೆ.
-ಮನು ಬಳಿಗಾರ್, ಕಸಾಪ ಅಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.