ADVERTISEMENT

ಸಾಹಿತ್ಯ ಸಮ್ಮೇಳನ: ಇನ್ನೂ ಕ್ಷೀಣಿಸದ ಒಡಕಿನ ಧ್ವನಿ

ಗಣೇಶ-ಚಂದನಶಿವ
Published 20 ಜನವರಿ 2020, 20:25 IST
Last Updated 20 ಜನವರಿ 2020, 20:25 IST
ಲೋಗೊ
ಲೋಗೊ   

ಕಲಬುರ್ಗಿ: ಅಖಿಲ ಭಾರತ 85ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಕೇವಲ 15 ದಿನಗಳಷ್ಟೇ ಉಳದಿವೆ. ವಿವಿಧ ಸಮಿತಿಯವರು ಸಿದ್ಧತೆಯಲ್ಲಿ ತೊಡಗಿಸಿಕೊಂಡಿದ್ದರೂ ಒಡಕಿನ ಧ್ವನಿ ಇನ್ನೂ ನಿಂತಿಲ್ಲ; ‘ಎಲ್ಲರನ್ನೂ ಒಳಗೊಂಡ ಸಮ್ಮೇಳನ’ ಎಂಬ ಪರಿಕಲ್ಪನೆ ಸಾಕಾರಗೊಂಡು ಸಡಗರ ಮನೆ ಮಾಡಿಲ್ಲ.

ಮೂರು ದಶಕಗಳ ನಂತರ ಸಮ್ಮೇಳನದ ಆತಿಥ್ಯ ಕಲಬುರ್ಗಿಗೆ ದೊರೆತಿದೆ. ಸ್ಥಳೀಯ ಜನಸಾಮಾನ್ಯರೂ ಅಕ್ಷರ ಜಾತ್ರೆಯನ್ನು ಉತ್ಸುಕತೆಯಿಂದ ಎದುರು ನೋಡುತ್ತಿದ್ದಾರೆ. ಇಲ್ಲಿಯಆತಿಥ್ಯ ಸ್ವೀಕರಿಸಲು ರಾಜ್ಯ ಮತ್ತು ಹೊರ ರಾಜ್ಯಗಳ ದಾಖಲೆಯ 20 ಸಾವಿರಕ್ಕೂ ಹೆಚ್ಚು ಪ್ರತಿನಿಧಿಗಳು ನೋಂದಾಯಿಸಿಕೊಂಡಿದ್ದಾರೆ. ಆದರೆ, ಕೆಲವರ ಸ್ವ ಪ್ರತಿಷ್ಠೆ ಮತ್ತು ವಿರೋಧಿಸಲಿಕ್ಕಾಗಿ ವಿರೋಧ ಎಂಬ ಮನೋಭಾವದಿಂದಾಗಿ ನಿತ್ಯವೂ ‘ವಿರೋಧಿ ಚರ್ಚೆ’ಗಳೇ ಹೆಚ್ಚಾಗಿ ನಡೆಯುತ್ತಿವೆ. ಇದು ಸಂಭ್ರಮ ಗೌಣವಾಗುವಂತೆ ಮಾಡಿದೆ.

‘ಸಮ್ಮೇಳನದಲ್ಲಿ ತೊಡಗಿಸಿಕೊಳ್ಳಲು ನಮಗೆ ಅವಕಾಶ ನೀಡಿಲ್ಲ’ ಎಂಬ ಕಾರಣಕ್ಕೆ ಕೆಲ ಸಾಹಿತಿಗಳ ಮತ್ತು ಕನ್ನಡ ಪರ ಸಂಘಟನೆಗಳ ಸಿಟ್ಟು ತಣ್ಣಗಾಗಿಲ್ಲ. ಬಹುತೇಕ ಸಂಘ–ಸಂಸ್ಥೆಗಳ ಪ್ರತಿನಿಧಿಗಳು, ಮಹಿಳಾ ಸಂಘಟನೆಗಳವರು ‘ನಮ್ಮನ್ನು ಕರೆದೇ ಇಲ್ಲ’ ಎನ್ನುತ್ತಿದ್ದಾರೆ.

ADVERTISEMENT

ಈ ವಿದ್ಯಮಾನ,ಸಮ್ಮೇಳನದ ಸ್ವಾಗತ ಸಮಿತಿಯ ಕೋಶಾಧ್ಯಕ್ಷರೂ ಆಗಿರುವ ಜಿಲ್ಲಾಧಿಕಾರಿ ಶರತ್‌ ಬಿ. ಅವರಿಗೂ ಬೇಸರ ತರಿಸಿದೆ. ಕನ್ನಡ ಸಾಹಿತ್ಯ ಪರಿಷತ್‌ ಪದಾಧಿಕಾರಿಗಳ ಸಭೆ ಕರೆದಿದ್ದ ಅವರು, ‘ನಿಮ್ಮೂರಿನ ಶಾಲೆಗಳಲ್ಲಿ ಮಕ್ಕಳಿಗೆ ಸಮ್ಮೇಳನದ ಬಗ್ಗೆ ತಿಳಿಸಲೂ ಸರ್ಕಾರಿ ಆದೇಶ ಬೇಕೆ? ದುಡ್ಡು ಕೊಟ್ಟರಷ್ಟೇ ನೀವು ಕನ್ನಡ ಕೆಲಸ ಮಾಡುತ್ತೀರಾ’ ಎಂದು ಖಾರವಾಗಿ ಪ್ರಶ್ನಿಸಿದ್ದೂ ಆಗಿದೆ.

‘ಸಮ್ಮೇಳನ ಆತಿಥ್ಯ ನಮ್ಮೂರಿಗೆ ಸಿಕ್ಕಿರುವ ಭಾಗ್ಯ. ಒಡಕಿನ ಧ್ವನಿ ಬಿಟ್ಟು, ಎಲ್ಲರೂ ಸಮ್ಮೇಳನದ ಯಶಸ್ಸಿಗೆ ಶ್ರಮಿಸೋಣ. ನಮ್ಮ ಸೌಹಾರ್ದ ಮತ್ತು ದಾಸೋಹ ಸಂಸ್ಕೃತಿಯನ್ನು ನಾಡಿನ ಜನರಿಗೆ ತೋರಿಸೋಣ’ ಎನ್ನುವುದುಹಿರಿಯ ಸಾಹಿತಿ ಡಾ.ವಸಂತ ಕುಷ್ಟಗಿ ಅವರ ಮನವಿ.

‘ಐದು ಸಭೆ ನಡೆಸಿದ್ದು, ಎಲ್ಲರನ್ನೂ ಆಹ್ವಾನಿಸಿದ್ದೇವೆ. ಯಾವ ಸಾಹಿತಿಗಳೂ ಅಪಸ್ವರ ಎತ್ತಿಲ್ಲ. ಕೆಲವರಷ್ಟೇ ಹೀಗೆ ಮಾತನಾಡುತ್ತಿದ್ದಾರೆ. ಮುನಿಸು ಮರೆತು ಅವರೂ ನಮ್ಮೊಂದಿಗೆ ಕೈಜೋಡಿಸುತ್ತಾರೆ’ ಎಂದು ಜಿಲ್ಲಾ ಕಸಾಪ ಅಧ್ಯಕ್ಷ ವೀರಭದ್ರ ಸಿಂಪಿ ವಿಶ್ವಾಸ ವ್ಯಕ್ತಪಡಿಸುತ್ತಾರೆ.

ಇನ್ನೂ ಬಿಡುಗಡೆಯಾಗಿಲ್ಲ ಅನುದಾನ

ಸಮ್ಮೇಳನಕ್ಕೆ ₹ 14 ಕೋಟಿ ವೆಚ್ಚ ತಗುಲುತ್ತದೆ ಎಂದು ಸಮ್ಮೇಳನದ ಸ್ವಾಗತ ಸಮಿತಿ ಅಂದಾಜು ಪಟ್ಟಿ ಸಿದ್ಧಪಡಿಸಿ, ಸರ್ಕಾರಕ್ಕೆ ಕಳಿಸಿದೆ. ಆದರೆ, ಸರ್ಕಾರದಿಂದ ಇನ್ನೂ ಅನುದಾನ ಬಿಡುಗಡೆಯಾಗಿಲ್ಲ. ಧಾರವಾಡದಲ್ಲಿ ನಡೆದ ಸಮ್ಮೇಳನಕ್ಕೆ ರಾಜ್ಯ ಸರ್ಕಾರ ₹ 10 ಕೋಟಿ ಅನುದಾನ ನೀಡಿತ್ತು. ಕಲಬುರ್ಗಿ ಸಮ್ಮೇಳನಕ್ಕೆ ಹೆಚ್ಚಿನ ಅನುದಾನ ಕೊಡಿ ಎಂದುಜಿಲ್ಲೆಯ ಶಾಸಕರೆಲ್ಲ ಒಟ್ಟಾಗಿ ಮುಖ್ಯಮಂತ್ರಿಯವರನ್ನು ಭೇಟಿಯಾಗುವ ಕೆಲಸ ಮಾಡಿಲ್ಲ.

‘ಕಸಾಪ ಕೇಂದ್ರ ಸಮಿತಿ ₹ 5 ಲಕ್ಷ ಮುಂಗಡ ನೀಡಿದೆ.ಸ್ಥಳೀಯರ ದೇಣಿಗೆ ಹಾಗೂ ಸಮ್ಮೇಳನಕ್ಕೆ ನೋಂದಣಿ ಮಾಡಿಸಿಕೊಂಡಿರುವ ಪ್ರತಿನಿಧಿಗಳ ಶುಲ್ಕ ಸೇರಿ ಸಮ್ಮೇಳನದಖಾತೆಯಲ್ಲಿ ₹ 25 ಲಕ್ಷಕ್ಕೂ ಹೆಚ್ಚು ಹಣ ಇದೆ. ನಿತ್ಯದ ಸಿದ್ಧತೆಗೆ ಯಾವುದೇ ತೊಂದರೆಯಾಗಿಲ್ಲ’ ಎನ್ನುವುದು ಜಿಲ್ಲಾಧಿಕಾರಿ ಶರತ್‌ ಬಿ. ಅವರ ವಿವರಣೆ.

‘ಸಮ್ಮೇಳನದಲ್ಲಿ ಯಾವುದಕ್ಕೆ ಎಷ್ಟು ವೆಚ್ಚ ತಗುಲುತ್ತದೆ ಎಂಬ ಪ್ರತ್ಯೇಕ ಅಂದಾಜು ಪಟ್ಟಿ ಸಲ್ಲಿಸುವಂತೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯವರು ಮಾಹಿತಿ ಕೇಳಿದ್ದಾರೆ. ಅನುದಾನ ಬಿಡುಗಡೆಗೆ ಮುಖ್ಯಮಂತ್ರಿಯವರು ಅನುಮೋದನೆ ನೀಡಿದ್ದು, 2–3 ದಿನಗಳಲ್ಲಿ ಹಣ ಬಿಡುಗಡೆಯಾಗಲಿದೆ’ ಎಂದು ಅವರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.