ಸಕಲೇಶಪುರ (ಹಾಸನ): ತಾಲ್ಲೂಕಿನ ಕಾಡುಮನೆ ಬಳಿ ರಣಭಿಕ್ತಿ ರಕ್ಷಿತಾರಣ್ಯದಲ್ಲಿ ಗುರುವಾರ ಬೆಂಕಿ ನಂದಿಸಲು ಹೋಗಿ ಗಾಯಗೊಂಡಿದ್ದ ಅರಣ್ಯ ಇಲಾಖೆಯ ಗಾರ್ಡ್ ಸುಂದರೇಶ್ (42) ಶನಿವಾರ ಬೆಳಿಗ್ಗೆ ಮೃತಪಟ್ಟಿದ್ದಾರೆ.
ಘಟನೆಯಲ್ಲಿ ತೀವ್ರವಾಗಿ ಗಾಯ ಗೊಂಡಿದ್ದ ಫಾರೆಸ್ಟರ್ ಮಂಜುನಾಥ ಹಾಗೂ ಗಾರ್ಡ್ ಸುಂದರೇಶ್ ಅವರನ್ನು ಬೆಂಗಳೂರಿನ ಸೇಂಟ್ ಜಾನ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಶಾಸಕ ಎಚ್.ಕೆ. ಕುಮಾರಸ್ವಾಮಿ ಆಸ್ಪತ್ರೆಗೆ ಭೇಟಿ ನೀಡಿ, ಗಾಯಾಳುಗಳ ಆರೋಗ್ಯ ವಿಚಾರಿಸಿದ್ದರು.
ಕಾಡುಮನೆ ಇಟ್ಟಿಗೆಗೂಡು ಪ್ರದೇಶದಲ್ಲಿ ಬೆಂಕಿ ಹತ್ತಿ ಕೊಂಡಾಗ ಅರಣ್ಯ ಇಲಾಖೆ ಅಧಿಕಾರಿಗಳು ಅಲ್ಲಿಗೆ ತೆರಳಿ
ದ್ದರು. ಗಾಳಿಯ ತೀವ್ರತೆಗೆ ಬೆಂಕಿ ಎಲ್ಲೆಡೆ ಆವರಿಸಿದ್ದರಿಂದ ಅರಣ್ಯ ಇಲಾಖೆಯ ನಾಲ್ವರು ಸಿಬ್ಬಂದಿ ಗಾಯಗೊಂಡಿದ್ದರು.
ಶೇ 80ರಷ್ಟು ಸುಟ್ಟ ಗಾಯಗಳಾಗಿದ್ದ ಸುಂದರೇಶ್ ಸ್ಥಿತಿ ಚಿಂತಾಜನಕವಾಗಿತ್ತು. ಹೀಗಾಗಿ, ಝೀರೊ ಟ್ರಾಫಿಕ್‌ನಲ್ಲಿ ಸುಂದರೇಶ್ ಹಾಗೂ ಮಂಜುನಾಥ ಅವರನ್ನು ಬೆಂಗಳೂರಿನ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು.
ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಸಂಪಿಗೆಸರ ಗ್ರಾಮದ ಸುಂದರೇಶ್ ಮೃತದೇಹವನ್ನು ಶನಿ
ವಾರ ಸಂಜೆ ಸಕಲೇಶಪುರದ ಅರಣ್ಯ ಇಲಾಖೆ ಕಚೇರಿಗೆ ತರಲಾಗಿತ್ತು. ಗೌರವ ಸಲ್ಲಿಸಿದ ಬಳಿಕ ಸ್ವಗ್ರಾಮಕ್ಕೆ
ಕಳುಹಿಸಲಾಯಿತು.
ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನೆರವೇರಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.