ADVERTISEMENT

ಜಿಂದಾಲ್‌ ಉಕ್ಕು ಕಂಪನಿಗೆ 3,677 ಎಕರೆ ಜಮೀನು ಮಾರಾಟ

ಬಿಜೆಪಿ ಅವಧಿಯ ತೀರ್ಮಾನ | ಯಥಾವತ್ ಅನುಮೋದನೆ ನೀಡಿದ ಕಾಂಗ್ರೆಸ್ ಸರ್ಕಾರ

​ಪ್ರಜಾವಾಣಿ ವಾರ್ತೆ
Published 22 ಆಗಸ್ಟ್ 2024, 23:38 IST
Last Updated 22 ಆಗಸ್ಟ್ 2024, 23:38 IST
ಜಿಂದಾಲ್‌ ಉಕ್ಕು ಕಾರ್ಖಾನೆ
ಜಿಂದಾಲ್‌ ಉಕ್ಕು ಕಾರ್ಖಾನೆ   

ಬೆಂಗಳೂರು: ಜಿಂದಾಲ್‌ ಉಕ್ಕು ಕಂಪನಿಗೆ ಬಳ್ಳಾರಿ ಜಿಲ್ಲೆಯಲ್ಲಿ ಒಟ್ಟು 3,677 ಎಕರೆ ಜಮೀನನ್ನು ಮಾರಾಟ ಮಾಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ತೀರ್ಮಾನಿಸಿದೆ.

2021ರಲ್ಲಿ ಬಿ.ಎಸ್‌.ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ, ಇದೇ ಕಂಪನಿಗೆ ಶುದ್ಧಕ್ರಯ ಪತ್ರ ಮಾಡಿಕೊಡುವ ತೀರ್ಮಾನ ವಿರೋಧಿಸಿ ಕಾಂಗ್ರೆಸ್‌ ಬೃಹತ್‌ ಹೋರಾಟ ನಡೆಸಿತ್ತು. ಬಿಜೆಪಿ ಶಾಸಕ ಅರವಿಂದ ಬೆಲ್ಲದ ಸೇರಿ ಆ ಪಕ್ಷದ ಹಲವು ಶಾಸಕರು ತಮ್ಮದೇ ಸರ್ಕಾರದ ಕ್ರಮವನ್ನು ವಿರೋಧಿಸಿದ್ದರು. ರಾಜಕೀಯ ಒತ್ತಡ ಹೆಚ್ಚಾಗಿದ್ದರಿಂದಾಗಿ, ಬಿಜೆಪಿ ಸರ್ಕಾರವು ಸಂಪುಟ ನಿರ್ಧಾರವನ್ನು ವಾಪಸ್ ಪಡೆದಿತ್ತು. 

ಆಗಿನ ಬಿಜೆಪಿ ಸಚಿವ ಸಂಪುಟ ತೆಗೆದುಕೊಂಡಿದ್ದ ನಿರ್ಣಯದಲ್ಲಿ ಯಾವುದೇ ಬದಲಾವಣೆ ಮಾಡದೇ ಯಥಾವತ್ತು ಅನುಮೋದನೆ ನೀಡಲು, ಗುರುವಾರ ನಡೆದ ಸಚಿವ ಸಂಪುಟ ಸಭೆ ನಿರ್ಧರಿಸಿದೆ. 

ADVERTISEMENT

ಕಾನೂನು ಸಚಿವ ಎಚ್‌.ಕೆ.ಪಾಟೀಲ ಅವರು ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ,  ಸಂಡೂರು ತಾಲ್ಲೂಕಿನ ತೋರಣಗಲ್ಲು ಮತ್ತು ಕುರೇಕುಪ್ಪ ಗ್ರಾಮಗಳಲ್ಲಿ 2000.58 ಎಕರೆ ಭೂಮಿಯನ್ನು ಪ್ರತಿ ಎಕರೆಗೆ ₹1,22,200 ರಂತೆ ಮತ್ತು ಮುಸೇನಾಯಕನಹಳ್ಳಿ ಮತ್ತು ಯರಬನಹಳ್ಳಿ ಗ್ರಾಮಗಳಲ್ಲಿನ 1666.75 ಎಕರೆ ಭೂಮಿಯನ್ನು ಪ್ರತಿ ಎಕರೆಗೆ ₹1,50,635 ಅನ್ನು ಅಂತಿಮ ಬೆಲೆಯಾಗಿ ನಿಗದಿಪಡಿಸಲಾಗಿದೆ ಎಂದು ವಿವರಿಸಿದರು. 

ಭೂಮಿಯನ್ನು ಪಡೆದುಕೊಳ್ಳಲು 2006ರಷ್ಟು ಹಿಂದೆಯೇ ಪ್ರಕ್ರಿಯೆ ಆರಂಭಿಸಲಾಗಿತ್ತು. ಕೆಪಿಸಿಎಲ್‌ಗೆ 944 ಎಕರೆ ಪರ್ಯಾಯ ಭೂಮಿ ಖರೀದಿಸುವ ಉದ್ದೇಶಕ್ಕಾಗಿ ಜೆಎಸ್‌ಡಬ್ಲ್ಯು ಸ್ಟೀಲ್ಸ್‌ 2006ರ ಫೆಬ್ರುವರಿ 2ರಂದು ₹18.10 ಕೋಟಿ ಮತ್ತು 2007 ಫೆಬ್ರುವರಿ 5ರಂದು ₹20 ಕೋಟಿ ಪಾವತಿ ಮಾಡಿತ್ತು. ಭೂಸ್ವಾಧೀನಪಡಿಸಿಕೊಳ್ಳುವ ಸಂದರ್ಭದಲ್ಲಿ ಒಂದು ವೇಳೆ ಪರ್ಯಾಯ ಭೂಮಿಯ ಭೂಸ್ವಾದೀನ ವೆಚ್ಚವು ಜೆಎಸ್‌ಡಬ್ಲ್ಯುಗೆ ಹಂಚಿಕೆಯಾದ ವೆಚ್ಚಕ್ಕಿಂತ ಹೆಚ್ಚಾಗಿದ್ದರೆ ಈ ವ್ಯತ್ಯಾಸದ ವೆಚ್ಚವನ್ನು ಸಂಸ್ಥೆಯೇ ಭರಿಸಬೇಕು ಎಂಬ ಷರತ್ತು ವಿಧಿಸಲಾಗಿದೆ ಎಂದು ಅವರು ಹೇಳಿದರು.

2021ರ ಏಪ್ರಿಲ್‌ನಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಶುದ್ಧಕ್ರಯ ಪತ್ರ ಮಾಡಿಕೊಡಲು ತೀರ್ಮಾನಿಸಲಾಗಿತ್ತು. ಆಗ ಸರ್ಕಾರದ ಕ್ರಮ ಸಮರ್ಥಿಸಿಕೊಂಡಿದ್ದ ಅಂದಿನ ಕಾನೂನು ಸಚಿವ ಬಸವರಾಜ ಬೊಮ್ಮಾಯಿ, ‘2006ರಲ್ಲಿ ಜಿಂದಾಲ್‌ ಕಂಪನಿಗೆ ಲೀಸ್‌ ಕಂ ಸೇಲ್‌ ಆಧಾರದಲ್ಲಿ ಜಮೀನು ನೀಡಲಾಗಿತ್ತು. ಗಣಿಗಾರಿಕೆಗೆ ನೀಡಿದ್ದ ಆ ಜಾಗವನ್ನು ಬಳಕೆ ಮಾಡಿದ್ದಾರೆ ಮತ್ತು ಅಲ್ಲಿ ಕಾರ್ಖಾನೆ, ಕಟ್ಟಡಗಳನ್ನು ಸ್ಥಾಪಿಸಿದ್ದಾರೆ. ಗುತ್ತಿಗೆ ಅವಧಿ ಮುಗಿದಿರುವುದರಿಂದ ಶುದ್ಧಕ್ರಯ ಮಾಡಲು ಕಾಂಗ್ರೆಸ್‌–ಜೆಡಿಎಸ್‌ ಸಮ್ಮಿಶ್ರ ಸರ್ಕಾರದ (ಎಚ್‌.ಡಿ. ಕುಮಾರಸ್ವಾಮಿ ಅವಧಿ) ಅವಧಿಯಲ್ಲೇ ಪ್ರಸ್ತಾವನೆ ಸಲ್ಲಿಸಲಾಗಿತ್ತು’ ಎಂದು ಹೇಳಿದ್ದರು.

ಬಿಜೆಪಿಯ ಕೆಲವು ಸದಸ್ಯರು ಇದನ್ನು ವಿರೋಧಿಸಿ ಅಮಿತ್ ಶಾ ಅವರಿಗೆ ಪತ್ರ ಬರೆದಿದ್ದರು. ಆ ಬಳಿಕ ಪ್ರಕ್ರಿಯೆಗೆ ತಡೆ ನೀಡಲಾಗಿತ್ತು. ಕಂಪನಿಗೆ ಶುದ್ಧಕ್ರಯ ಮಾಡುವುದನ್ನು ವಿರೋಧಿಸಿ ಸಾರ್ವಜನಿಕರೊಬ್ಬರು ಹೈಕೋರ್ಟ್‌ ಮೆಟ್ಟಿಲು ಹತ್ತಿದ್ದರು. ಇದಕ್ಕೆ ಸಂಬಂಧಿಸಿದ ಎಲ್ಲ ಕಡತಗಳನ್ನು ಸಲ್ಲಿಸಬೇಕು ಎಂದು ನ್ಯಾಯಾಲಯವು ಸರ್ಕಾರಕ್ಕೆ ಸೂಚಿಸಿತ್ತು.

ಸ್ಪಷ್ಟನೆ ನೀಡದ ಸಚಿವ: ‘ಬಿಜೆಪಿ ಅವಧಿಯಲ್ಲಿ ಶುದ್ಧಕ್ರಯ ಪತ್ರ ಮಾಡಿಕೊಡುವುದನ್ನು ವಿರೋಧಿಸಿ ಹೋರಾಟ ಮಾಡಿದ್ದ ನೀವು ಈಗ ಯಾವುದೇ ಬದಲಾವಣೆ ಇಲ್ಲದೇ ಹೇಗೆ ಒಪ್ಪಿಗೆ ನೀಡಿದ್ದೀರಿ’ ಎಂಬ ಪ್ರಶ್ನೆಗೆ, ಸಚಿವ ಎಚ್‌.ಕೆ.ಪಾಟೀಲ ಸ್ಪಷ್ಟ ಉತ್ತರ ನೀಡಲಿಲ್ಲ.

ಆಡಳಿತದಲ್ಲಿದ್ದಾಗ ಪರ, ವಿಪಕ್ಷದಲ್ಲಿ ವಿರೋಧ

ಮೊದಲ ಒಪ್ಪಿಗೆ

2005: ಕಾಂಗ್ರೆಸ್‌ನ ಧರಂಸಿಂಗ್‌ ಮುಖ್ಯಮಂತ್ರಿಯಾಗಿದ್ದಾಗ ಜಿಂದಾಲ್‌ ಸೌತ್‌ ವೆಸ್ಟ್‌ ಐರನ್‌ ಸ್ಟೀಲ್ಸ್‌ಗೆ ತೋರಣಗಲ್‌ನಲ್ಲಿ ಲೀಸ್‌ ಕಂ ಸೇಲ್‌ (ಗುತ್ತಿಗೆ ಮಾರಾಟ) ಪ್ರತಿ ಎಕರೆಗೆ ₹90,000ದಂತೆ 2,000.58 ಎಕರೆ ಭೂಮಿ ಹಂಚಿಕೆಗೆ ಸಂಪುಟ ಅನುಮೋದನೆ

ಎಚ್‌ಡಿಕೆ ಅವಧಿಯಲ್ಲಿ ಮಂಜೂರು

  • 2006ರ ಜೂನ್‌ 12: ಎಚ್‌.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ 2,000.58 ಎಕರೆ ಜಮೀನು ಆರು ವರ್ಷಗಳ ಲೀಸ್‌ಗೆ ಸರ್ಕಾರದಿಂದ ಮಂಜೂರಾತಿ

  • 2007: ಕುಮಾರಸ್ವಾಮಿ ಅವಧಿಯಲ್ಲೇ ತೋರಣಗಲ್‌, ಮುಸೇನಾಯಕನಹಳ್ಳಿ, ಎರಬನಹಳ್ಳಿ ಗ್ರಾಮಗಳಲ್ಲಿ ಪ್ರತಿ ಎಕರೆಗೆ ₹1.22 ಲಕ್ಷದಂತೆ ಅಡಿಯಲ್ಲಿ 1,666.73 ಎಕರೆ ಹಂಚಿಕೆ

ಸಿದ್ದರಾಮಯ್ಯ ಸರ್ಕಾರದಲ್ಲಿ ಆಕ್ಷೇಪ, ಒಪ್ಪಿಗೆ

  • 2015, ಜನವರಿ 30: ಸಿದ್ದರಾಮಯ್ಯ ಮೊದಲ ಬಾರಿ ಮುಖ್ಯಮಂತ್ರಿಯಾಗಿದ್ದಾಗ ಶುದ್ಧ ಕ್ರಯಪತ್ರ ಮಾಡಿಕೊಡುವಂತೆ ಜಿಂದಾಲ್‌ನಿಂದ ಅರ್ಜಿ

  • 2017, ಡಿಸೆಂಬರ್ 12: ‘ಜಿಂದಾಲ್‌ಗೆ ನೀಡಿರುವ ಜಮೀನಿನಲ್ಲಿ ಅಪಾರ ಪ್ರಮಾಣದ ಖನಿಜ ಸಂಪತ್ತು ಇದ್ದು, ಪರ್ಯಾಯ ಭೂಮಿ ಸ್ವಾಧೀನಕ್ಕೆ ತಗಲುವ ಹೆಚ್ಚುವರಿ ವೆಚ್ಚವನ್ನು ಕಂಪನಿ ಭರಿಸಬೇಕು. ಅಲ್ಲಿಯವರೆಗೆ ಕ್ರಯಪತ್ರ ಮಾಡಬಾರದು’ ಎಂದ ಕಾನೂನು ಇಲಾಖೆ

  • 2018, ಮಾರ್ಚ್‌ 3: ‘ಮಾರಾಟ ಬೆಲೆ ನಿಗದಿಪಡಿಸಿ, ಸಚಿವ ಸಂಪುಟದ ಅನುಮೋದನೆ ಪಡೆದು ಕ್ರಯಪತ್ರ ಮಾಡಿಕೊಡಬಹುದು’ ಎಂದ ಅಡ್ವೊಕೇಟ್‌ ಜನರಲ್‌

ಎಚ್‌ಡಿಕೆ ಸರ್ಕಾರ ಒಪ್ಪಿಗೆ, ವಿರೋಧ

  • 2019ರ ಮೇ 27: ಜಿಂದಾಲ್‌ಗೆ ಪ್ರತಿ ಎಕರೆಗೆ ₹1.22 ಲಕ್ಷದಂತೆ ಒಟ್ಟು 3,667 ಎಕರೆ ಮಾರಾಟ ಮಾಡಲು ಎಚ್‌.ಡಿ.ಕುಮಾರಸ್ವಾಮಿ ನೇತೃತ್ವದ ಮೈತ್ರಿ ಸರ್ಕಾರದ ಸಂಪುಟ ಸಭೆ ಒಪ್ಪಿಗೆ

  • ಮೇ 28: ಆಗ ಕಾಂಗ್ರೆಸ್‌ ಶಾಸಕರಾಗಿದ್ದ ಎಚ್‌.ಕೆ.ಪಾಟೀಲರಿಂದ ಕಡು ವಿರೋಧ, ಸರ್ಕಾರಕ್ಕೆ ಪತ್ರ. ‘ಜಿಂದಾಲ್‌ ಕಂಪನಿಯು ಮೈಸೂರು ಮಿನರಲ್ಸ್‌ಗೆ ಸಾವಿರಾರು ಕೋಟಿ ಬಾಕಿ ಇರಿಸಿಕೊಂಡಿದ್ದು, ಅಂತಹ ವಂಚಕ ಕಂಪನಿಗೆ ಜಮೀನು ಮಾರಾಟ ಮಾಡಬಾರದು’ ಎಂದು ಆಗ್ರಹ

  • ಮೇ 28: ರಾಜ್ಯ ಸರ್ಕಾರ ತನ್ನ ನಿರ್ಧಾರದಿಂದ ಹಿಂದೆ ಸರಿಯಬೇಕು ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಆಗ್ರಹ. ಬಿಜೆಪಿಯಿಂದ ಪ್ರತಿಭಟನೆ

  • ಜೂನ್‌ 7: ಅತ್ಯಂತ ಕಡಿಮೆ ಬೆಲೆಗೆ ಜಿಂದಾಲ್‌ಗೆ ಭೂಮಿ ನೀಡಲು ಮುಖ್ಯಮಂತ್ರಿ ಕುಮಾರಸ್ವಾಮಿ ಲಂಚ ಪಡೆದಿದ್ದಾರೆ: ಯಡಿಯೂರಪ್ಪ ಆರೋಪ

  • ಜೂನ್‌ 11: ವಿರೋಧ ವ್ಯಾಪಕವಾದ ಕಾರಣ, ನಿರ್ಧಾರ ಮರುಪರಿಶೀಲನೆಗೆ ಮುಖ್ಯಮಂತ್ರಿ ಕುಮಾರಸ್ವಾಮಿ, ಸಚಿವರಾದ ಜಿ.ಪರಮೇಶ್ವರ ಮತ್ತು ಕೆ.ಜೆ.ಜಾ‌ರ್ಜ್‌ ಚರ್ಚೆ. ನಂತರದ ದಿನಗಳಲ್ಲಿ ಪ್ರಸ್ತಾವ ಹಾಗೇ ಉಳಿಸಿದ ರಾಜ್ಯ ಸರ್ಕಾರ

ಬಿಎಸ್‌ವೈ ಸರ್ಕಾರದಲ್ಲಿ ಮತ್ತೆ ಒಪ್ಪಿಗೆ, ವಾಪಸ್‌

  • 2021, ಏಪ್ರಿಲ್‌ 21: ಜಿಂದಾಲ್‌ಗೆ 3,667 ಎಕರೆಯನ್ನು ಲೀಸ್‌ ಕಂ ಸೇಲ್‌ ಒಪ್ಪಂದದಂತೆ ಶುದ್ಧ ಕ್ರಯಪತ್ರ ಮಾಡಿಕೊಡಲು ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದ ಸಂಪುಟ ಸಭೆ ಒಪ್ಪಿಗೆ

  • ಆಗಲೂ ಶಾಸಕರಾಗಿದ್ದ, ಈಗಿನ ಸಚಿವ ಎಚ್‌.ಕೆ.ಪಾಟೀಲ, ಬಿಜೆಪಿ ಶಾಸಕ ಅರವಿಂದ ಬೆಲ್ಲದ ವ್ಯಾಪಕ ವಿರೋಧ. ಕಾಂಗ್ರೆಸ್‌ ಶಾಸಕರು ಮತ್ತು ಬಿಜೆಪಿಯ ಕೆಲ ಶಾಸಕರಿಂದಲೂ ವಿರೋಧ

  • 2021, ಮೇ 27: ಸಂಪುಟ ಸಭೆಯ ತೀರ್ಮಾನ ವಾಪಸ್‌ ಪಡೆದ ಸರ್ಕಾರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.