ADVERTISEMENT

₹ 8 ಲಕ್ಷಕ್ಕೆ ಮಕ್ಕಳ ಮಾರಾಟ; ನಾಲ್ವರು ಆರೋಪಿಗಳ ಬಂಧನ

​ಪ್ರಜಾವಾಣಿ ವಾರ್ತೆ
Published 27 ನವೆಂಬರ್ 2023, 20:49 IST
Last Updated 27 ನವೆಂಬರ್ 2023, 20:49 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಬೆಂಗಳೂರು: ಭ್ರೂಣ ಲಿಂಗಪತ್ತೆ ಹಾಗೂ ಗರ್ಭಪಾತ ಪ್ರಕರಣದ ತನಿಖೆ ನಡೆಯುತ್ತಿರುವ ಸಂದರ್ಭದಲ್ಲಿಯೇ ನಗರದಲ್ಲಿ ಮಕ್ಕಳ ಮಾರಾಟ ಜಾಲ ಸಕ್ರಿಯ ಆಗಿರುವುದು ಪತ್ತೆಯಾಗಿದೆ.

ಸಿಸಿಬಿ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.

ತಮಿಳುನಾಡಿನ ಈರೋಡ್‌ ಮುರುಗೇಶ್ವರಿ(22), ಕಣ್ಮನ್ ರಾಮಸ್ವಾಮಿ(51), ಹೇಮಲತಾ (27), ಶರಣ್ಯಾ (33) ಎಂಬುವರನ್ನು ಆರ್.ಆರ್.ನಗರದ ರಾಜರಾಜೇಶ್ವರಿ ದೇವಸ್ಥಾನದ ಬಳಿ ಬಂಧಿಸಲಾಗಿದೆ.

ADVERTISEMENT

ಬೆಂಗಳೂರು ನಿವಾಸಿ, ಪ್ರಮುಖ ಆರೋಪಿ ಮಹಾಲಕ್ಷ್ಮಿಗೆ ಶೋಧ ಕಾರ್ಯ ಮುಂದುವರಿದಿದೆ. ಕಾರ್ಯಾಚರಣೆಯಲ್ಲಿ ಮುರುಗೇಶ್ವರಿ ಬಳಿಯಿದ್ದ 20 ದಿನದ ಹಸುಗೂಸು ರಕ್ಷಿಸಿ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ವ್ಯಾಪಿಸಿದ ಜಾಲ: ‘ತಲೆಮರೆಸಿ ಕೊಂಡಿರುವ ಮಹಾಲಕ್ಷ್ಮಿ, ಮಕ್ಕಳ ಮಾರಾಟ ದಂಧೆಯ ಮಧ್ಯವರ್ತಿಯಾಗಿದ್ದಳು. ಆಕೆಗೆ ಕೆಲವು ವೈದ್ಯರು ಹಾಗೂ ಮಕ್ಕಳಾಗದ ದಂಪತಿ ಪರಿಚಯವಿತ್ತು. ಮಕ್ಕಳಾಗದ ದಂಪತಿಗೆ ₹5ರಿಂದ ₹8 ಲಕ್ಷಕ್ಕೆ ಹಸುಗೂಸುಗಳನ್ನು ಮಾರಾಟ ಮಾಡುತ್ತಿದ್ದರು’ ಎಂದು ಪೊಲೀಸರು ಹೇಳಿದರು.

ಮುರುಗೇಶ್ವರಿಗೆ ಮಗುವೊಂದನ್ನು ರಾಜರಾಜೇಶ್ವರಿ ದೇವಸ್ಥಾನದ ಬಳಿಗೆ ತರುವಂತೆ ಮಹಾಲಕ್ಷ್ಮಿ ಸೂಚಿಸಿದ್ದಳು. ಅದರಂತೆ ನ.24ರಂದು ಹಸುಗೂಸು ಜತೆಗೆ ನಾಲ್ವರು ರಾಜರಾಜೇಶ್ವರಿ ದೇವಸ್ಥಾನ ಬಳಿ ಬಂದಾಗ ನಾಲ್ವರನ್ನು ಬಂಧಿಸಲಾಯಿತು ಎಂದು ಮೂಲಗಳು ತಿಳಿಸಿವೆ.‌

ಮುರುಗೇಶ್ವರಿ ಅವಿವಾಹಿತೆ ಎಂಬುದು ಗೊತ್ತಾಗಿದ್ದು ಆಕೆಯ ಬಳಿಯಿದ್ದ ಮಗು ಯಾರದ್ದು ಎಂಬುದು ಕುರಿತು ತನಿಖೆ ನಡೆಸಲಾ ಗುತ್ತಿದೆ. ಮಗುವನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ ಮಗು ಯಾರದ್ದು ಎಂಬುದನ್ನು ಪತ್ತೆ ಮಾಡಲಾಗುವುದು ಎಂದು ಪೊಲೀಸರು ಹೇಳಿದರು.

ಆರೋಪಿಗಳನ್ನು ಸಿಸಿಬಿ ಪೊಲೀಸರು ವಿಚಾರಣೆಗೆ ಒಳಪಡಿಸಿದ್ದು, 60ಕ್ಕೂ ಹೆಚ್ಚು ಮಕ್ಕಳನ್ನು ಮಾರಾಟ ಮಾಡಿರುವುದು ಗೊತ್ತಾಗಿದೆ. ಆರೋಪಿಗಳು ಮಕ್ಕಳಿಲ್ಲದ ದಂಪತಿಗೆ ಮಕ್ಕಳನ್ನು ಮಾರಾಟ ಮಾಡುತ್ತಿದ್ದರು. ಎಲ್ಲಿಂದ ಮಕ್ಕಳನ್ನು ಕಳವು ಮಾಡಿಕೊಂಡು ತರುತ್ತಿದ್ದರು ಎಂಬುದರ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ತನಿಖಾಧಿಕಾರಿಯೊಬ್ಬರು ಮಾಹಿತಿ ನೀಡಿದರು.

ಹೆಣ್ಣು ಭ್ರೂಣ ಹತ್ಯೆ ಪ್ರಕರಣ ಪೋಷಕರಿಗೆ ನೋಟಿಸ್‌

ಭ್ರೂಣ ಲಿಂಗಪತ್ತೆ ಹಾಗೂ ಗರ್ಭಪಾತ ಪ್ರಕರಣದಲ್ಲಿ ಬಂಧಿತರಾಗಿರುವ ಆರೋಪಿಗಳ ಹೇಳಿಕೆ ಆಧರಿಸಿ, ಕೆಲವು ಪೋಷಕರಿಗೆ ನೋಟಿಸ್‌ ನೀಡಲು ಪೊಲೀಸರು ಸಿದ್ಧತೆ ನಡೆಸಿದ್ದಾರೆ.

ಹೆಣ್ಣು ಭ್ರೂಣ ಪತ್ತೆ ಮಾಡಿಸಿ, ಗರ್ಭಪಾತ ಮಾಡಿಸಿಕೊಂಡ ಪೋಷಕರ ಮಾಹಿತಿಯನ್ನು ಪೊಲೀಸರು ಸಂಗ್ರಹಿಸುತ್ತಿದ್ದಾರೆ.

ಬಂಧಿತ ವೈದ್ಯ ಚಂದನ್ ಬಲ್ಲಾಳ್ ಆಸ್ಪತ್ರೆಯಲ್ಲಿರುವ ರಿಜಿಸ್ಟ್ರಾರ್ ಪುಸ್ತಕ, ಕಂಪ್ಯೂಟರ್ ಸೇರಿದಂತೆ ದಾಖಲಾತಿಗಳನ್ನು ವಶಕ್ಕೆ ಪಡೆಯಲಾಗಿದೆ. ಅವುಗಳಲ್ಲಿ ಅಂದಾಜು 100ಕ್ಕೂ ಅಧಿಕ ಪೋಷಕರ ಮಾಹಿತಿ ದೊರಕಿದೆ ಎಂದು ಪೊಲೀಸ್‌ ಮೂಲಗಳು ಹೇಳಿವೆ.

ಆರೋಪಿಗಳ ವಿಚಾರಣೆಯಲ್ಲಿ ಯಾವೆಲ್ಲ ಜಿಲ್ಲೆಗಳ ಗರ್ಭಿಣಿಯರಿಗೆ ಗರ್ಭಪಾತ ಮಾಡಿಸಲಾಗಿದೆ ಎಂಬ ಮಾಹಿತಿ ನೀಡಿದ್ದಾರೆ. ಈ ಆಧಾರದಲ್ಲಿ ಪೋಷಕರಿಗೆ ನೋಟಿಸ್ ನೀಡಲಾಗುವುದು. ಕಾನೂನು ಸಲಹೆ ಪಡೆದು ಗರ್ಭಪಾತ ಮಾಡಿಸಿಕೊಂಡ ಪೋಷಕರನ್ನು ಸಾಕ್ಷಿದಾರರನ್ನಾಗಿ ಮಾಡಬಹುದು ಅಥವಾ ಅವರ ವಿರುದ್ಧವೂ ಕಾನೂನು ಕ್ರಮಕೈಗೊಳ್ಳಲಾಗುವುದು ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.