ADVERTISEMENT

ಜಿಂದಾಲ್‌ಗೆ ಭೂಮಿ ಮಾರಾಟ; ಬಿಜೆಪಿ ಸರ್ಕಾರದ ನಡೆಗೆ ಎಚ್.ಡಿ. ಕುಮಾರಸ್ವಾಮಿ ಕಿಡಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 28 ಮೇ 2021, 4:17 IST
Last Updated 28 ಮೇ 2021, 4:17 IST
ಎಚ್. ಡಿ. ಕುಮಾರಸ್ವಾಮಿ
ಎಚ್. ಡಿ. ಕುಮಾರಸ್ವಾಮಿ   

ಬೆಂಗಳೂರು: ಬಿಜೆಪಿ ಶಾಸಕರ ಒತ್ತಡ ಹಾಗೂ ಸಾರ್ವಜನಿಕ ವಿರೋಧಕ್ಕೆ ಮಣಿದ ರಾಜ್ಯ ಸರ್ಕಾರ, ಜೆಎಸ್‌ಡಬ್ಲ್ಯೂ ಸ್ಟೀಲ್‌ ಕಂಪನಿಗೆ (ಜಿಂದಾಲ್‌) 3,667 ಎಕರೆ ಭೂಮಿಯನ್ನು ಶುದ್ಧ ಕ್ರಯ ಮಾಡಿಕೊಡುವ ನಿರ್ಧಾರವನ್ನು ಕೈಬಿಟ್ಟಿರುವ ಬೆನ್ನಲ್ಲೇ, ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಪ್ರತಿಕ್ರಿಯಿಸಿದ್ದು, ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಅವರು, ಜಿಂದಾಲ್‌ ಕಂಪನಿಗೆ 3,667 ಎಕರೆ ಭೂಮಿ ನೀಡಲು ನಿರ್ಧರಿಸಿದ್ದ ಬಿಜೆಪಿ ಸರ್ಕಾರ ಈಗ ತನ್ನೊಳಗಿನ ಬಂಡಾಯದಿಂದ, ಅನಿವಾರ್ಯವಾಗಿ ಹಿಂದೆ ಸರಿದಿದೆ. ರಾಜಕೀಯ ಪಕ್ಷವೊಂದು ದ್ವಿಮುಖ ಧೋರಣೆಯ ರಾಜಕಾರಣ ಮಾಡಬಾರದು ಎಂಬುದಕ್ಕೆ ಇದೊಂದು ನಿದರ್ಶನ. ಹಿಂದೆ ಮಾಡಿದ್ದರ ಪಾಪದ ಫಲವನ್ನು ಬಿಜೆಪಿ ಇಂದು ಅನುಭವಿಸುವಂತಾಗಿದೆ. ಆದರೆ, ನಷ್ಟ ಜಾಸ್ತಿಯೇ ಆಗಿದೆ ಎಂದಿದ್ದಾರೆ.

ಮತ್ತೊಂದು ಟ್ವೀಟ್‌ನಲ್ಲಿ ಜಿಂದಾಲ್‌ಗೆ ಲೀಸ್‌ ಕಂ ಸೇಲ್‌ ಆಧಾರದಲ್ಲಿ ಭೂಮಿ ನೀಡಲಾಗಿತ್ತು. ಲೀಸ್‌ ಅವಧಿ ಮುಗಿದಿದ್ದರಿಂದ ಕ್ರಯಪತ್ರ ಮಾಡಿಕೊಡಬೇಕಾಗಿತ್ತು. ಅಷ್ಟನ್ನು ಮಾತ್ರ ಮಾಡಲು ಮುಂದಾಗಿದ್ದ ನನ್ನ ಸರ್ಕಾರದ ವಿರುದ್ಧ ಯಡಿಯೂರಪ್ಪನವರು ಸಲ್ಲದ ಆರೋಪ ಮಾಡಿದ್ದರು. ಆದರೆ ಈಗ? ಅವರು ಅಂದು ನನ್ನ ಮೇಲೆ ಮಾಡಿದ ಆರೋಪಗಳನ್ನೆಲ್ಲ ತಮ್ಮ ಮೇಲೆ ಹೊತ್ತುಕೊಳ್ಳುವಂಥಾಗಿದೆ ಎಂದಿದ್ದಾರೆ.

ವಿರೋಧಕ್ಕಾಗಿ ವಿರೋಧ ಮಾಡುವುದು, ವಿರೋಧ ಪಕ್ಷದಲ್ಲಿದ್ದಾಗ ವಿರೋಧಿಸಿದ್ದನ್ನೇ ಆಡಳಿತಕ್ಕೆ ಬಂದಾಗ ಕದ್ದು ಮುಚ್ಚಿ ಮಾಡುವುದು ಬಿಜೆಪಿ 'ಸಂಸ್ಕೃತಿ'. ಬಿಜೆಪಿ ಪಾಲಿಸಿಕೊಂಡು ಬಂದ ಈ ಸಂಸ್ಕೃತಿ ಇಂದು ಅವರಿಗೆ ತಿರುಗುಬಾಣವಾಗಿದೆ. ನಾವು ಮಾಡಿದ ಕರ್ಮಗಳು ನಮ್ಮನ್ನು ಹಿಂಬಾಲಿಸಿಕೊಂಡು ಬಂದು ಪಾಠ ಕಲಿಸುತ್ತವೆ ಎಂಬುದಕ್ಕೆ ಜಿಂದಾಲ್‌ ಸಾಕ್ಷಿ ಎಂದು ಕುಮಾರಸ್ವಾಮಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.