ADVERTISEMENT

ಜಾತಿ ವ್ಯವಸ್ಥೆ ವಿರುದ್ಧ ಇದ್ದೇನೆ ಎನ್ನುವ ಕಾರಣಕ್ಕೆ ಮಸಿ ಬಳಿಯಲು ಯತ್ನ: ಸಿಎಂ

​ಪ್ರಜಾವಾಣಿ ವಾರ್ತೆ
Published 7 ಅಕ್ಟೋಬರ್ 2024, 16:18 IST
Last Updated 7 ಅಕ್ಟೋಬರ್ 2024, 16:18 IST
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ‘ಸಮರ್ಥ ಜನ ನಾಯಕ– ವಿ.ಎಸ್‌. ಉಗ್ರಪ್ಪ’‌ ಕೃತಿಯನ್ನು ಬಿಡುಗಡೆ ಮಾಡಿದರು. ಬರಗೂರು ರಾಮಚಂದ್ರಪ್ಪ, ವಿ.ಎಸ್‌. ಉಗ್ರಪ್ಪ, ಡಿ.ಕೆ. ಶಿವಕುಮಾರ್, ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್ ಇದ್ದರು
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ‘ಸಮರ್ಥ ಜನ ನಾಯಕ– ವಿ.ಎಸ್‌. ಉಗ್ರಪ್ಪ’‌ ಕೃತಿಯನ್ನು ಬಿಡುಗಡೆ ಮಾಡಿದರು. ಬರಗೂರು ರಾಮಚಂದ್ರಪ್ಪ, ವಿ.ಎಸ್‌. ಉಗ್ರಪ್ಪ, ಡಿ.ಕೆ. ಶಿವಕುಮಾರ್, ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್ ಇದ್ದರು   

ಬೆಂಗಳೂರು: ‘ಸಾಮಾಜಿಕ ನ್ಯಾಯ, ಶೋಷಿತ- ದಮನಿತರ ಪರವಾಗಿ ಮತ್ತು ಜಾತಿ ವ್ಯವಸ್ಥೆ ವಿರುದ್ಧ ಇದ್ದೇನೆ ಎನ್ನುವ ಕಾರಣಕ್ಕೆ ನನಗೆ ಮಸಿ ಬಳಿಯಲು ಕೆಲವರು ಯತ್ನಿಸುತ್ತಿದ್ದಾರೆ. ಈ ಪ್ರಯತ್ನಗಳು ಹೇಗೆ ಯಶಸ್ವಿಯಾಗುತ್ತದೆ ಎಂದು ನಾನೂ ನೋಡುತ್ತೇನೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಕೊಂಡಜ್ಜಿ ಬಸಪ್ಪ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ‘ಸಮರ್ಥ ಜನ ನಾಯಕ– ವಿ.ಎಸ್‌. ಉಗ್ರಪ್ಪ’ (ಲೇಖಕರು: ವೀರೇಶ ನಾಯಕ ಬೈಲಮರ್ಚೇಡ್‌ ಮತ್ತು ಗೂರೂ ಶ್ರೀರಾಮುಲು) ಕೃತಿಯನ್ನು ಭಾನುವಾರ ಬಿಡುಗಡೆ ಮಾಡಿ ಅವರು ಮಾತನಾಡಿದರು.

‘ನಾನು ಬಳ್ಳಾರಿ ಪಾದಯಾತ್ರೆ ಮಾಡುವುದಕ್ಕೂ ಮೊದಲೇ ಉಗ್ರಪ್ಪ ಗಣಿ ಹಗರಣ ಮತ್ತು ರೆಡ್ಡಿ ಸಹೋದರರ ವಿಚಾರದ ಬಗ್ಗೆ ಸತ್ಯ ಶೋಧನಾ ವರದಿ ನೀಡಿದ್ದರು. ಈ ವರದಿ ಬಳ್ಳಾರಿ ಪಾದಯಾತ್ರೆಗೆ ನಾನು ತೋಳು ತಟ್ಟುವಂತಾಯಿತು’ ಎಂದರು.

ADVERTISEMENT

‘ಆರೆಸ್ಸೆಸ್‌ ಹಿನ್ನೆಲೆಯಿಂದ ರಾಜಕಾರಣಕ್ಕೆ ಬಂದಿರುವ ಉಗ್ರಪ್ಪ, ಅಡ್ವಾಣಿ, ವಾಜಪೇಯಿ ಜತೆ ತುರ್ತು ಪರಿಸ್ಥಿತಿ ವಿರೋಧಿಸಿ ಜೈಲು ವಾಸ ಅನುಭವಿಸಿದ್ದರು. ನಂತರ ಆರೆಸ್ಸೆಸ್ ಸಿದ್ದಾಂತ ವಿರೋಧಿಸಿ ಜನತಾ ಪಕ್ಷ ಮತ್ತು ಕಾಂಗ್ರೆಸ್ ಸೇರಿದರು’ ಎಂದರು.

ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ‘ಉಗ್ರಪ್ಪ ಅವರು ಗುಂಡು ಹೊಡೆದ ರೀತಿಯಲ್ಲಿ ಸದನದ ಹೊರಗೆ ಮತ್ತು ಒಳಗೆ ಮಾತನಾಡುತ್ತಾರೆ’ ಎಂದು ಪ್ರಶಂಸಿದರು.

‘ಗಾಜಿನ ಮನೆಯಲ್ಲಿ ಕುಳಿತವರು ಈಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ರಾಜೀನಾಮೆ ಕೇಳುತ್ತಿದ್ದಾರೆ. ರಾಜೀನಾಮೆ ಕೇಳಲು ಅವರು ಯಾರು?’ ಎಂದು ಪಿ.ಜಿ.ಆರ್. ಸಿಂಧ್ಯ ಪ್ರಶ್ನಿಸಿದರು.

‘ಜನತಾ ಪರಿವಾರ ರಾಜ್ಯದಲ್ಲಿ ಅಧಿಕಾರಕ್ಕೆ ಬರಲು ದೇವರಾಜ ಅರಸು ಮತ್ತು ಬಂಗಾರಪ್ಪ ಕಾರಣ. ದೇವರಾಜ ಅರಸು ಬಡವರ ಪರ ಕಾರ್ಯಕ್ರಮ ರೂಪಿಸಿದರು. ಅಂಥವರನ್ನೇ ಕೆಲವರು ಕಟಕಟೆಗೆ ನಿಲ್ಲಿಸಿದರು. ಅಂಥವರೇ ಈಗ ಹಲವು ಯೋಜನೆ ಜಾರಿಗೆ ತಂದಿರುವ ಸಿದ್ದರಾಮಯ್ಯ ಅವರಿಗೆ ಅದೇ ರೀತಿಯ ಕಾಟ ಕೊಡುತ್ತಿದ್ದಾರೆ’ ಎಂದರು.

ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್, ಸಾಹಿತಿ ಬರಗೂರು ರಾಮಚಂದ್ರಪ್ಪ, ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷ ಎಚ್.ಎಂ. ರೇವಣ್ಣ, ವಿಧಾನ ಪರಿಷತ್ ಸದಸ್ಯ ಪ್ರಕಾಶ್ ರಾಥೋಡ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.