ಬೆಂಗಳೂರು: ‘ನಾಲ್ಕು ದಶಕಗಳಿಂದ ಪ್ರಾಮಾಣಿಕವಾಗಿ ಹಿಂದುಳಿದ ವರ್ಗಗಳು, ದಲಿತರು, ಅಲ್ಪ ಸಂಖ್ಯಾತರು, ಬಡವರು, ಕೂಲಿ ಕಾರ್ಮಿಕರು, ಶೋಷಿತ ವರ್ಗಗಳ ಪರ ಯಾವುದೇ ಕಳಂಕವಿಲ್ಲದೆ ಕೆಲಸ ಮಾಡಿದ್ದ ನನ್ನ ವ್ಯಕ್ತಿತ್ವಕ್ಕೆ ಮಸಿ ಬಳಿಯಲು ಅಂಥ ಮನೋಸ್ಥಿತಿಯ ಜನರು ಪ್ರಯತ್ನಿಸುತ್ತಿದ್ದಾರೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
‘ಹಿಂದುಳಿದ ವರ್ಗಗಳ ನಾಯಕ ಎಂದೇ ಖ್ಯಾತರಾಗಿದ್ದ, ನಾಡು ಕಂಡ ಧೀಮಂತ ಮುಖ್ಯಮಂತ್ರಿಯಾಗಿದ್ದ ದೇವರಾಜ ಅರಸರು, ಧರ್ಮಸಿಂಗ್ ಅವರ ವಿಚಾರದಲ್ಲೂ ಹೀಗೆ ಆಗಿತ್ತು. ಈಗ ನನ್ನ ವಿಚಾರಕ್ಕೂ ಬಂದಿದ್ದಾರೆ. ಅಡ್ಡಿಯಿಲ್ಲ ಬನ್ನಿ. ಬಂದದ್ದು ಒಳ್ಳೆಯದೆ ಆಯಿತು. ರಾಜ್ಯದ ಜನ ನೋಡುತ್ತಿದ್ದಾರೆ. ದಮನಿತ ವರ್ಗಗಳ ಜನಸಮೂಹದಿಂದ ಬಂದವರು ರಾಜಕಾರಣವನ್ನೆ ಮಾಡಬಾರದೆಂಬ ನಿಲುವು ಇವರದು. ಆದ್ದರಿಂದಲೇ ಈ ರೀತಿ ‘ಮುಡಾ’ ವಿಚಾರದಲ್ಲಿ ಒಂದು ಗುಲಗಂಜಿಯಷ್ಟು ನ್ಯೂನತೆಯಿಲ್ಲದಿದ್ದರೂ ಕೆಟ್ಟ ರಾಜಕಾರಣ ಮಾಡುತ್ತಿದ್ದಾರೆ’ ಎಂದು ಸಿದ್ದರಾಮಯ್ಯ ಭಾವುಕರಾದರು.
‘ಬಿಜೆಪಿ–ಜೆಡಿಎಸ್‌ಗಳೆರಡೂ ಸೇರಿಕೊಂಡು ನನ್ನ ಜೀವಮಾನದಲ್ಲೆ ಕಾಣದಷ್ಟು ಕೆಟ್ಟ ರಾಜಕಾರಣವನ್ನು ಮಾಡುತ್ತಿವೆ. ವಿಚಾರವೇ ಇಲ್ಲದೆ ವೈಯಕ್ತಿಕವಾಗಿ ತೇಜೋವಧೆ ಮಾಡುವ ಕೆಲಸವನ್ನು ಮಾಡುತ್ತಿವೆ. ಕರ್ನಾಟಕದಲ್ಲಿ ಕುಸಿದು ಹೋಗುತ್ತಿರುವ ಜನಪ್ರಿಯತೆಯನ್ನು ಮರುಸ್ಥಾಪಿಸಿಕೊಳ್ಳಲು ಸಾವಿರ ಸಲ ಸುಳ್ಳು ಹೇಳಲು ಹೊರಟಿದ್ದಾರೆ. ಸಾವಿರ ಸುಳ್ಳು ಹೇಳಿದರೆ ನಿಜವೂ ಸುಳ್ಳಿನಂತೆ ಆಗುತ್ತದೆ ಎಂಬ ಜಾಗತಿಕ ಹಿಟ್ಲರ್‌ವಾದಿ ಹಾಗೂ ಭಾರತದ ಪೇಶ್ವೆವಾದಿ ಮನಸ್ಥಿತಿಯನ್ನು ಬಿಜೆಪಿಯವರು ಹೊಂದಿದ್ದಾರೆ. ಅದನ್ನು ಮುಡಾ ವಿಚಾರದಲ್ಲಿ ಪ್ರತಿಪಾದಿಸುತ್ತಿದ್ದಾರೆ’ ಎಂದರು.
‘ನಿಮ್ಮ ಹಿಂದೆ ನಿಂತು ಆಟ ಆಡುತ್ತಿರುವ ಸೈದ್ಧಾಂತಿಕ ಗುರುಗಳಿಗೆ ಕರ್ನಾಟಕದ ಜನರ ಮನೋಸ್ಥಿತಿ ಅರ್ಥವಾಗುತ್ತಿದೆ. ಜನ ನಮ್ಮಿಂದ ದೂರ ಸರಿಯುತ್ತಿದ್ದಾರೆ ಎಂಬ ಅರಿವು ಅವರಿಗೆ ಗೊತ್ತಿದೆ. ಆದ್ದರಿಂದಲ್ಲೇ ಮುಡಾ ಪ್ರಕರಣ ಎಂಬ ಕಾಗಕ್ಕ-ಗೂಬಕ್ಕನ ಕಥೆ ಕಟ್ಟಿ ಜನರನ್ನು ನಂಬಿಸಲು ಹೊರಟಿದ್ದಾರೆ. ಬಿಜೆಪಿ- ಜೆಡಿಎಸ್‌ನವರ ಮೆದುಳು ಖಾಲಿಯಾಗಿದೆ. ಬೌದ್ಧಿಕವಾಗಿ ದಿವಾಳಿಯಾಗಿದ್ದಾರೆ. ಅದಕ್ಕಾಗಿ ತಲೆಬುಡವಿಲ್ಲದ, ಹಗರಣದ ಯಾವುದೇ ದಾಖಲೆಗಳೂ ಇಲ್ಲದ ಪ್ರಕರಣದಲ್ಲಿ ಅನಗತ್ಯವಾಗಿ ತಮ್ಮ ಹೆಸರು ಬಳಸಿಕೊಂಡು ತೇಜೋವಧೆ ಮಾಡುವ ಕೆಲಸ ಮಾಡುತ್ತಿದ್ದಾರೆ’ ಎಂದು ದೂರಿದರು.
ವಾಲ್ಮೀಕಿ ನಿಗಮದ ಹಗರಣದಲ್ಲೂ ತಳುಕು
‘ವಾಲ್ಮೀಕಿ ನಿಗಮದ ಹಗರಣದಲ್ಲಿ ಮುಖ್ಯಮಂತ್ರಿ ಪಾತ್ರ ನಯಾಪೈಸೆಯಷ್ಟು ಇರುವುದಿಲ್ಲವೆಂದು ಬಿಡಿಸಿ ಹೇಳಿದರೂ, ದಾಖಲೆಗಳನ್ನು ಕೊಟ್ಟರೂ, ಬಿಜೆಪಿ–ಜೆಡಿಎಸ್ ನಂಬಲು ತಯಾರಿಲ್ಲ. ಸದನದಲ್ಲಿ ಗಲಾಟೆ ಮಾಡಿದ್ದು, ಅಸಂಸದೀಯವಾಗಿ ನಡೆದುಕೊಂಡಿದ್ದು, ಸಾರ್ವಜನಿಕರ ಹಣ ಪೋಲು ಮಾಡಿದ್ದು ಬಿಟ್ಟರೆ ಒಂದೇ ಒಂದು ದಾಖಲೆ ನೀಡಲಿಲ್ಲ. ದಾಖಲೆ ನೀಡದೆ, ಅವುಗಳನ್ನು ಬಿಡುಗಡೆ ಮಾಡದೆ ಬರೀ ಜಕ್ಕರಾಯನಕೆರೆ ಭಾಷಣ ಮಾಡುವುದು, ಅವರು ಮಾಡಿದ ಭಾಷಣವನ್ನು ಮಾಧ್ಯಮಗಳು ವರದಿ ಮಾಡಿದ್ದು ಬಿಟ್ಟರೆ ಬೇರೆ ಏನಾದರೂ ನಡೆಯಿತಾ? ನಾನೂ ಕೂಡ ವಿರೋಧ ಪಕ್ಷದ ನಾಯಕನಾಗಿ ಸುದೀರ್ಘ ಅವಧಿ ಕೆಲಸ ಮಾಡಿದ್ದೇನೆ. ದಾಖಲೆಗಳಿಲ್ಲದೆ ಒಂದೇ ಒಂದು ಮಾತನ್ನು ನಾನು ಆಡಿಲ್ಲ. ಸಂಸದೀಯ ಪ್ರಜಾಪ್ರಭುತ್ವವು ಯಾವುದಕ್ಕೆ ಮಾದರಿಯಾಗಬಾರದೊ ಅದಕ್ಕೆ ವಿರೋಧ ಪಕ್ಷಗಳ ಶಾಸಕರು ಮಾದರಿಯಾದರು. ಇಂಥ ಬೇಜವಾಬ್ಧಾರಿ ಮತ್ತು ಚೈಲ್ಡಿಶ್ ವರ್ತನೆಯ ವಿರೋಧ ಪಕ್ಷವನ್ನು ನನ್ನ ರಾಜಕೀಯ ಜೀವನದಲ್ಲೇ ನೋಡಿಲ್ಲ’ ಎಂದರು.
ಜನ ದೇಶದಲ್ಲಿ ಹಾಗೂ ರಾಜ್ಯದಲ್ಲಿ ಮನುವಾದವನ್ನು ತಿರಸ್ಕರಿಸಲು ಪ್ರಾರಂಭಿಸಿದ್ದಾರೆ. ಇದು ಬಿಜೆಪಿ ನಾಯಕರಿಗೂ ಅರ್ಥವಾಗುತ್ತಿದೆ. ದಿನದಿಂದ ದಿನಕ್ಕೆ ಆ ಪಕ್ಷದ ಮತಗಳಿಕೆ ಪ್ರಮಾಣ ಕಡಿಮೆಯಾಗುತ್ತಿದೆ. ಹಾಗಾಗಿಯೆ, ಮುಖ್ಯಮಂತ್ರಿಯನ್ನು ಕೇಂದ್ರವಾಗಿಟ್ಟುಕೊಂಡು ವೈಯಕ್ತಿಕ ದಾಳಿ ಪ್ರಾರಂಭಿಸಿದ್ದಾರೆ’ ಎಂದು ಗದ್ಗತಿತರಾದರು.
‘ಯಾವುದೂ ಗಾಯದ ರೂಪದಲ್ಲೆ ಉಳಿಯಬಾರದು. ಗಾಯದ ಒಳಗಿರುವ ಕೆಟ್ಟ ರಕ್ತ ಒಡೆದು ಹೊರಬರಬೇಕು. ಆಗಲೇ ಮನುಷ್ಯ ಆರೋಗ್ಯವಂತನಾಗುವುದು. ಹಾಗೆಯೆ ಬಿಜೆಪಿ-ಜೆಡಿಎಸ್‌ನವರ ಕೋಮುವಾದಿ-ಫ್ಯೂಡಲ್ ತಲೆಯೊಳಗೂ ದ್ವೇಷ, ಅಸಹನೆ ಎಂಬ ಕೀವು-ಕೆಟ್ಟ ರಕ್ತ ತುಂಬಿದೆ. ಅದು ಒಡೆದು ಹೊರಬರಬೇಕು. ಆ ದಿನಗಳು ಹತ್ತಿರ ಬಂದಿವೆ’ ಎಂದು ಮಾರ್ಮಿಕವಾಗಿ ಪ್ರತಿಕ್ರಿಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.