ಶಿವಮೊಗ್ಗ: ನೊಂದ ಮಹಿಳೆಯರು ಅನಗತ್ಯವಾಗಿ ಪೊಲೀಸ್ ಠಾಣೆಗಳಿಗೆ ಅಲೆಯುವುದನ್ನು ತಪ್ಪಿಸುವ ಮಹಿಳಾ ಸಂಚಾರ ಜಾಗೃತಿ ದಳ ಶೋಷಿತರ ಬಾಳಲ್ಲಿ ಹೊಸ ಭರವಸೆ ಮೂಡಿಸಿದೆ.
ಜಿಲ್ಲಾ ಪೊಲೀಸರು ಮತ್ತು ಇತರೆ ಇಲಾಖೆಗಳ ಸಹಯೋಗದಲ್ಲಿ ಒಂದು ತಿಂಗಳ ಹಿಂದೆ ಅಂದಿನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಎಂ.ಅಶ್ವಿನಿ ಅವರು ಈ ಸಂಚಾರ ದಳ ಅಸ್ತಿತ್ವಕ್ಕೆ ತಂದಿದ್ದರು.
ಮಹಿಳಾ ಪೊಲೀಸ್, ಕಾನೂನು ಸೇವಾ ಪ್ರಾಧಿಕಾರ, ಆರೋಗ್ಯ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ, ಸಾರ್ವಜನಿಕ ಶಿಕ್ಷಣ ಇಲಾಖೆ, ಮಹಿಳಾ ಸಾಂತ್ವನ ಕೇಂದ್ರ, ಕೌಟುಂಬಿಕ ಸಲಹಾ ಕೇಂದ್ರ, ಮಕ್ಕಳ ಕಲ್ಯಾಣ ಸಮಿತಿಯ ಅಧಿಕಾರಿಗಳು, ಸಿಬ್ಬಂದಿ ಒಳಗೊಂಡ ಸಂಚಾರ ದಳ ಜಿಲ್ಲೆಯ ಗ್ರಾಮೀಣ ಪ್ರದೇಶಗಳಿಗೆ ತೆರಳಿ, ಅಲ್ಲಿನ ಮಹಿಳೆಯರ ಅಹವಾಲು ಸ್ವೀಕರಿಸುತ್ತಿದೆ.
ಸ್ಥಳದಲ್ಲೇ ಪರಿಹಾರ ದೊರಕಿಸುತ್ತದೆ. ಕಿರುಕುಳ ನೀಡುವವರ ವಿರುದ್ಧ ಕ್ರಮ ಜರುಗಿಸುತ್ತಿದೆ.
ವಾರದಲ್ಲಿ ಎರಡು ದಿನಗಳು (ಪ್ರತಿ ಸೋಮವಾರ ಹಾಗೂ ಶುಕ್ರವಾರ) ಐದು ಹಳ್ಳಿಗಳಿಗೆ ಭೇಟಿ ನೀಡುತ್ತಿದೆ. ಭೇಟಿ ನೀಡುವ ಮೊದಲು ಪೊಲೀಸರ ಸಮ್ಮುಖದಲ್ಲಿ ಸಭೆ ನಡೆಯುವ ಕುರಿತು ಪ್ರಚಾರ ನಡೆಸಲಾಗುತ್ತದೆ. ಗ್ರಾಮದ ಎಲ್ಲ ಮಹಿಳೆಯರೂ ಕಡ್ಡಾಯವಾಗಿ ಹಾಜರಿರುವಂತೆ ನೋಡಿಕೊಳ್ಳಲಾಗುತ್ತದೆ.
ದೌರ್ಜನ್ಯಕ್ಕೆ ಒಳಪಟ್ಟ ಮಹಿಳೆಯರಿಗೆ ಕಾನೂನು ಸಲಹೆ, ಪರಿಹಾರ, ತಾತ್ಕಾಲಿಕ ಆಶ್ರಯ ನೀಡುವುದು. ಯಾವುದೇ ಠಾಣೆಯಲ್ಲಿ ದಾಖಲಾದ ಪ್ರಕರಣಗಳಿಗೆ ಉಚಿತ ಕಾನೂನಿನ ನೆರವು ನೀಡುವುದು. ದೌರ್ಜನ್ಯಕ್ಕೆ ಒಳಗಾದ ಮಹಿಳೆಯರಿಗೆ ಸಿಗಬೇಕಾದ ಪರಿಹಾರ ದೊರಕಿಸುವುದು. ಆಶ್ರಯ ಬಯಸಿದವರಿಗೆ ಅಗತ್ಯ ಸೌಲಭ್ಯ ಕಲ್ಪಿಸುವುದು. ಕೌಟುಂಬಿಕ ವಿವಾದಗಳಲ್ಲಿ ನ್ಯಾಯ, ಪರಿಹಾರ ಪಡೆಯಲು ಸಹಕಾರ ನೀಡಲಾಗುತ್ತಿದೆ.
ಮೊದಲ ಹಂತದಲ್ಲಿಭದ್ರಾವತಿ ತಾಲ್ಲೂಕಿನ 40 ಹಳ್ಳಿಗಳಿಗೆ ಭೇಟಿ ನೀಡಲಾಗಿದೆ. ಹಲವರಿಗೆ ಸ್ಥಳದಲ್ಲೇ ಪರಿಹಾರ ದೊರಕಿಸಲಾಗಿದೆ. ಸ್ವೀಕರಿಸಿದಉಳಿದಅರ್ಜಿಗಳನ್ನು ತ್ವರಿತವಾಗಿ ವಿಲೇವಾರಿ ಮಾಡಲು ಪ್ರತ್ಯೇಕ ಡೆಸ್ಕ್ ರಚಿಸಲಾಗಿದೆ. ವಿವಿಧ ಇಲಾಖೆಗಳ ಮಧ್ಯೆ ಸಮನ್ವಯಕ್ಕಾಗಿ ನೋಡಲ್ ಅಧಿಕಾರಿ ನೇಮಿಸಲಾಗಿದೆ.
***
ಸರ್ಕಾರಿ ಕಚೇರಿಗಳಿಗೆ ಅಲೆಯುವುದನ್ನು ತಪ್ಪಿಸಲು ಸಂಚಾರ ದಳ ಸ್ಥಾಪಿಸಲಾಗಿದೆ. ಇದರಿಂದ ಸಾಕಷ್ಟು ಮಹಿಳೆಯರು ಪರಿವರ್ತನೆಯ ಹಾದಿಯಲ್ಲಿ ಸಾಗುತ್ತಿದ್ದಾರೆ.
– ಡಾ.ಎಂ.ಅಶ್ವಿನಿ, ಮಹಿಳಾ ಪೊಲೀಸ್ ಜಾಗೃತ ದಳದ ರೂವಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.