ADVERTISEMENT

ಮರಳು; ₹76 ಕೋಟಿ ಹೊರೆ: ತೆರವಿಗಾಗಿ ಸರ್ಕಾರಕ್ಕೆ ಅದಾನಿ ಪೋರ್ಟ್ಸ್‌ ನೋಟಿಸ್‌

ಕೃಷ್ಣ ಪಟ್ಟಣಂ ಬಂದರಿನಲ್ಲಿ ಸಂಗ್ರಹ

ಚಂದ್ರಹಾಸ ಹಿರೇಮಳಲಿ
Published 25 ಆಗಸ್ಟ್ 2024, 23:30 IST
Last Updated 25 ಆಗಸ್ಟ್ 2024, 23:30 IST
<div class="paragraphs"><p>ಸಾಂಕೇತಿಕ ಚಿತ್ರ&nbsp;</p></div>

ಸಾಂಕೇತಿಕ ಚಿತ್ರ 

   

ಬೆಂಗಳೂರು: ಆಂಧ್ರ ಪ್ರದೇಶದ ಕೃಷ್ಣ ಪಟ್ಟಣಂ ಬಂದರಿನಲ್ಲಿ ದಾಸ್ತಾನು ಮಾಡಿರುವ 89 ಸಾವಿರ ಟನ್‌ ಮರಳನ್ನು ಏಳು ವರ್ಷಗಳಿಂದ ತೆರವುಗೊಳಿಸದ ಕರ್ನಾಟಕ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿರುವ ಅದಾನಿ ಪೋರ್ಟ್ಸ್‌ ಕಂಪನಿ, ದಾಸ್ತಾನು ಶುಲ್ಕ ₹76 ಕೋಟಿ ಪಾವತಿಸುವಂತೆ ಸೂಚಿಸಿದೆ.

ರಾಜ್ಯದಲ್ಲಿನ ಮರಳು ಕೊರತೆ ನೀಗಿಸಲು 2017ರಲ್ಲಿ ಆಮದು ಮಾಡಿಕೊಂಡಿದ್ದ ಮಲೇಷ್ಯಾ ಮರಳನ್ನು ದಂಡ ಪಾವತಿಸಿ, ತಕ್ಷಣ ತೆರವು ಮಾಡಬೇಕು. ಇಲ್ಲದಿದ್ದರೆ ಹರಾಜು ಹಾಕಲಾಗುವುದು ಎಂದು ಬಂದರಿನ ಒಡೆತನ ಹೊಂದಿರುವ ಅದಾನಿ ಕಂಪನಿ ನೋಟಿಸ್‌ ನೀಡಿದೆ. 

ADVERTISEMENT

ಸರ್ಕಾರಿ ಸ್ವಾಮ್ಯದ ಮೈಸೂರು ಸೇಲ್ಸ್‌ ಇಂಟರ್‌ನ್ಯಾಷನಲ್‌ ಲಿಮಿಟೆಡ್‌ (ಎಂಎಸ್‌ಐಎಲ್‌) ಮತ್ತು ಇತರ ಎಂಟು ಖಾಸಗಿ ಕಂಪನಿಗಳು ವಿದೇಶದಿಂದ ಆಮದು ಮಾಡಿಕೊಳ್ಳಲು ಪರವಾನಗಿ ಪಡೆದುಕೊಂಡಿ
ದ್ದವು. ಅವುಗಳಲ್ಲಿ ಎಂಎಸ್‌ಐಎಲ್‌, ಚೆನ್ನೈನ  ಇಂಟೆಗ್ರೇಟೆಡ್‌ ಸರ್ವಿಸ್‌ ಪಾಯಿಂಟ್‌, ಟಿಎಂಟಿ ಮತ್ತು ಆಕಾರ್‌ ಎಂಟರ್‌ಪ್ರೈಸಸ್‌ ಕಂಪನಿಗಳು ಮರಳು ಆಮದು ಮಾಡಿಕೊಂಡಿದ್ದವು. ಜಾಗತಿಕ ಟೆಂಡರ್‌ ಮೂಲಕ ಎಂಎಸ್‌ಐಎಲ್‌ ಮಲೇಷ್ಯಾದಿಂದ ಎರಡು ಬಾರಿ 1.03 ಲಕ್ಷ ಟನ್‌ ಮರಳು ಆಮದು ಮಾಡಿಕೊಂಡಿತ್ತು. ದುಬೈ ಮತ್ತು ಮಲೇಷ್ಯಾದ ಕಂಪನಿಗಳು ಬಂದರಿಗೆ ಮರಳು ಪೂರೈಸಿದ್ದವು. ಎಂಎಸ್‌ಐಎಲ್‌ ಇದಕ್ಕಾಗಿ ₹28 ಕೋಟಿ ವ್ಯಯಿಸಿತ್ತು. ಈಗ ಮರಳು ವ್ಯರ್ಥವಾಗಿದ್ದಲ್ಲದೆ ಮೂರು ಪಟ್ಟು ದಂಡ ಕಟ್ಟುವ ಸ್ಥಿತಿ ಬಂದಿದೆ.

ಬಂದರಿಗೆ ಬಂದ ಮರಳಿನಲ್ಲಿ ಸ್ವಲ್ಪ ಪ್ರಮಾಣವನ್ನು ರೈಲ್ವೆ ರೇಕ್‌ಗಳ ಮೂಲಕ ಬೆಂಗಳೂರಿಗೆ ತಂದು, ಪ್ರತಿ ಟನ್‌ಗೆ ₹4 ಸಾವಿರ ದರ ನಿಗದಿ ಮಾಡಿ 50 ಕೆ.ಜಿ. ಚೀಲದಲ್ಲಿ ಬ್ರಾಂಡೆಡ್‌ ಮರಳಿನ ಮಾರಾಟ ಆರಂಭಿಸಲಾ
ಗಿತ್ತು. ದರ ಹೆಚ್ಚಾಯಿತು ಎಂಬ ಕಾರಣಕ್ಕೆ ಟ್ರಕ್‌ಗಳಲ್ಲೇ ಗ್ರಾಹಕರಿಗೆ ಸರಬರಾಜು ಮಾಡಲಾಗಿತ್ತು. ಕೋವಿಡ್‌ ನಂತರ ಟನ್‌ ಧಾರಣೆ ಕುಸಿದಿತ್ತು. ಮಾರಾಟವಾದ ಒಟ್ಟು ಮರಳು 14 ಸಾವಿರ ಟನ್‌ ಮಾತ್ರ. ಉಳಿದ 89 ಸಾವಿರ ಟನ್‌ ಕೃಷ್ಣಪಟ್ಟಣಂ ಬಂದರಿನಲ್ಲೇ ಉಳಿದಿದೆ. ಎಂಎಸ್‌ಐಎಲ್‌ಗೆ ಮರಳಿನಿಂದ ದೊರೆತ ಅಸಲು ಕೇವಲ ₹68 ಲಕ್ಷ. 

ನಿಯಮ ತಿದ್ದುಪಡಿಗೆ ನಿರ್ಣಯ

ರಾಜ್ಯದಲ್ಲಿನ ಮರಳು ಕೊರತೆ ನೀಗಿಸಲು ಸರ್ಕಾರ 2017ರಲ್ಲಿ ಆಮದು ನೀತಿ ರೂಪಿಸಿತ್ತು. ವರ್ಷಕ್ಕೆ ಮೂರು ಲಕ್ಷ ಟನ್‌ ಮರಳು ಆಮದು ಮಾಡಿಕೊಳ್ಳಲು ಅವಕಾಶ ಮಾಡಿಕೊಟ್ಟಿತ್ತು.

ಅಂದು ರೂಪಿಸಿದ್ದ ನಿಯಮದಂತೆ ಆಮದು ಮಾಡಿಕೊಂಡ ಮರಳನ್ನು ರಾಜ್ಯದಲ್ಲೇ ಮಾರಾಟ ಮಾಡುವ ಷರತ್ತು ವಿಧಿಸಲಾಗಿತ್ತು. ಮಲೇಷ್ಯಾದ 1.03 ಲಕ್ಷ ಟನ್‌ ಮರಳಿನಲ್ಲಿ 89 ಸಾವಿರ ಟನ್‌ ಕೃಷ್ಣಪಟ್ಟಣಂ ಬಂದರಿನಲ್ಲೇ ಉಳಿದಿದೆ. ರಾಜ್ಯದಲ್ಲಿ ಬೇಡಿಕೆ ಇಲ್ಲದಿರುವ ಕಾರಣ ಅಲ್ಲೇ ಹರಾಜು ಹಾಕಲು ನಿಯಮಕ್ಕೆ ತಿದ್ದುಪಡಿ ತರುವಂತೆ ರಾಜ್ಯ ಸರ್ಕಾರವನ್ನು ಕೋರಲು ಎಂಐಎಸ್‌ಎಲ್‌ ಆಡಳಿತ ಮಂಡಳಿ ಸಭೆ ನಿರ್ಣಯ ಅಂಗೀಕರಿಸಿದೆ.

ಸಂಧಾನಕ್ಕೆ ತೆರಳಲಿದೆ ತಂಡ

ಮಲೇಷ್ಯಾದಿಂದ ಆಮದು ಮಾಡಿಕೊಂಡ ಮರಳನ್ನು ಮೊದಲ ಹಂತದಲ್ಲಿ ದಾಸ್ತಾನು ಮಾಡಲು ಆಂದ್ರಪ್ರದೇಶದ ನೆಲ್ಲೂರು ಜಿಲ್ಲೆಯ ಪೂರ್ವ ಕರಾವಳಿಯಲ್ಲಿರುವ ಕೃಷ್ಣಪಟ್ಟಣಂ ಬಂದರಿನ ಮಾಲೀಕತ್ವ ಹೊಂದಿದ್ದ ‘ಕೃಷ್ಣ ಪಟ್ಟಣಂ ಪೋರ್ಟ್‌ ಕಂಪನಿ (ಕೆಪಿಸಿಎಲ್‌)’ ಜೊತೆ ಒಪ್ಪಂದ ಮಾಡಿಕೊಂಡಿತ್ತು.

ಒಪ್ಪಂದದಂತೆ ದಾಸ್ತಾನು ಶುಲ್ಕ ನೀಡದೆ, ಮಾರಾಟ ಮಾಡಿದ ಲಾಭಾಂಶದಲ್ಲಿ ಶೇ 5ರಷ್ಟು ನೀಡಬೇಕಿತ್ತು. 2020ರಿಂದ ಬಂದರಿನ ಮಾಲೀಕತ್ವ ಅದಾನಿ ಪೋರ್ಟ್ಸ್‌ ಕಂಪನಿಗೆ ಬದಲಾಗಿದೆ. ಏಳು ವರ್ಷಗಳಿಂದ ದಾಸ್ತಾನು ತೆರವಾಗದೇ ಇರುವುದಕ್ಕೆ ಅದಾನಿ ಕಂಪನಿ ತಕರಾರು ತೆಗೆದಿದೆ. 

‘ಬಂದರಿನ ಮಾಲೀಕತ್ವ ಹೊಂದಿದ್ದ ಕಂಪನಿ ಜೊತೆ ಮಾಡಿಕೊಂಡ ಒಪ್ಪಂದದಂತೆ ದಾಸ್ತಾನು ಶುಲ್ಕ ಪಾವತಿಸಲು ಸಾಧ್ಯವಿಲ್ಲ. ಪಾಲು ಕೊಡಲು ಲಾಭಕ್ಕಿಂತ ನಷ್ಟವೇ ಹೆಚ್ಚಾಗಿದೆ. ಹಾಗಾಗಿ, ದಂಡ ಪಾವತಿಸಲು ಸಾಧ್ಯವಿಲ್ಲ’ ಎಂದು ನೋಟಿಸ್‌ಗೆ ಉತ್ತರ ನೀಡಿರುವ ಎಂಎಸ್‌ಐಎಲ್‌, ಸಂಧಾನಕ್ಕಾಗಿ ನಿಗಮದ ಪ್ರಧಾನ ವ್ಯವಸ್ಥಾಪಕರ ನೇತೃತ್ವದ ತಂಡವನ್ನು ಆಂಧ್ರಪ್ರದೇಶಕ್ಕೆ ಕಳುಹಿಸುತ್ತಿದೆ.

ಅದಾನಿ ಪೋರ್ಟ್ಸ್‌ ಕಂಪನಿ ನೋಟಿಸ್‌ ನೀಡಿದೆ. ದಾಸ್ತಾನು ಹರಾಜು ಹಾಕಿದರೆ ₹10 ಕೋಟಿಯೂ ಬರುವುದಿಲ್ಲ. ಅವರಿಗೆ ₹76 ಕೋಟಿ ನೀಡಲು ಹೇಗೆ ಸಾಧ್ಯ?
ಮನೋಜ್ ಕುಮಾರ್ ವ್ಯವಸ್ಥಾಪಕ ನಿರ್ದೇಶಕ, ಎಂಎಸ್ಐಎಲ್‌
ಕಾಂಗ್ರೆಸ್‌ ಸರ್ಕಾರ ತರಾತುರಿ ಯಲ್ಲಿ ಮರಳು ಆಮದು ಮಾಡಿಕೊಂಡಿದ್ದರಿಂದ ಕೋಟ್ಯಂತರ ನಷ್ಟವಾಗಿದೆ. ಬಂದರಿನಲ್ಲೇ ಹರಾಜು ಹಾಕುವಂತೆ ಸಮಿತಿ ವರದಿ ನೀಡಿತ್ತು
ಎಚ್‌. ಹಾಲಪ್ಪ ಹರತಾಳು ಎಂಎಸ್‌ಐಎಲ್‌ ಮಾಜಿ ಅಧ್ಯಕ್ಷ 

1.03 ಲಕ್ಷ ಟನ್‌

ಮಲೇಷ್ಯಾದಿಂದ ಆಮದಾದ ಮರಳು

89 ಸಾವಿರ ಟನ್‌

ಕೃಷ್ಣಪಟ್ಟಣಂನಲ್ಲಿ ದಾಸ್ತಾನಿರುವ ಮರಳು

₹28 ಕೋಟಿ 

ಎಂಎಸ್‌ಐಎಲ್‌ ವ್ಯಯಿಸಿದ ಮೊತ್ತ

₹68 ಲಕ್ಷ

ಮರಳು ಮಾರಾಟದಿಂದ ಬಂದ ಹಣ

₹76 ಕೋಟಿ

ಅದಾನಿ ಕಂಪನಿ ವಿಧಿಸಿದ ದಾಸ್ತಾನು ದಂಡ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.