ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ 600 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿ ಛಾಪು ಮೂಡಿಸಿದ್ದ ನಟಿ ಲೀಲಾವತಿಯವರು ಇಂದು ಇಹಲೋಕ ತ್ಯಜಿಸಿದ್ದಾರೆ.
ಲೀಲಾವತಿಯವರ ನಿಧನಕ್ಕೆ ಕನ್ನಡ ಚಿತ್ರರಂಗದ ಕಲಾವಿದರು, ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಲೀಲಾವತಿಯವರ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ. ಈ ಕುರಿತು ಎಕ್ಸ್‌ನಲ್ಲಿ ಹಂಚಿಕೊಂಡ ಅವರು‘ ಕನ್ನಡ ಚಿತ್ರರಂಗದ ಹಿರಿಯ ನಟಿ ಲೀಲಾವತಿ ಅವರ ಅಗಲಿಕೆಯ ಸುದ್ದಿ ನೋವುಂಟುಮಾಡಿದೆ. ಕಳೆದ ವಾರವಷ್ಟೇ ಅವರು ಅನಾರೋಗ್ಯಕ್ಕೀಡಾದ ವಿಚಾರ ತಿಳಿದು ಅವರ ಮನೆಗೆ ಭೇಟಿನೀಡಿ ಆರೋಗ್ಯ ವಿಚಾರಿಸಿ ಪುತ್ರ ವಿನೋದ್ ರಾಜ್ ಅವರೊಂದಿಗೆ ಮಾತನಾಡಿದ್ದೆ. ಹಲವು ದಶಕಗಳ ಕಾಲ ತಮ್ಮ ಮನೋಜ್ಞ ಅಭಿನಯದ ಮೂಲಕ ಪ್ರೇಕ್ಷಕರನ್ನು ರಂಜಿಸಿದ್ದ ಲೀಲಾವತಿ ಅವರು ಗುಣಮುಖರಾಗಿ ಇನ್ನಷ್ಟು ಕಾಲ ನಮ್ಮ ನಡುವೆ ಇರುತ್ತಾರೆಂಬ ನನ್ನ ನಂಬಿಕೆ ಹುಸಿಯಾಗಿದೆ. ಮೃತರ ಆತ್ಮಕ್ಕೆ ಚಿರಶಾಂತಿ ದೊರಕಲಿ, ಅವರ ಕುಟುಂಬ ವರ್ಗಕ್ಕೆ ಈ ದುಃಖವನ್ನು ಭರಿಸುವ ಶಕ್ತಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆ’ ಎಂದು ಬರೆದುಕೊಂಡಿದ್ದಾರೆ.
ನಟ ದರ್ಶನ್ ಅವರು, ನಮ್ಮ ಕರುನಾಡಿನ ಹೆಸರಾಂತ ಕಲಾವಿದೆ ಲೀಲಾವತಿ ಅಮ್ಮನವರು ಇಂದು ಸಾವನ್ನಪ್ಪಿರುವುದು ಇಡೀ ರಾಜ್ಯಕ್ಕೆ ಒಂದು ದುಃಖಕರ ಸಂಗತಿ. ಈ ಮಹಾನ್ ಚೇತನಕ್ಕೆ ಶಾಂತಿ ದೊರಕಲಿ ಎಂದು ದೇವರಲ್ಲಿ ಪ್ರಾರ್ಥಿಸೋಣ ವಿನೋದ್ ರಾಜ್ ರವರ ಕುಟುಂಬಕ್ಕೆ ಈ ನೋವನ್ನು ತಡೆದುಕೊಳ್ಳುವ ಶಕ್ತಿ ಸಿಗಲಿ’ ಎಂದು ಬರೆದುಕೊಂಡಿದ್ದಾರೆ.
ಪ್ರಲ್ಹಾದ ಜೋಶಿ ಅವರೂ ಸಂತಾಪ ವ್ಯಕ್ಪಡಿಸಿದ್ದು, ಕನ್ನಡ ಚಿತ್ರರಂಗ ಕಂಡ ಶ್ರೇಷ್ಠ ನಟಿ, ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಗಳು ಮತ್ತು ಅತ್ಯುತ್ತಮ ಪೋಷಕನಟಿ ಪ್ರಶಸ್ತಿಗಳನ್ನು ಪಡೆದಿರುವ ಹಿರಿಯ ನಟಿ ಲೀಲಾವತಿ ಅವರ ಅಗಲಿಕೆ ತುಂಬ ನೋವು ತಂದಿದೆ. ಕನ್ನಡ ಚಿತ್ರರಂಗಕ್ಕೆ ಇದು ತುಂಬಲಾಗದ ನಷ್ಟ ಎಂದು ಹೇಳಿದ್ದಾರೆ.
ಕಳೆದ ಕೆಲವು ದಿನಗಳ ಹಿಂದೆ ಲೀಲಾವತಿಯವರ ಮನೆಗೆ ತೆರಳಿ ಉಪಮುಖ್ಯಮಂತ್ರಿ ಡಿಕೆಶಿವಕುಮಾರ್ ಅವರು ತಮ್ಮ ಎಕ್ಸ್ ಖಾತೆಯಲ್ಲಿ ಸಂತಾಪ ವ್ಯಕ್ತಪಡಿಸಿದ್ದು, ಹಿರಿಯ ನಟಿ ಲೀಲಾವತಿ ಅವರ ಅಗಲಿಕೆಯ ಸುದ್ದಿ ಅತೀವ ದುಃಖ ಉಂಟುಮಾಡಿದೆ. ಇತ್ತೀಚೆಗಷ್ಟೇ ಅವರು ನೆಲಮಂಗಲ ಬಳಿಯ ಸೋಲದೇವನಹಳ್ಳಿಯಲ್ಲಿ ನಿರ್ಮಿಸಿದ್ದ ಪಶು ಆಸ್ಪತ್ರೆಯನ್ನು ಉದ್ಘಾಟಿಸಿದ್ದೆ. ಸಂಕಷ್ಟದಲ್ಲಿದ್ದರೂ ಸಮಾಜ ಸೇವೆ ಮಾಡಬೇಕೆನ್ನುವ ಅವರ ಕಳಕಳಿ ನನ್ನ ಹೃದಯ ಮುಟ್ಟಿತು. ಮೃತರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ. ಪುತ್ರ ವಿನೋದ್ ರಾಜ್ ಕುಟುಂಬವರ್ಗದವರು ಹಾಗೂ ಅಭಿಮಾನಿಗಳ ನೋವಿನಲ್ಲಿ ನಾನೂ ಕೂಡ ಭಾಗಿ ಎಂದು ಬರೆದುಕೊಂಡಿದ್ದಾರೆ.
ನಟಿ ಉಮಾಶ್ರೀ, ಎಚ್ ಡಿ ದೇವೇಗೌಡ, ಬಿ.ಎಸ್ ಯಡಿಯೂರಪ್ಪ, ಸುಮಲತಾ ಅಂಬರೀಷ್ ಸೇರಿ ಹಲವರು ಸಂತಾಪ ಸೂಚಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.