ADVERTISEMENT

ನೆರೆ ಸಂತ್ರಸ್ತರಿಗೆ ನೆರವಾಗುವಂತೆ ಮನವಿ ಮಾಡಿದ ಸ್ಯಾಂಡಲ್‌ವುಡ್ ಸ್ಟಾರ್‌ಗಳು

​ಪ್ರಜಾವಾಣಿ ವಾರ್ತೆ
Published 8 ಆಗಸ್ಟ್ 2019, 7:42 IST
Last Updated 8 ಆಗಸ್ಟ್ 2019, 7:42 IST
   

ಉತ್ತರ ಕರ್ನಾಟಕದ ಹಲವು ಜಿಲ್ಲೆಗಳು ಸೇರಿದಂತೆ ರಾಜ್ಯದಾದ್ಯಂತ ಉಂಟಾಗಿರುವ ಪ್ರವಾಹ ಪರಿಸ್ಥಿತಿಯ ಬಗ್ಗೆ ಚಂದನವನದ ನಟರು ಕಳವಳ ವ್ಯಕ್ತಪಡಿಸಿದ್ದಾರೆ. ಸಂತ್ರಸ್ತರಿಗೆ ತಮ್ಮಿಂದ ಸಾಧ್ಯವಾದಷ್ಟು ಸಹಾಯಮಾಡುವುದಾಗಿ ತಿಳಿಸಿರುವ ಅವರು ನೆರವಿಗೆ ಧಾವಿಸುವಂತೆ ಅಭಿಮಾನಿಗಳಿಗೆ ಕರೆ ನೀಡಿದ್ದಾರೆ.

ಫೋಟೊ ವಿಡಿಯೊ ನೋಡುತ್ತಿದ್ದೇವೆ; ವಾಸ್ತವ ಏನೆಂಬುದು ಗೊತ್ತಾಗುತ್ತಿಲ್ಲ: ಸುದೀಪ್‌
ಬೆಂಗಳೂರಿನಲ್ಲಿರುವ ನಮ್ಮ ಜನರು ಆಹಾರ, ಬಟ್ಟೆ ಸೇರಿದಂತೆ ಅಗತ್ಯ ವಸ್ತುಗಳನ್ನು ಕೊಂಡು ಪ್ರವಾಹಪೀಡಿತ ಪ್ರದೇಶಗಳತ್ತ ತೆರಳಿದ್ದಾರೆ. ಇತರ ಪ್ರದೇಶಗಳಲ್ಲಿರುವ ನನ್ನ ಸ್ನೇಹಿತರೂ ಕೈಜೋಡಿಸುವಂತೆ ಮನವಿ ಮಾಡಿಕೊಳ್ಳುತ್ತೇನೆ. ನಮ್ಮ ನೆರವಿನ ಅಗತ್ಯವಿರುವ ಉತ್ತರ ಕರ್ನಾಕದ ಕುಟುಂಬಗಳಿಗಾಗಿ ನಾವೆಲ್ಲ ಖಂಡಿತವಾಗಿಯೂ ಕೈಜೋಡಿಸಿ.ನಮ್ಮ ಕೈಲಾದಷ್ಟು ಸಹಾಯ ಮಾಡಬಹುದು ಎಂದು ನಟ ಸುದೀಪ್ ಟ್ವೀಟ್‌ ಮಾಡಿದ್ದಾರೆ.

ಮುಂದುವರಿದು ವಿಡಿಯೊವೊಂದನ್ನು ಹರಿಬಿಟ್ಟಿರುವ ಅವರು,ಉತ್ತರ ಕರ್ನಾಟಕದಲ್ಲಿ ಉಂಟಾಗಿರುವ ಪ್ರವಾಹ ಪರಿಸ್ಥಿತಿಯ ಫೋಟೊ ಹಾಗೂ ವಿಡಿಯೊಗಳನ್ನು ಮಾತ್ರವೇ ನೋಡುತ್ತಿದ್ದೇವೆ. ಆದರೆ, ಅಲ್ಲಿ ನಮ್ಮ ಜನಗಳು ಎಲ್ಲಿದ್ದಾರೆ, ಹೇಗಿದ್ದಾರೆ ಅವರು ಯಾವ ಪರಿಸ್ಥಿತಿಯಲ್ಲಿದ್ದಾರೆ ಎಂಬುದು ಗೊತ್ತಾಗುತ್ತಿಲ್ಲ. ಸರ್ಕಾರವೂ ಸುಮ್ಮನೆ ಕೂತಿಲ್ಲ. ಅವರ ಕೆಲಸ ಅವರು ಮಾಡುತ್ತಿರುತ್ತಾರೆ. ಆದರೂ.. ನೆರೆ ಸಂತ್ರಸ್ತ ಪ್ರದೇಶದ ಸಮೀಪದಲ್ಲಿರುವ ನನ್ನ ಗೆಳೆಯರು ಆದಷ್ಟು ಬೇಗನೆ ಅಲ್ಲಿಗೆ ತೆರಳಿ ಅಲ್ಲಿನ ಸ್ಥಿತಿಗತಿ ಏನು, ನಮ್ಮಿಂದ ಏನು ಮಾಡಲು ಸಾಧ್ಯ ಎಂಬುದನ್ನು ತಿಳಿಸಿ ಎಂದು ಮನವಿ ಮಾಡಿಕೊಳ್ಳುತ್ತೇನೆ. ನೀವು ‌ಅಲ್ಲಿಗೆ ಬೇಗನೆ ತಲುಪಬಹುದು ಎಂಬ ಕಾರಣಕ್ಕೆ ಈ ವಿನಂತಿ ಮಾಡಿಕೊಳ್ಳುತ್ತೇನೆ ಎಂದು ಹೇಳಿಕೊಂಡಿದ್ದಾರೆ.

ADVERTISEMENT

ಕೈಲಾದ ಸೇವೆ ಮಾಡಿ: ದರ್ಶನ್‌
ನಮ್ಮ ಉತ್ತರ ಕರ್ನಾಟಕ ಭಾಗದ ಜಿಲ್ಲೆಗಳ ಹಲವು ಹಳ್ಳಿಗಳು ಪ್ರವಾಹದ ಅಬ್ಬರಕ್ಕೆ ನೀರಿನಲ್ಲಿ ಮುಳುಗಿ ಹೋಗಿವೆ. ಅಲ್ಲಿರುವ ಜನರಿಗೆ ಆಸರೆಯಾಗಿ ನಿಲ್ಲುವುದು ಪ್ರತಿಯೊಬ್ಬ ಮನುಷ್ಯನ ಕರ್ತವ್ಯವಾಗಿರುತ್ತದೆ. ಎಲ್ಲರೂ ತಮ್ಮ ಕೈಲಾದ ಸೇವೆಯನ್ನು ಇದರ ನಿಟ್ಟಿನಲ್ಲಿ ಮಾಡಬೇಕಾಗಿ ವಿನಂತಿ ಎಂದಿದ್ದಾರೆ ದರ್ಶನ್‌.

ಸಹಾಯ ಹಸ್ತ ಚಾಚುವುದು ನಮ್ಮೆಲ್ಲರ ಕರ್ತವ್ಯ: ಗಣೇಶ್‌
ನಮ್ಮ ಕರ್ನಾಟಕದ ನೆಲವನ್ನು ಬಹುಪಾಲು ಜಲ‌ ಆವರಿಸಿಕೊಂಡಿದೆ‌. ಪ್ರವಾಹದ ಅಬ್ಬರಕ್ಕೆ ಉತ್ತರ ಕರ್ನಾಟಕ ತತ್ತರಿಸಿದೆ. ಸಂಕಷ್ಟದಲ್ಲಿರುವವರಿಗೆ ಸಹಾಯ ಹಸ್ತ ಚಾಚುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ನಮ್ಮಿಂದ ಸಾಧ್ಯವಾದದ್ದನ್ನು ನೆರೆ ಸಂತ್ರಸ್ತರಿಗೆ ತಲುಪಿಸೋಣ. ಇದು ನನ್ನ ಹೃದಯಾಂತರಾಳದ ಕೋರಿಕೆ ಎಂದು ನಟ ಗಣೇಶ್‌ ಬರೆದುಕೊಂಡಿದ್ದಾರೆ.

ಕೈಜೋಡಿಸಲು ಜಗ್ಗೇಶ್‌ ಮನವಿ
ಬನ್ನಿ ಒಬ್ಬರಿಗೊಬ್ಬರು ಕೈ ಜೋಡಿಸಿ.ಉತ್ತರ ಕರ್ನಾಟಕದ ಮಳೆ ಸಂತ್ರಸ್ತರಿಗೆಸಹಾಯ ಮಾಡುವ.ಸಮಯಕ್ಕೆ ಉಪಯೋಗ ಆಗುವ ವಸ್ತುಗಳ ದಾನಮಾಡುವ.ವಿಶ್ವದ ಎಲ್ಲೆಡೆ ಇರುವ ಕನ್ನಡದ ಬಂಧುಗಳೇ ಉತ್ತರ ಕರ್ನಾಟಕ ಬಂಧುಗಳ ರಕ್ಷಣೆಗೆ ವ್ಯಾಪಕ ಪ್ರಚಾರಮಾಡಿ ವಿನಂತಿ!ಕಷ್ಟದಲ್ಲಿ ಮೊದಲು ಆಗುವನೆ ಕನ್ನಡದ ನೆಂಟ ಎಂದು ನಿರೂಪಿಸುವ ಎಂದು ನಟ ಜಗ್ಗೇಶ್‌ ಕರೆನೀಡಿದ್ದಾರೆ.

ಮಳೆರಾಯ ಕೃಪೆ ತೋರು: ಹರ್ಷಿಕಾ ಪೂಣಚ್ಚ
ಉತ್ತರ ಕರ್ನಾಟಕದ ಜನ ಮಳೆಯಿಂದ ತತ್ತರಿಸಿ ಹೋಗಿದ್ದಾರೆ.ಮಳೆರಾಯ ದಯವಿಟ್ಟು ಕೃಪೆ ತೋರಿಸು.ಸಾಕು ನಿನ್ನ ಅಬ್ಬರ. ಉತ್ತರ ಕರ್ನಾಟಕ ಜನರಿಗಾಗಿ ಪ್ರಾರ್ಥಿಸಿ ಎಂದು ನಟಿ ಹರ್ಷಿಕಾ ಪೂಣಚ್ಚ ಬರೆದುಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.