ADVERTISEMENT

ರಾಜ್ಯದಲ್ಲಿ ಇನ್ನು ‘ಸ್ಯಾಂಡ್‌ಬಾಕ್ಸ್‌’

ದೇಶದಲ್ಲೇ ಮೊದಲ ಪ್ರಯತ್ನ, ಉದ್ಯೋಗ ಸೃಷ್ಟಿ ಆಶಯ

ಭರತ್ ಜೋಶಿ
Published 23 ಫೆಬ್ರುವರಿ 2020, 19:29 IST
Last Updated 23 ಫೆಬ್ರುವರಿ 2020, 19:29 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ವಿವಿಧ ಕೈಗಾರಿಕಾ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ನಿಯಂತ್ರಿತ ಪರೀಕ್ಷಾ ವ್ಯವಸ್ಥೆ (ಸ್ಯಾಂಡ್‌ಬಾಕ್ಸ್) ಜಾರಿಗೆ ರಾಜ್ಯ ಸರ್ಕಾರ ಮುಂದಡಿ ಇಟ್ಟಿದ್ದು, ದೇಶದಲ್ಲೇ ಇದು ಪ್ರಥಮ ಪ್ರಯತ್ನ ಎಂದು ಹೇಳಲಾಗುತ್ತಿದೆ.

ಈ ಸ್ಯಾಂಡ್‌ಬಾಕ್ಸ್‌ ದೇಶದ ಎಲ್ಲಾ ಕಡೆಯ ಅನ್ವೇಷಣಾ ಆಸಕ್ತರಿಗೂ ಮುಕ್ತವಾಗಿರುತ್ತದೆ. ಆದರೆ, ಅವರು ರಾಜ್ಯದಲ್ಲಿ ಉದ್ಯಮ ಅಥವಾ ವ್ಯವಹಾರ ನಡೆಸಬೇಕು ಎಂಬ ಷರತ್ತನ್ನು ವಿಧಿಸಲಾಗುತ್ತದೆ.

ಈ ಉದ್ದೇಶಕ್ಕಾಗಿಯೇ ಕರ್ನಾಟಕ ಅನ್ವೇಷಣಾ ಪ್ರಾಧಿಕಾರ (ಕೆಐಎ) ಮಸೂದೆಯನ್ನು ವಿಧಾನಮಂಡಲ ಅಧಿವೇಶನದಲ್ಲಿ ಮಂಡಿಸಲಾಗಿದ್ದು, ಕೆಲವೊಂದು ಅಪಾಯಕಾರಿ ತಂತ್ರಜ್ಞಾನಗಳು, ಉತ್ಪನ್ನಗಳು ಅಥವಾ ಸೇವೆಗಳನ್ನು ನಿಯಂತ್ರಿತ ವಾತಾವರಣದಲ್ಲಿ ಅಭಿವೃದ್ಧಿಪಡಿಸುವುದಕ್ಕೆ ಕೆಲವು ನಿಯಮಗಳನ್ನು ಸಡಿಲಿಸಲಾಗುತ್ತದೆ.

ADVERTISEMENT

ರಾಜ್ಯದಲ್ಲಿ ನೋಂದಾಯಿತ ಕಚೇರಿ ಅಥವಾ ಶಾಖೆ ಹೊಂದಿರುವ ಯಾವುದೇ ವ್ಯಕ್ತಿ ಈ ಸ್ಯಾಂಡ್‌ಬಾಕ್ಸ್‌ನಲ್ಲಿ ಪಾಲ್ಗೊಳ್ಳಬಹುದು. ಇಂತಹ ಉತ್ಪನ್ನ ರಾಜ್ಯದ ಗ್ರಾಹಕರಿಗೆ ಅನುಕೂಲ ಕಲ್ಪಿಸಬೇಕು ಮತ್ತು ಉದ್ಯೋಗ ಸೃಷ್ಟಿಸುವಂತಿರಬೇಕು.

‘ಅನ್ವೇಷಣೆಗೆ ಎಲ್ಲರೂ ಪ್ರಯತ್ನಿಸುತ್ತಲೇ ಇರುತ್ತಾರೆ. ಇದರಿಂದ ಹಲವರಿಗೆ ಅನುಕೂಲವಾಗುತ್ತದೆ. ಸ್ಯಾಂಡ್‌ಬಾಕ್ಸ್‌ ವ್ಯವಸ್ಥೆ ಈ ಅನ್ವೇಷಣೆಗೆ ಇನ್ನೊಂದು ಹೊಸ ಮಜಲನ್ನು ಒದಗಿಸಿಕೊಡಲಿದೆ. ಅರ್ಜಿ ಸಲ್ಲಿಕೆ ಆಧಾರದಲ್ಲಿ ಅಥವಾ ಪ್ರಾಧಿಕಾರವು ಸ್ವಯಂಪ್ರೇರಣೆಯಿಂದ ಸ್ಯಾಂಡ್‌ಬಾಕ್ಸ್‌ಗೆ ಅವಕಾಶ ನೀಡಬಹುದಾಗಿದೆ’ ಎಂದು ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಡಾ.ಸಿ.ಎನ್‌.ಅಶ್ವತ್ಥನಾರಾಯಣ ಹೇಳಿದ್ದಾರೆ.

ಅನ್ವೇಷಣೆ ಯಶಸ್ವಿಯಾದರೆ ಈಗ ಇರುವ ಕಾನೂನನ್ನು ಬದಲಿಸಿ, ಹೊಸ ಕಾನೂನು ಜಾರಿಗೆ ತಂದು ಅದನ್ನು ಕ್ರಮಬದ್ಧಗೊಳಿಸಬಹುದಾಗಿದೆ. ರಾಜ್ಯದಲ್ಲೇ ಇದರ ಪ್ರಯೋಜನ ಸಿಗಬೇಕಾಗುತ್ತದೆ ಎಂದರು.

ಏನಿದು ಸ್ಯಾಂಡ್‌ಬಾಕ್ಸ್?

ಕೈಗಾರಿಕೆ, ಸೇವೆ ಸಹಿತ ವಿವಿಧ ಕ್ಷೇತ್ರಗಳಲ್ಲಿನಿಯಂತ್ರಿತ ಪರೀಕ್ಷಾ ವ್ಯವಸ್ಥೆಯಲ್ಲಿ ಅನ್ವೇಷಣೆ ನಡೆಸುವುದಕ್ಕೆ ‘ಸ್ಯಾಂಡ್‌ಬಾಕ್ಸ್‌’ ಎಂದು ಕರೆಯಲಾಗುತ್ತದೆ. ಒಂದು ವರ್ಷ, ಅಗತ್ಯ ಬಿದ್ದರೆ ಇನ್ನೊಂದು ವರ್ಷ ಮಾತ್ರ ಅಸ್ತಿತ್ವದಲ್ಲಿ ಇರುವ ಪರೀಕ್ಷಾ ವ್ಯವಸ್ಥೆ ಇದು.

ಅನ್ವೇಷಣೆ ಯಶಸ್ವಿಯಾದರೆ ಅಥವಾ ವಿಫಲವಾದರೆ ಈ ಅವಧಿಯೊಳಗೆ ಗೊತ್ತಾಗಲೇಬೇಕು. ಪ್ರಸ್ತುತ ಜಾರಿಯಲ್ಲಿರುವ ಕೆಲವು ಕಾನೂನುಗಳು ಅಥವಾ ನಿಯಮಗಳು ಕೆಲವೊಂದು ಶೋಧನೆಗೆ ಅವಕಾಶ ಕಲ್ಪಿಸದೆ ಇರಬಹುದು. ಅಂತಹ ತೊಡಕು ನಿವಾರಿಸುವುದೇ ಇದರ ಉದ್ದೇಶ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.