ಬೆಂಗಳೂರು: ಚನ್ನಪಟ್ಟಣ, ಶಿಗ್ಗಾವಿ ಮತ್ತು ಸಂಡೂರು ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಯ ಮತದಾನ ಬುಧವಾರ (ನ.13) ನಡೆಯಲಿದ್ದು, ಈ ಮೂರೂ ಕ್ಷೇತ್ರಗಳಲ್ಲಿ ಆಡಳಿತಾರೂಢ ಕಾಂಗ್ರೆಸ್ ಮತ್ತು ಬಿಜೆಪಿ–ಜೆಡಿಎಸ್ ಮೈತ್ರಿಕೂಟದ ಅಭ್ಯರ್ಥಿಗಳ ನಡುವೆ ನೇರ ಸ್ಪರ್ಧೆಯಿದೆ.
ಅಭ್ಯರ್ಥಿಗಳು ಮತದಾನದ ಮುನ್ನಾ ದಿನವಾದ ಮಂಗಳವಾರ ಕೂಡಾ ಮತದಾರರ ಓಲೈಕೆಗೆ ಇನ್ನಿಲ್ಲದ ಕಸರತ್ತು ನಡೆಸಿದರು.
ತಮ್ಮ ಪುತ್ರರ ರಾಜಕೀಯ ಭವಿಷ್ಯಕ್ಕೆ ಮುನ್ನಡಿ ಬರೆಯಲಿರುವ ಈ ಚುನಾವಣೆಯನ್ನು ಮಾಜಿ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಮತ್ತು ಎಚ್.ಡಿ. ಕುಮಾರಸ್ವಾಮಿ ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದಾರೆ. ಜೊತೆಗೆ ಕ್ಷೇತ್ರವನ್ನು ಉಳಿಸಿಕೊಳ್ಳುವ ಸವಾಲೂ ಅವರ ಮುಂದಿದೆ. ಮೊಮ್ಮಗನನ್ನು ವಿಧಾನಸಭೆಯ ಮೆಟ್ಟಿಲೇರಿಸಲು ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡರು ಕ್ಷೇತ್ರಕ್ಕಿಳಿದು ಮತ ಯಾಚಿಸಿದ್ದಾರೆ.
ಬಿಜೆಪಿ ತ್ಯಜಿಸಿ ಬಂದ ಸಿ.ಪಿ. ಯೋಗೇಶ್ವರ್‌ಗೆ ಚನ್ನಪಟ್ಟಣದಲ್ಲಿ ಮಣೆ ಹಾಕಿರುವ ರಾಜ್ಯ ಕಾಂಗ್ರೆಸ್ ನಾಯಕರು, ಈ ಕ್ಷೇತ್ರವನ್ನು ಜೆಡಿಎಸ್‌ನಿಂದ ಕಸಿದುಕೊಳ್ಳಲೇಬೇಕೆಂಬ ಪಣ ತೊಟ್ಟಿದ್ದಾರೆ. ರಾಜಕೀಯ ಜಿದ್ದಾಜಿದ್ದಿಗೆ ಹೆಸರುವಾಸಿಯಾಗಿರುವ ಈ ಕ್ಷೇತ್ರ ಎಚ್.ಡಿ. ಕುಮಾರಸ್ವಾಮಿ ಮತ್ತು ಡಿ.ಕೆ. ಶಿವಕುಮಾರ್ ನಡುವಿನ ಪ್ರತಿಷ್ಠೆಯ ಕಣವಾಗಿಯೂ ಬದಲಾಗಿದೆ. ಚನ್ನಪಟ್ಟಣದಂತೆ ಸಂಡೂರು ಕೂಡ ರಾಜ್ಯದ ಗಮನ ಸೆಳೆದಿದೆ. ಕಾಂಗ್ರೆಸ್‌ನ ಭದ್ರಕೋಟೆ ಎನಿಸಿರುವ ಈ ಮೀಸಲು ಕ್ಷೇತ್ರದಲ್ಲಿ ಮೊದಲ ಬಾರಿಗೆ ಕಮಲ ಅರಳಿಸಲು ಬಿಜೆಪಿ ಶಕ್ತಿಮೀರಿ ಪ್ರಯತ್ನಿಸುತ್ತಿದೆ.
ಮೂರೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಳ್ಳಲು ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಸಚಿವರು–ಶಾಸಕರು ಭರ್ಜರಿ ಪ್ರಚಾರ ನಡೆಸಿದ್ದಾರೆ. ಮೈತ್ರಿಕೂಟದ ಅಭ್ಯರ್ಥಿಗಳ ಪರ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ, ವಿರೋಧ ಪಕ್ಷದ ನಾಯಕ ಆರ್. ಅಶೋಕ ಬೆವರು ಸುರಿಸಿದ್ದಾರೆ.
ಮೂರೂ ಕ್ಷೇತ್ರಗಳಲ್ಲಿ ತುರುಸಿನ ಪೈಪೋಟಿ ಇರುವುದರಿಂದ, ಮುಕ್ತ ಹಾಗೂ ನ್ಯಾಯಸಮ್ಮತ ಮತದಾನಕ್ಕೆ ಚುನಾವಣಾ ಆಯೋಗ ಎಲ್ಲ ವ್ಯವಸ್ಥೆ ಮಾಡಿದೆ. ಮತದಾನದ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಕಟ್ಟೆಚ್ಚರ ವಹಿಸಲಾಗಿದ್ದು, ಬಿಗಿ ಭದ್ರತೆ ಕಲ್ಪಿಸಲಾಗಿದೆ. ಸೂಕ್ಷ್ಮ ಮತಗಟ್ಟೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ಬಂದೋಬಸ್ತ್‌ಗೆ ನಿಯೋಜಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.