ಗೋಕರ್ಣ: ಇಲ್ಲಿ ಉಪ್ಪನ್ನು ಪ್ರಕೃತಿ ದತ್ತವಾದ ಭೌಗೋಳಿಕ ಪರಿಸರವನ್ನೇ ಉಪಯೋಗಿಸಿಕೊಂಡು ತಯಾರಿಸಲಾಗುತ್ತದೆ. ವೈಜ್ಞಾನಿಕವಾಗಿ, ಅಪರೂಪದ ನೈಸರ್ಗಿಕ ಪದ್ಧತಿಯಲ್ಲಿ ಉಪ್ಪನ್ನು ಸಿದ್ಧಪಡಿಸಲಾಗುತ್ತದೆ. ಇದು ಸಾಣೆಕಟ್ಟೆಯ ಉಪ್ಪು ಎಂಬ ಹೆಗ್ಗುರುತು!
ಸಾಣೆಕಟ್ಟೆಯ ನಾಗರಬೈಲ್ ಉಪ್ಪಿನ ಉತ್ಪಾದಕರ ಸಹಕಾರ ಸಂಘದ ಸಾಧನೆ ಜಿಲ್ಲೆಗೆ ಮಾತ್ರವಲ್ಲದೇ ನಾಡಿಗೇ ಹೆಮ್ಮಯ ವಿಷಯವಾಗಿದೆ. ಈ ಉಪ್ಪಿನ ಆಗರಕ್ಕೆ ಮೂರು ಶತಮಾನಗಳಿಗಿಂತಲೂ ಹೆಚ್ಚಿನ ಇತಿಹಾಸವಿದೆ. ಇಲ್ಲಿ ಉತ್ಪಾದಿಸಲಾಗುವ ಉಪ್ಪಿಗೆ ರಾಷ್ಟ್ರ ಮಟ್ಟದಲ್ಲಿ ಗುರುತಿಸಿಕೊಳ್ಳುವ ಅರ್ಹತೆಯಿದೆ.
ಇದನ್ನು ದೇಶದ ಸಂರಕ್ಷಿತ ತಳಿ ಪಟ್ಟಿಗೆ ಸೇರಿಸುವ ಬಗ್ಗೆ ಜೀವ ವೈವಿಧ್ಯ ಮಂಡಳಿ ಸರ್ವ ಪ್ರಯತ್ನ ಮಾಡಲಿದೆ ಎಂದು ಇತ್ತೀಚಿಗೆ ಸಾಣೆಕಟ್ಟೆಯ ಉಪ್ಪಿನ ಆಗರಕ್ಕೆ ಭೇಟಿ ನೀಡಿದ ಜೀವ ವೈವಿಧ್ಯ ಮಂಡಳಿ ಅಧ್ಯಕ್ಷ ಅನಂತ ಹೆಗಡೆ ಆಶೀಸರ ಹೇಳಿದ್ದಾರೆ. ಸಾಣೆಕಟ್ಟೆಯ ಉಪ್ಪಿಗೆ ‘ಜಿ.ಐ’ (ಸಂರಕ್ಷಿತ ತಳಿ) ಪಟ್ಟ ದೊರೆತರೆ ದೇಶದಲ್ಲಿ ಈ ಗೌರವಕ್ಕೆ ಪಾತ್ರವಾದ ಪ್ರಥಮ ಉಪ್ಪು ಎಂದು ದಾಖಲಾಗಲಿದೆ. ಇದರಿಂದ ಜಿಲ್ಲೆ ಮತ್ತು ರಾಜ್ಯದ ವಿವಿಧೆಡೆ ಈ ಉಪ್ಪನ್ನು ಬಳಸುವ ಗ್ರಾಹಕರಿಗೆ ಇನ್ನೂ ಹೆಚ್ಚಿನ ಅನುಕೂಲ ಲಭ್ಯವಾಗಲಿದೆ.
1952ರಲ್ಲಿ ಸಹಕಾರ ಸಂಘಗಳ ಕಾನೂನಿನ ಅಡಿಯಲ್ಲಿ ಸಂಘವನ್ನು ನೋಂದಾಯಿಸಲಾಯಿತು. ಅಂದಿನಿಂದ ವೈಜ್ಞಾನಿಕವಾಗಿ ಉಪ್ಪು ಉತ್ಪಾದನೆಯನ್ನು ನಡೆಸುತ್ತಿದ್ದು, ಪ್ರತಿವರ್ಷ ಸರಾಸರಿ 10ರಿಂದ 15 ಸಾವಿರ ಟನ್ ಉಪ್ಪು ಸಿಗುತ್ತಿದೆ. ಕೇಂದ್ರ ಸರ್ಕಾರದ ನಿರ್ದೇಶನದ ಮೇರೆಗೆ 1993ರಲ್ಲಿ ಕರ್ನಾಟಕದಲ್ಲಿ ಪ್ರಥಮ ಬಾರಿಗೆ ಅಯೋಡಿನ್‌ಯುಕ್ತ ಉಪ್ಪನ್ನು ಪ್ರಾರಂಭಿಸಿದ ಉತ್ಪಾದನಾ ಘಟಕ ಎಂದು ಹೆಗ್ಗಳಿಕೆಗೆ ಪಾತ್ರವಾಗಿದೆ.
ಉದ್ಯಮದ ಇತಿಹಾಸ: 1952ರ ಪೂರ್ವದಲ್ಲಿ 60ಕ್ಕೂ ಹೆಚ್ಚು ಕುಟುಂಬಗಳು ಪ್ರತ್ಯೇಕವಾಗಿ ಉಪ್ಪಿನ ಸಾಗುವಳಿ ಮಾಡುತ್ತಿದ್ದರು. ಆಗ ಮಾರಾಟಕ್ಕೆ ಮಾತ್ರ ಸಂಘ ಬಳಸುತ್ತಿದ್ದರು. 1949ರ ಉಪ್ಪು ತಜ್ಞರ ಸಮಿತಿಯ ಶಿಫಾರಸಿನಂತೆ ಎಲ್ಲಾ ಉಪ್ಪು ಸಾಗುವಳಿದಾರರೂ ಸೇರಿ ಶುದ್ಧದ ಉಪ್ಪನ್ನು ತಯಾರಿಸುವುದೇ ಧ್ಯೇಯವನ್ನಾಗಿಟ್ಟುಕೊಂಡು ನಾಗರಬೈಲ್ ಉಪ್ಪು ಮಾಲೀಕರ ಸಹಕಾರ ಸಂಘ ಸಾಣೆಕಟ್ಟಾ ಎಂಬ ಸಂಸ್ಥೆಯನ್ನು ಪ್ರಾರಂಭಿಸಿದರು.
ಆಗ ಉಪ್ಪು ಉತ್ಪಾದಿಸುವುದು ಮತ್ತು ಮಾರಾಟ ಮಾಡುವುದು ಎರಡನ್ನೂ ಸಂಸ್ಥೆಗೆ ವಹಿಸಲಾಯಿತು. ಈಗ ಸಂಘವು ಸಹಕಾರ ತತ್ವದ ಆಧಾರದ ಮೇಲೆ ಅತ್ಯಂತ ವೈಜ್ಞಾನಿಕ ವಿಧಾನದಲ್ಲಿ ಉಪ್ಪನ್ನು ತಯಾರಿಸುವ ಬೃಹತ್ ಮಾದರಿ ಸಂಸ್ಥೆಯಾಗಿ ಅಭಿವೃದ್ಧಿ ಹೊಂದಿದೆ.
‘ಪ್ರತಿ ವರ್ಷ ಗಳಿಸುವ ಲಾಭದ ಮೇಲೆ ಸದಸ್ಯರ ಪಾಲನ್ನು ಹಂಚಲಾಗುತ್ತದೆ.ಬಿಸಿಲು ಜಾಸ್ತಿ ಆದರೆ, ಮಳೆಗಾಲವೂ ತಡವಾಗಿ ಶುರುವಾದರೆ ಉಪ್ಪಿನ ಉತ್ಪಾದನೆಯಲ್ಲಿ ಹೆಚ್ಚಳವಾಗುತ್ತದೆ’ ಎಂದು ನಾಗರಬೈಲ್ ಉಪ್ಪಿನ ಉತ್ಪಾದಕರ ಸಹಕಾರ ಸಂಘದ ವ್ಯವಸ್ಥಾಪಕ ಅನಿಲ್ ನಾಡ್ಕರ್ಣಿ ಹಾಗೂ ಮೇಲ್ವಿಚಾರಕ ನವೀನ್ ನಾಡ್ಕರ್ಣಿ ಹೇಳುತ್ತಾರೆ.
ಸಾಣೆಕಟ್ಟಾ ಉಪ್ಪಿನ ಉಗಮ:
ಸಾಣೆಕಟ್ಟೆಯ ಉಪ್ಪಿನ ಉದ್ಯಮಕ್ಕೆ ದೀರ್ಘ ಇತಿಹಾಸವಿದೆ. ಇದು ಪ್ರಾರಂಭವಾದದ್ದು ಸುಮಾರು 1720ರಲ್ಲಿ. ಅಂದಿನಿಂದ 1750ರವರೆಗೂ ಸುಮಾರು 50 ಎಕರೆ ಪ್ರದೇಶದಲ್ಲಿ ಮಾತ್ರ ಈ ಉದ್ಯಮ ನಡೆಯುತ್ತಿತ್ತು. 1975ರಲ್ಲಿ ಸಮುದ್ರದ ಹಿನ್ನೀರು ಅಘನಾಶಿನಿ ಅಳಿವೆಯ ಮೂಲಕ ಒಳನುಗ್ಗುವ ಕೊಲ್ಲಿಗೆ ಒಂದು ಒಡ್ಡು ಕಟ್ಟಲಾಯಿತು. ಆ ಒಡ್ಡು ಗೋಕರ್ಣ ಮತ್ತು ತೊರ್ಕೆಯ ಗುಡ್ಡಗಳನ್ನು ಜೋಡಿಸಿತು.
ಆ ಕಾಲಕ್ಕೆ ಉಪ್ಪಿನ ಘಟಕಗಳ ಮಾಲೀಕರು ಊರಿನ ಸಾನು ನಾಯ್ಕ ಎಂಬುವವರ ನೇತೃತ್ವ ಮತ್ತು ಮೇಲ್ವಿಚಾರಣೆಯಲ್ಲಿ ಈ ಒಡ್ಡನ್ನು ಕಟ್ಟಿದರು. ಸಾನು ನಾಯ್ಕ ಅವರು ಕಟ್ಟಿದ ಕಟ್ಟಿನಿಂದಾಗಿ ಊರು ಸಾಣೆಕಟ್ಟೆಯಾಗಿ ಜನಜನಿತವಾಯಿತು. ಒಡ್ಡು ಕಟ್ಟಿದ್ದರಿಂದ ಸುಮಾರು 400 ಎಕರೆಯಷ್ಟು ಪ್ರದೇಶ ಉಪ್ಪು ತಯಾರಿಕೆಗೆ ಲಭ್ಯವಾಯಿತು.
ಒಬ್ಬ ಹಳ್ಳಿಯ ಅವಿದ್ಯಾವಂತ ಯುವಕನ ತಾಂತ್ರಿಕ ಕೌಶಲ ಮತ್ತು ಕನಸು ಇಂದಿನ ಉಪ್ಪಿನ ಉದ್ಯಮ ಇಷ್ಟೊಂದು ರೀತಿಯಲ್ಲಿ ಪ್ರಗತಿ ಹೊಂದಲು ಕಾರಣವಾಯಿತು
***
ಸಾಣೆಕಟ್ಟೆ ಉಪ್ಪಿನ ವಿಶೇಷತೆಯನ್ನು ದೇಶ ಮಟ್ಟದಲ್ಲಿ ಪ್ರಚಾರವಾಗುವಂತೆ ಮಾಡಲು ಪ್ರಧಾನ ಮಂತ್ರಿಯ ‘ಮನ್ ಕಿ ಬಾತ್’ನಲ್ಲಿ ಇದರ ಬಗ್ಗೆ ಪ್ರಸ್ತುತ ಪಡಿಸಲು ಪ್ರಯತ್ನಿಸಲಾಗುವುದು.
– ಅನಂತ ಹೆಗಡೆ ಅಶೀಸರ, ರಾಜ್ಯ ಜೀವ ವೈವಿಧ್ಯ ಮಂಡಳಿ ಅಧ್ಯಕ್ಷ.
***
ಸಾಣೆಕಟ್ಟಾ ನೈಸರ್ಗಿಕ ಉಪ್ಪನ್ನು ಪಾರಂಪರಿಕ ಸ್ಥಾನಮಾನದಿಂದ ಮಾತ್ರ ಉಳಿಸಬಹುದು. ಕಾನೂನಿನಲ್ಲಿರುವ ಹಲವು ಅಂಶಗಳು ಅದಕ್ಕೆ ತೊಡಕು ಉಂಟುಮಾಡುತ್ತಿವೆ.
– ಅರುಣ ನಾಡಕರ್ಣಿ, ನಾಗರಬೈಲ್ ಉಪ್ಪಿನ ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ.
ಉಪ್ಪು ತಯಾರಿಕೆ: ಅಂಕಿ ಅಂಶ
1952: ಸಂಘದ ನೋಂದಣಿಯಾದ ವರ್ಷ
350:ಸಂಘದಲ್ಲಿರುವ ಸದಸ್ಯರು
500:ಎಕರೆಯಲ್ಲಿ ಉಪ್ಪಿನ ಸಾಗುವಳಿ
300:ಅವಲಂಬಿತ ಕುಟುಂಬಗಳು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.