ADVERTISEMENT

ಅರ್ಜುನ್‌ ಸರ್ಜಾ ವಿರುದ್ಧ ಆರೋಪ: ’ಶ್ರುತಿ’ ಬಿಡಿಸಿಟ್ಟರೇ ’ಸಂಗೀತಾ’ ಒಗಟು?

​ಪ್ರಜಾವಾಣಿ ವಾರ್ತೆ
Published 27 ಅಕ್ಟೋಬರ್ 2018, 14:26 IST
Last Updated 27 ಅಕ್ಟೋಬರ್ 2018, 14:26 IST
   

ಬೆಂಗಳೂರು: ಪೊಲೀಸರಿಗೆ ನೀಡಿರುವ ದೂರಿನಲ್ಲಿ ನಟಿ ಶ್ರುತಿ ಹರಿಹರನ್‌, ಅರ್ಜುನ್‌ ಸರ್ಜಾ ವಿರುದ್ಧ ಲೈಂಗಿಕ ಕಿರುಕುಳದ ಆರೋಪವರಿಸಿ ಘಟನೆ ಸಹಿತ ಎಳೆಎಳೆಯಾಗಿ ವಿವರ ಬಿಡಿಸಿಟ್ಟಿದ್ದಾರೆ. ಶ್ರುತಿ ಮೀಟೂ ಸ್ಫೋಟಕ್ಕೂ ಮುನ್ನ ಒಗಟಾಗಿಯೇ ಕರಾಳ ಕಥೆಗಳನ್ನು ತೆರೆದಿಟ್ಟವರು ನಟಿ ಸಂಗೀತಾ ಭಟ್‌. ’ಅವರ ಒಗಟಿನ ಕಥೆಗಳಲ್ಲಿ ಅಡಗಿರುವವರಲ್ಲಿ ಸರ್ಜಾ ಕೂಡು ಒಬ್ಬರು’ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ವಿಶ್ಲೇಷಿಸಲಾಗುತ್ತಿದೆ.

ವಿಸ್ಮಯ ಚಿತ್ರದ ಚಿತ್ರೀಕರಣದ ಸಮಯದಲ್ಲಿ ತನಗಾದ ಅನುಭವಗಳನ್ನು ಶ್ರುತಿ ಬಹಿರಂಗಪಡಿಸಿ, ಅರ್ಜುನ್ ಸರ್ಜಾ ವಿರುದ್ಧ ನೇರ ಆರೋಪ ಮಾಡಿದ್ದಾರೆ. ಆದರೆ, ಸಂಗೀತಾ ಭಟ್‌ ಅಕ್ಟೋಬರ್‌ 14ರಂದು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡ ಕರಾಳ ಕಥೆಗಳಲ್ಲಿ ಯಾರೊಬ್ಬರ ಹೆಸರನ್ನೂ ಪ್ರಸ್ತಾಪಿಸದೆಯೇ ಘಟನೆ ಮತ್ತು ವರ್ಷವನ್ನಷ್ಟೇ ಪ್ರಸ್ತಾಪಿಸಿ ಎದುರಿಸಿದ ಕಷ್ಟಗಳನ್ನು ವಿವರಿಸಿದ್ದರು. ಆ ವಿವರದಲ್ಲಿ ಹೆಸರು ಗಳಿಸಿರುವ ನಟನೊಂದಿಗೆ ಸೆಟ್ಟೇರಿದ ಸಿನಿಮಾ, ಎಲ್ಲೆ ಮೀರಿ ಆಡಿದ ನಟನ ಮಾತುಗಳು, ಅರ್ಧಕ್ಕೇ ನಿಂತು ಹೋದ ರಿಮೇಕ್‌ ಚಿತ್ರ, ಪಲ್ಲಂಗಕ್ಕೆ ಕರೆದ ಅದೇ ನಟನ ಕುಟುಂಬದ ಖ್ಯಾತ ನಟ!

ಈ ಎಲ್ಲ ವಿವರಗಳನ್ನು ಗಮನಿಸಿರುವ ಸಿನಿಮಾ ಪ್ರಿಯರು, '2017ರಲ್ಲಿ ಸಂಗೀತಾ ಭಟ್‌ ಆಯ್ಕೆಯಾಗಿದ್ದ ತೆಲುಗು ಸಿನಿಮಾದ ರಿಮೇಕ್‌ನಲ್ಲಿ ಪ್ರಮುಖ ಪಾತ್ರದಲ್ಲಿದ್ದ ನಟ ಚಿರಂಜೀವಿ ಸರ್ಜಾ. ಅದು ತೆಲುಗಿನ ಕ್ಷಣಂ ಚಿತ್ರದ ರಿಮೇಕ್‌. ಹೆಸರಿಡ ಆ ಚಿತ್ರವನ್ನು ಕೆ.ಎಂ.ಚೈತನ್ಯ ನಿರ್ದೇಶಿಸುತ್ತಿದ್ದರು. ಅದೇ ಚಿತ್ರಕ್ಕೆ ಪ್ರಾರಂಭದಲ್ಲಿ ಸಂಗೀತಾ ಭಟ್‌ ಜತೆಗೆ ಶ್ರುತಿ ಹರಿಹರನ್‌ ಕೂಡ ಮತ್ತೊಬ್ಬ ನಾಯಕಿಯಾಗಿ ಆಯ್ಕೆಯಾಗಿದ್ದರು.’– ಹಾಗಾದರೆ, ಸಂಗೀತಾ ಭಟ್‌ಗೆ ಕನ್ಯತ್ವದ ಪ್ರಶ್ನೆ ಮಾಡಿದ್ದ ನಟನೇಚಿರಂಜೀವಿ ಸರ್ಜಾ?

ADVERTISEMENT

ಸಂಗೀತಾ ಭಟ್‌ ಇದೇ ಘಟನೆಯೊಂದಿಗೆ ಮತ್ತೊಬ್ಬ ಪ್ರಮುಖ ನಟನ ಕುರಿತೂ ಹೇಳಿದ್ದರು ಹಾಗೂ ಇಂಥ ನಡವಳಿಕೆ ಕುಟುಂಬದಲ್ಲಿ ರಕ್ತಗತವಾಗಿದೆಯೇ ಎಂದು ಪ್ರಶ್ನೆ ಮಾಡಿದ್ದರು. ’ತಾನು ಅವರ ಸಿನಿಮಾಗಳನ್ನೇ ನೋಡುತ್ತ ಬೆಳೆದವಳು, ಹೊಟೇಲ್‌ ರೂಮಿಗೆ ಬಂದು ತನ್ನೊಂದಿಗೆ ಮಲಗು...’ ಎಂದು ಸಂಗೀತಾ ಭಟ್‌ ಹೇಳಿಕೊಂಡಿದ್ದು ಚತುರ್ಭಾಷಾ ನಟ, ನಿರ್ದೇಶಕ ಅರ್ಜುನ್‌ ಸರ್ಜಾ ಬಗ್ಗೆಯೇ?

ಈ ಎಲ್ಲದರ ವಿಶ್ಲೇಷಣೆಯನ್ನು ಫೇಸ್‌ಬುಕ್‌ನಲ್ಲಿ ಅನೇಕರು ಪ್ರಕಟಿಸಿಕೊಂಡಿದ್ದಾರೆ. ’ಸ್ಟಾರ್‌ ನಟನೊಂದಿಗೆ ಸಂಗೀತಾ ಭಟ್‌ ಸಹಿ ಮಾಡಿದ್ದ ಒಂದೇ ಒಂದು ಸಿನಿಮಾ ಇದುವೇ..’ ಹೀಗೆ ಅನೇಕ ಸಂಗತಿಗಳನ್ನು ಪ್ರಸ್ತಾಪಿಸಿ ಶ್ರುತಿ ಹರಿಹರನ್‌ ಲೈಂಗಿಕ ದೌರ್ಜನ್ಯದ ವಿರುದ್ಧ ದನಿಯೆತ್ತಿರುವುದಕ್ಕೆ ಬೆಂಬಲ ವ್ಯಕ್ತಪಡಿಸಿ, ‘ಬದಲಾವಣೆಯ ನಿರೀಕ್ಷೆಯಲ್ಲಿ’ ಎಂದು ಬರೆದುಕೊಂಡಿದ್ದಾರೆ.

ಈ ಹಿಂದೆ ಸಂಗೀತ ಭಟ್‌ ಮಾಡಿದ್ದ ಆರೋಪ

ಘಟನೆ 7: 2017–ತೆಲುಗು ಚಿತ್ರವೊಂದರ ರಿಮೇಕ್‌ ಕನ್ನಡದ ಸೆಟ್ಟೇರಿತ್ತು. ಆ ಚಿತ್ರ ಅರ್ಧಕ್ಕೆ ನಿಂತು ಒಂದೂವರೆ ವರ್ಷಗಳೇ ಕಳೆದಿವೆ. ಆ ಚಿತ್ರದ ಪ್ರಮುಖ ನಟ ಇನ್‌ಸ್ಟಾಗ್ರಾಂನಲ್ಲಿ ಮೆಸೇಜ್‌ ಮಾಡಿ ನಟಿಯ ಮೊಬೈಲ್‌ ಸಂಖ್ಯೆ ಪಡೆದು ಸಂದೇಶ ಮಾಡುತ್ತಿದ್ದ. ನಟಿಯೂ ಸಂದೇಶ ಮುಂದುವರಿಸಿದ್ದರು, ಒಮ್ಮೆ ಆತ ನಟಿಯ ಕನ್ಯತ್ವದ ಪ್ರಶ್ನೆ ಮಾಡಿದ್ದ. ಆಘಾತಕಾರಿ ಮಾತನ್ನು ಪ್ರಶ್ನಿಸಿದ್ದಕ್ಕೆ, ಆತ ’...ತನ್ನದನ್ನು ಕಳೆದುಕೊಳ್ಳಲು ಸಹಕರಿಸುವೆಯೇ’ ಎಂದು ಕೇಳಿದ್ದ. ತಾಳ್ಮೆಯಿಂದಲೇ ಪ್ರತಿಕ್ರಿಯಿಸಿದ್ದ ನಟಿ, ನಾನು ಆಗಲೇ ಮತ್ತೊಬ್ಬರೊಂದಿಗೆ ಸಂಬಂಧ ಹೊಂದಿರುವುದಾಗಿ ಹೇಳಿದ್ದರು.

ಕುಟುಂಬದಲ್ಲೇ ಹರಿಯುತ್ತಿದೆ..

ಆ ನಟನ ಕುಟುಂಬದವರೇ ಆದ ಮತ್ತೊಬ್ಬ ಪ್ರಸಿದ್ಧ ನಟ ಹಿಂದೆ ನಟಿಗೆ ಸಂದೇಶ ಕಳುಹಿಸುತ್ತಿದ್ದ. ಸೇಂಟ್‌ ಮಾರ್ಕ್ಸ್‌ ರಸ್ತೆಯಲ್ಲಿರುವ ಹೊಟೇಲ್‌ಗೆ ಬರುವಂತೆ, ತನ್ನೊಂದಿಗೆ ಮಲಗುವಂತೆ ಕೇಳುತ್ತಿದ್ದ. ಇದನ್ನು ನಟಿ ನಿರಾಕರಿಸಿದ್ದಕ್ಕೆ ಸಿಟ್ಟಾದ ಆತ,’ನಾನು ಎಷ್ಟು ಮಂದಿ ನಟಿಯರೊಂದಿಗೆ ಮಲಗಿರುವೆ ಗೊತ್ತಾ ನಿನಗೆ? ನಾನು ಒಂದು ಮಿಸ್ಡ್ ಕಾಲ್ ನೀಡಿದರೆ ಸಾಕು, ಅವರು ಓಡೋಡಿ ನನ್ನಲ್ಲಿಗೆ ಬರುತ್ತಾರೆ’. ಆ ನಟನ ಚಿತ್ರಗಳನ್ನೇ ನೋಡಿ ಬೆಳೆದಿದ್ದಳು ನಟಿ! ಪೂರ್ಣ ಓದು:ಸ್ಯಾಂಡಲ್‌ವುಡ್‌ನಲ್ಲಿ ಮಿಟೂ: ಚಿತ್ರರಂಗಕ್ಕೆ ಸಂಗೀತಾ ಭಟ್‌ ವಿದಾಯ!

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.