ADVERTISEMENT

ತಿಂಗಳಲ್ಲೇ ಶಾಲೆ ತಲುಪಲಿವೆ ‘ಸ್ಯಾನಿಟರಿ ನ್ಯಾಪ್‌ಕಿನ್‌’

ಸ್ಥಗಿತಗೊಂಡಿದ್ದ ’ಶುಚಿ’ ಯೋಜನೆಗೆ ಮತ್ತೆ ಚಾಲನೆ, ವಿಭಾಗವಾರು ಟೆಂಡರ್‌

​ಪ್ರಜಾವಾಣಿ ವಾರ್ತೆ
Published 15 ಆಗಸ್ಟ್ 2023, 19:53 IST
Last Updated 15 ಆಗಸ್ಟ್ 2023, 19:53 IST
ದಿನೇಶ್‌ ಗುಂಡೂರಾವ್‌
ದಿನೇಶ್‌ ಗುಂಡೂರಾವ್‌   

-ಚಂದ್ರಹಾಸ ಹಿರೇಮಳಲಿ

ಬೆಂಗಳೂರು: ರಾಜ್ಯದ ಸರ್ಕಾರಿ, ಅನುದಾನಿತ ಶಾಲೆಗಳ 17.99 ಲಕ್ಷ ವಿದ್ಯಾರ್ಥಿನಿಯರಿಗೆ ಮುಂದಿನ ತಿಂಗಳು (ಸೆಪ್ಟೆಂಬರ್) ಉಚಿತ ಸ್ಯಾನಿಟರಿ ನ್ಯಾಪ್‌ಕಿನ್‌ ವಿತರಣೆಯಾಗಲಿದೆ.

ಸರ್ಕಾರಿ, ಅನುದಾನಿತ ಮತ್ತು ಸರ್ಕಾರಿ ವಸತಿ ಶಾಲಾ–ಕಾಲೇಜುಗಳ (ಪದವಿಪೂರ್ವ ಶಿಕ್ಷಣದವರೆಗಿನ) ಹದಿಹರೆಯದ ಹೆಣ್ಣುಮಕ್ಕಳಿಗೆ ಸ್ಯಾನಿಟರಿ ನ್ಯಾಪ್‌ಕಿನ್‌ ವಿತರಿಸುವುದು ‘ಶುಚಿ’ ಯೋಜನೆಯ ಉದ್ದೇಶ. ಸಾಮಾನ್ಯವಾಗಿ 10ರಿಂದ 19ರ ವಯೋಮಾನದ ವಿದ್ಯಾರ್ಥಿನಿಯರ ಸಂಖ್ಯೆಯ ಆಧಾರದಲ್ಲಿ ನ್ಯಾಪ್‌ಕಿನ್‌ಗಳನ್ನು ಪೂರೈಸಲಾಗುತ್ತದೆ. ಪ್ರತಿ ವಿದ್ಯಾರ್ಥಿನಿಯರಿಗೆ ತಿಂಗಳಿಗೆ ಒಂದು ಯೂನಿಟ್‌ನಂತೆ ಪ್ರತಿ ವರ್ಷ 11 ತಿಂಗಳು ಪೂರೈಸಲಾಗುತ್ತದೆ. ಒಂದು ಯೂನಿಟ್‌ನಲ್ಲಿ 10 ನ್ಯಾಪ್‌ಕಿನ್‌ಗಳಿರುತ್ತದೆ. ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ ಈಗಾಗಲೇ ಮೂರು ತಿಂಗಳು ವಿಳಂಬವಾಗಿರುವುದರಿಂದ 8 ತಿಂಗಳಿಗೆ 80 ನ್ಯಾಪ್‌ಕಿನ್‌ ನೀಡಲಾಗುತ್ತಿದೆ.

ADVERTISEMENT

2020–21ರ ನಂತರ ಸ್ಥಗಿತಗೊಂಡಿದ್ದ ’ಶುಚಿ’ ಯೋಜನೆಗೆ ಹೊಸ ಸರ್ಕಾರ ಮತ್ತೆ ಚಾಲನೆ ನೀಡಿದ್ದು, ನಿಂತು ಹೋಗಿದ್ದ ಟೆಂಡರ್‌ ಪ್ರಕ್ರಿಯೆಗಳನ್ನು ಪುನರಾರಂಭಿಸಿದೆ. ಆರೋಗ್ಯ ಇಲಾಖೆ ನಿರ್ವಹಿಸುವ ‘ಶುಚಿ’ ಯೋಜನೆ ಟೆಂಡರ್‌ ಪ್ರಕ್ರಿಯೆಗಳ ಗೊಂದಲಗಳೇ ಅಡ್ಡಿಯಾಗಿದ್ದವು. 2020–2022ರ ಅವಧಿಯಲ್ಲಿ ಮೂರು ಬಾರಿ ಟೆಂಡರ್ ಕರೆಯಲಾಗಿತ್ತು. ವಿವಿಧ ಕಾರಣ ನೀಡಿ ಮೂರು ಟೆಂಡರ್‌ಗಳನ್ನು ರದ್ದು ಮಾಡಲಾಗಿತ್ತು. ಅತಿ ಕಡಿಮೆ ದರ (ಪ್ರತಿಪ್ಯಾಡ್‌ಗೆ ₹2.55) ನಮೂದಿಸಿದ ಬಿಡ್ಡುದಾರರನ್ನೇ ಆಯ್ಕೆ ಮಾಡಿದ್ದರೂ, ಕಾರ್ಯಾದೇಶ ನೀಡದೆ ವಿಳಂಬ ಮಾಡಲಾಗಿತ್ತು. ಇದರಿಂದ ಶುಚಿ ಯೋಜನೆ ನನೆಗುದಿಗೆ ಬಿದ್ದಿತ್ತು.

ಟೆಂಡರ್ ಪ್ರಕ್ರಿಯೆಗಳಲ್ಲಿನ ರಾಜಕೀಯ, ಭ್ರಷ್ಟಾಚಾರ, ಅಧಿಕಾರಿಗಳ ವಿಳಂಬ ಧೋರಣೆ ನೀತಿ ತಪ್ಪಿಸಲು ಇದೇ ಮೊದಲ ಬಾರಿ ವಿಭಾಗವಾರು ಟೆಂಡರ್‌ಗಳಿಗೆ ಅವಕಾಶ ಕಲ್ಪಿಸಲಾಗಿದೆ. ಬೆಂಗಳೂರು, ಮೈಸೂರು, ಕಲಬುರಗಿ ಹಾಗೂ ಬೆಳಗಾವಿ ವಿಭಾಗಗಳಿಗೆ ಪ್ರತೇಕ ಟೆಂಡರ್‌ ಕರೆಯಲಾಗಿದೆ.

ಸ್ಥಗಿತಗೊಳಿಸಲಾಗಿದ್ದ ಈ ಯೋಜನೆಗೆ ಮರುಚಾಲನೆ ನೀಡಲು ಸರ್ಕಾರ ₹45.50 ಕೋಟಿ ನೀಡಿದೆ. ಕರ್ನಾಟಕ ರಾಜ್ಯ ವೈದ್ಯಕೀಯ ಸರಬರಾಜು ನಿಗಮ ಟೆಂಡರ್‌ ಪ್ರಕ್ರಿಯೆ ನಡೆಸುವ, ಶಾಲಾ-ಕಾಲೇಜು, ಹಾಸ್ಟೆಲ್‌ಗಳಿಗೆ ಸ್ಯಾನಿಟರಿ ನ್ಯಾಪ್‌ಕಿನ್‌ ಪೂರೈಸುವ ಹೊಣೆ ಹೊತ್ತಿದೆ. ಎರಡು, ಮೂರು ವಾರಗಳಲ್ಲಿ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಲಾಗುವುದು. ಸೆಪ್ಟೆಂಬರ್‌ನಲ್ಲಿ ಕಿಟ್‌ಗಳು ಎಲ್ಲ ಸರ್ಕಾರಿ, ಅನುದಾನಿತ ಶಾಲೆಗಳು, ಪದವಿಪೂರ್ವ ಕಾಲೇಜುಗಳು ಹಾಗೂ ಹಾಸ್ಟೆಲ್‌ಗಳನ್ನು ತಲುಪಲಿವೆ ಎನ್ನುತ್ತಾರೆ ನಿಗಮದ ವ್ಯವಸ್ಥಾಪಕ ನಿರ್ದೇಶಕ ಚಿದಾನಂದ ವಟಾರೆ.

ಜಿ.ಎಂ.ರೇಖಾ
‘ಶುಚಿ’ ಯೋಜನೆಯ ಸಮರ್ಪಕ ಅನುಷ್ಠಾನಕ್ಕೆ ಇದ್ದ ಅಡೆತಡೆಗಳನ್ನು ನಿವಾರಿಸಲಾಗಿದೆ. ಪ್ರಕ್ರಿಯೆ ಸರಳಗೊಳಿಸಲಾಗಿದೆ. ಸೆಪ್ಟೆಂಬರ್‌ನಲ್ಲಿ ಎಲ್ಲ ಬಾಲಕಿಯರಿಗೂ ನ್ಯಾಪ್‌ಕಿನ್‌ಗಳು ದೊರಕಲಿವೆ.
–ದಿನೇಶ್‌ ಗುಂಡೂರಾವ್ ಆರೋಗ್ಯ ಸಚಿವ.
ಶಾಲೆ-ಕಾಲೇಜುಗಳಷ್ಟೇ ಅಲ್ಲ ಮಕ್ಕಳ ಪಾಲನಾ ಸಂಸ್ಥೆಗಳೂ ಸೇರಿದಂತೆ ಸರ್ಕಾರದ ಅಧೀನದ ಬಾಲಕಿಯರ ಎಲ್ಲ ವಸತಿನಿಲಯಗಳಿಗೂ ಯೋಜನೆಯನ್ನು ವಿಸ್ತರಿಸಬೇಕು. ಬಡ ಮಹಿಳೆಯರಿಗೂ ಉಚಿತವಾಗಿ ಪೂರೈಸಬೇಕು.
–ಜಿ.ಎಂ. ರೇಖಾ ಅಧ್ಯಕ್ಷೆ ಮಕ್ಕಳ ಕಲ್ಯಾಣ ಸಮಿತಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.