ಬೆಂಗಳೂರು: ಶಾಲಾ ಸ್ವಚ್ಛತೆ, ಕುಡಿಯುವ ನೀರಿಗೆ ನೀಡುವ ಮೊತ್ತವನ್ನು ಪ್ರಸಕ್ತ ಶೈಕ್ಷಣಿಕ ಸಾಲಿನಿಂದ ಮೂರುಪಟ್ಟು ಹೆಚ್ಚಿಸಲಾಗಿದ್ದರೂ ಸಮಯಕ್ಕೆ ಸರಿಯಾಗಿ ಹಣ ದೊರೆಯದೇ, ಶಾಲೆಗಳಲ್ಲಿ ಶೌಚಾಲಯ ಸ್ವಚ್ಛತೆಗೆ ಪರದಾಡುವಂತಾಗಿದೆ.
2022–23ನೇ ಸಾಲಿನವರೆಗೂ ಪ್ರತಿ ಶಾಲೆಗೆ ಕನಿಷ್ಠ ₹6,350ರಿಂದ ಗರಿಷ್ಠ ₹9 ಸಾವಿರ ನೀಡಲಾಗುತ್ತಿತ್ತು. ಇದರಲ್ಲೇ ಕುಡಿಯುವ ನೀರು ಹಾಗೂ ಶೌಚಾಲಯಗಳ ಸ್ವಚ್ಛತಾ ಕಾರ್ಯ ಮಾಡಬೇಕಿತ್ತು. 2023–24ನೇ ಬಜೆಟ್‌ನಲ್ಲೇ ಮೂರುಪಟ್ಟು ಅನುದಾನ ಹೆಚ್ಚಿಸಲಾಗಿದೆ. ಪ್ರತಿ ಶಾಲೆಗೆ ₹20 ಸಾವಿರದಿಂದ ₹45 ಸಾವಿರ ನಿಗದಿ ಮಾಡಲಾಗಿದೆ.
‘ಪ್ರಸಕ್ತ ಬಜೆಟ್‌ನಿಂದ ಶಾಲಾ ಸ್ವಚ್ಛತೆ, ಕುಡಿಯುವ ನೀರಿಗೆ ನೀಡುವ ಮೊತ್ತವನ್ನು ಮೂರು ಪಟ್ಟು ಹೆಚ್ಚಳ ಮಾಡಲಾಗಿದೆ. ಸರ್ಕಾರ ಈಗ 1ರಿಂದ 50 ವಿದ್ಯಾರ್ಥಿಗಳಿಗೆ ₹20 ಸಾವಿರ, 500ಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದರೆ ₹45 ಸಾವಿರ ನಿಗದಿ ಮಾಡಿದೆ. ಈಗಾಗಲೇ ಎರಡು ಕಂತುಗಳಲ್ಲಿ ಹಣ ನೀಡಲಾಗಿದೆ. ಉಳಿದ ಹಣವನ್ನು ಮಾರ್ಚ್ ಒಳಗೆ ನೀಡಲಾಗುವುದು. ಹೆಚ್ಚಳದ ಸೌಲಭ್ಯ ಬಳಸಿಕೊಂಡು ಸ್ವಚ್ಛತೆಗೆ ಗಮನ ಹರಿಸಬೇಕು’ ಎನ್ನುತ್ತಾರೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಆಯುಕ್ತೆ ಬಿ.ಬಿ.ಕಾವೇರಿ.
‘ಇದುವರೆಗೂ ಕಡಿಮೆ ಮೊತ್ತ ಸಿಗುತ್ತಿದ್ದ ಕಾರಣ ಶೌಚಾಲಯ ಸ್ವಚ್ಛತೆಗೆ ಕೆಲಸಗಾರರು ಬರುತ್ತಿರಲಿಲ್ಲ. ಹಾಗಾಗಿ, ಬಹುತೇಕ ಶಾಲೆಗಳಲ್ಲಿ ಶಿಕ್ಷಕರೇ ನಿರ್ವಹಿಸುತ್ತಿದ್ದೆವು. ಗ್ರಾಮೀಣ ಪ್ರದೇಶದಲ್ಲಿ ಹೇಗೋ ಅನುಸರಿಸಿಕೊಂಡು ನಿರ್ವಹಣೆ ಮಾಡಬಹುದು. ಆದರೆ, ಬೆಂಗಳೂರಿನಂತಹ ನಗರದಲ್ಲಿ ಸ್ವಚ್ಛತಾ ಕಾರ್ಯಕ್ಕೆ ಹೆಚ್ಚಿನ ಹಣ ಬೇಕಾಗುತ್ತದೆ. ಹೆಚ್ಚಳ ಮಾಡಿದ ಹಣವನ್ನು ಶೈಕ್ಷಣಿಕ ವರ್ಷದ ಆರಂಭದಲ್ಲೇ ಬಿಡುಗಡೆ ಮಾಡಬೇಕು. ನಗರ ಪ್ರದೇಶಗಳಿಗೆ ಸ್ವಲ್ಪ ಹೆಚ್ಚು ಮಾಡಿದರೆ ಅನುಕೂಲವಾಗಲಿದೆ ಎನ್ನುತ್ತಾರೆ’ ಬೆಂಗಳೂರು ದಕ್ಷಿಣ ಜಿಲ್ಲೆಯ ಶಾಲೆಯೊಂದರ ಮುಖ್ಯ ಶಿಕ್ಷಕ.
ಹಣ ಉಳಿಸಲಿದೆ ಉಚಿತ ನೀರು:
‘ನೀರು ಹಾಗೂ ವಿದ್ಯುತ್ ಉಚಿತ ಆದೇಶ ಹೊರಡಿಸಿರುವುದರಿಂದ ಶಾಲೆಗಳಿಗೆ ಹೊರೆ ಕಡಿಮೆಯಾಗಲಿದೆ. ಈಗ ನೀಡುತ್ತಿರುವ ಹಣವು ನೀರು ಹಾಗೂ ಸ್ವಚ್ಛತೆಗೆ ಬಳಕೆಯಾಗುತ್ತಿತ್ತು. ಅದರಲ್ಲಿ ದೊಡ್ಡ ಪಾಲು ಶುದ್ಧ ನೀರಿಗೆ ಖರ್ಚಾಗುತ್ತಿತ್ತು. ಈಗ ಆ ಹಣ ಉಳಿಯುವುದರಿಂದ ಶೌಚಾಲಯಗಳ ಸ್ವಚ್ಛತೆಗೆ ಬಳಸಿಕೊಳ್ಳಬಹುದು’ ಎನ್ನುತ್ತಾರೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯೊಂದರ ಶಿಕ್ಷಕಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.