ಬೆಳಗಾವಿ: ‘ಸಂತೋಷ್ ಪಾಟೀಲ ಹಾಗೂ ಶಾಸಕ ಕೆ.ಎಸ್.ಈಶ್ವರಪ್ಪ ಅವರ ಸಹವರ್ತಿಗಳ ಮೊಬೈಲ್ ಸಂಭಾಷಣೆಯ ದಾಖಲೆಗಳನ್ನು ಪಡೆದು, ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಸಲ್ಲಿಸುತ್ತೇವೆ. ನ್ಯಾಯ ಸಿಗುವವರೆಗೆ ಹೋರಾಟ ಮುಂದುವರಿಸುತ್ತೇವೆ’ ಎಂದು ಸಂತೋಷ್ ಅವರ ಹಿರಿಯ ಸಹೋದರ ಪ್ರಶಾಂತ ಪಾಟೀಲ ತಿಳಿಸಿದರು.
ಗುತ್ತಿಗೆದಾರ ಸಂತೋಷ್ ಪಾಟೀಲ ಸಾವಿನ ಪ್ರಕರಣದಲ್ಲಿ ಪ್ರಮುಖ ಆರೋಪ ಹೊತ್ತಿದ್ದ ಶಾಸಕ ಕೆ.ಎಸ್.ಈಶ್ವರಪ್ಪ ಅವರಿಗೆ ಕ್ಲೀನ್‌ಚಿಟ್ ನೀಡಿದ ಹಿನ್ನೆಲೆಯಲ್ಲಿ, ಅವರು ಗುರುವಾರ ಮಾಧ್ಯಮಗಳ ಮುಂದೆ ಹೇಳಿಕೆ ನೀಡಿದರು.
‘ಆರೋಪಿ ವಿರುದ್ಧ ‘ಬಿ’ ರಿಪೋರ್ಟ್ ಹಾಕುವ ಮುನ್ನ ತನಿಖಾಧಿಕಾರಿಗಳು ದೂರುದಾರರಿಗೆ ಮಾಹಿತಿ ನೀಡಬೇಕು. ಆದರೆ, ನಮಗೆ ಮಾಹಿತಿಯನ್ನೇ ನೀಡದೆ ‘ಬಿ’ ರಿಪೋರ್ಟ್ ಹಾಕಲು ಹೇಗೆ ಸಾಧ್ಯ? ಇದು ಯಾವ ರೀತಿಯ ತನಿಖೆ?’ ಎಂದೂ ಪ್ರಶ್ನಿಸಿದರು.
‘ಈ ಪ್ರಕರಣದಲ್ಲಿ ಈಶ್ವರಪ್ಪ ಅವರು ಎಷ್ಟು ಪ್ರಭಾವ ಬೀರಿದ್ದಾರೆ ಎಂಬುದು ಇಡೀ ರಾಜ್ಯಕ್ಕೆ ಗೊತ್ತಾಗಿದೆ. ನನ್ನ ತಮ್ಮನ ಮೊಬೈಲ್‌ನಲ್ಲಿ ಈಶ್ವರಪ್ಪ ಅವರ ಸಹಚರರು ಮಾತನಾಡಿದ ಎಲ್ಲ ಕಾಲ್ ರೆಕಾರ್ಡ್‌ಗಳಿವೆ. ಈ ಸಾವಿಗೆ ಈಶ್ವರಪ್ಪ ಅವರೇ ಕಾರಣ ಎಂದು ಸಾಬೀತು ಮಾಡಲು ಅವುಗಳಿಂದ ಸಾಧ್ಯವಿದೆ. ಆದರೆ, ಪೊಲೀಸರು ಈವರೆಗೂ ಆ ಮೊಬೈಲ್ ನಮಗೆ ಹಿಂದಿರುಗಿ ನೀಡಿಲ್ಲ’ ಎಂದರು.
‘ಸಂತೋಷ್ ಮರಣೋತ್ತರ ಪರೀಕ್ಷೆ, ವಿಧಿ ವಿಜ್ಞಾನ ಪ್ರಯೋಗಾಲಯದ ವರದಿಯೂ ಸೇರಿದಂತೆ ಈವರೆಗೆ ಯಾವುದೇ ಮಾಹಿತಿ ನಮಗೆ ಕೊಟ್ಟಿಲ್ಲ. ಹೆಜ್ಜೆಹೆಜ್ಜೆಗೂ ನಮ್ಮ ಕಣ್ಣು ತಪ್ಪಿಸಿ, ಈಶ್ವರಪ್ಪ ಅವರನ್ನು ಬಚಾವ್ ಮಾಡುವ ಕೆಲಸ ಮಾಡಿದ್ದಾರೆ’ ಎಂದೂ ಅವರು ದೂರಿದರು.
‘ಈಶ್ವರಪ್ಪ ಅವರ ಸಹಚರರು ಎಷ್ಟು ಕಿರುಕುಳ ನೀಡುತ್ತಿದ್ದಾರೆ ಎಂಬ ಬಗ್ಗೆ ಸಂತೋಷ ನನ್ನ ಮುಂದೆ ಸಾಕಷ್ಟು ಬಾರಿ ಹೇಳಿದ್ದ. ಅವನ ಮೊಬೈಲ್‌ನಲ್ಲಿ ಎಲ್ಲರ ಕರೆಗಳನ್ನೂ ರೆಕಾರ್ಡ್ ಮಾಡಿಕೊಂಡಿದ್ದ. ಆದರೆ, ಸಾಕ್ಷ್ಯ ಕೊರತೆ ಇದೆ ಎಂದು ಆರೋಪಿಗೆ ಕ್ಲೀನ್‌ಚಿಟ್ ನೀಡಿದ್ದು ಅಚ್ಚರಿ ತಂದಿದೆ’ ಎಂದರು.
‘ಪ್ರಕರಣ ತನಿಖಾ ಹಂತದಲ್ಲಿ ಇರುವಾಗಲೇ ಆರೋಪಿ ಬಾಯಿಗೆ ಬಂದಂತೆ ಮಾತನಾಡಿದರು. 15 ದಿನಗಳಲ್ಲೇ ಇದರಿಂದ ಹೊರಗೆ ಬರುತ್ತೇನೆ ಎಂದು ಹೇಳಿಕೊಂಡಿದ್ದರು. ತನಿಖೆ ಮುಗಿಯುವ ಮುನ್ನವೇ ಇವರಿಗೆ ‘ಕ್ಲೀನ್‌ಚಿಟ್’ ಕೊಡುವುದು ಅವರಿಗೆ ಖಚಿತವಾಗಿತ್ತು. ಹಾಗಾಗಿ, ಪ್ರಾಮಾನಿಕ ತನಿಖೆ ನಡೆಸಬೇಕು ಎಂದು ಕೋರಿ ಕುಟುಂಬದವರು ರಾಜ್ಯಪಾಲರಿಗೆ ಮೊರೆ ಇಟ್ಟಿದ್ದೇವು’ ಎಂದೂ ಹೇಳಿದರು.
‘ಕಾಲಾವಕಾಶ ಕೋರಿದರೂ ಕೊಡಲಿಲ್ಲ’
‘ತನಿಖಾಧಿಕಾರಿ ಮುಂದೆ ಹಾಜರಾಗುವಂತೆ 10 ದಿನಗಳ ಅವಧಿಯಲ್ಲಿ ಮೂರು ನೋಟಿಸ್ ನೀಡಿದ್ದಾರೆ. ಸಂತೋಷ ಸತ್ತು ಎರಡು ತಿಂಗಳವರೆಗೂ ಸುಮ್ಮನಿದ್ದವರು ಈಗ ಏಕಾಏಕಿ ಬನ್ನಿ ಎಂದರು. ನಿರಂತರ ಮಳೆ ಹಾಗೂ ಅನಾರೋಗ್ಯದ ಕಾರಣ ನಾವು ಜುಲೈ 23ರವರೆಗೆ ಕಾಲಾವಕಾಶ ಕೋರಿದ್ದೆವು. ಈಗ ಇದ್ದಕ್ಕಿದ್ದಂತೆ ‘ಬಿ’ ರಿಪೋರ್ಟ್ ಹಾಕಿದ್ದಾರೆ. ಇದನ್ನೂ ಕೋರ್ಟಿನಲ್ಲಿ ಪ್ರಶ್ನೆ ಮಾಡುತ್ತೇವೆ’ ಎಂದು ಪ್ರಶಾಂತ ತಿಳಿಸಿದರು.
‘ಸಂತೋಷ ಪತ್ನಿ ರೇಣುಕಾ ಅವರಿಗೆ ಸರ್ಕಾರಿ ನೌಕರಿ ಕೊಡುತ್ತಾರೆ ಎಂಬ ವಿಶ್ವಾಸವಿದೆ. ಅಲ್ಲದೇ, ಹಿಂಡಲಗಾ, ಸುನೋಳಿ ಗ್ರಾಮಗಳಲ್ಲಿ ನನ್ನ ತಣ್ಣ ಮಾಡಿದ ಕಾಮಗಾರಿಗಳು ಈಗಲೂ ಇವೆ. ಇದಕ್ಕೆ ಹಿಂಡಲಗಾ ಗ್ರಾಮ ಪಂಚಾಯಿತಿ ಅಧ್ಯಕ್ಷರೂ ಸಾಕ್ಷಿ ಇದ್ದಾರೆ. ಕೆ.ಎಸ್. ಈಶ್ವರಪ್ಪ ಅವರು ಆಗ ಸಚಿವರಾಗಿದ್ದ ಕಾರಣ, ಅವರ ಮೌಖಿಕ ಆದೇಶವನ್ನು ನಂಬಿ ಸಂತೋಷ್ ಕಾಮಗಾರಿ ಮಾಡಿಸಿದ್ದ. ಇಷ್ಟೆಲ್ಲ ದಾಖಲೆಗಳು ಇರುವ ಕಾರಣ ಕಾಮಗಾರಿಯ ಬಿಲ್ ಕೊಡಿಸಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಹಾಯ ಮಾಡುತ್ತಾರೆ ಎಂದು ನಂಬಿದ್ದೇವೆ’ ಎಂದೂ ಪ್ರಶಾಂತ ಪ್ರತಿಕ್ರಿಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.