ಬೆಂಗಳೂರು: ಅತ್ಯಾಚಾರ, ಹಲ್ಲೆ ಹಾಗೂ ಕೊಲೆ ಬೆದರಿಕೆ ಪ್ರಕರಣದ ಆರೋಪಿ ಕೆ.ಎಸ್. ಮಂಜುನಾಥ್ ಅಲಿಯಾಸ್ ಸ್ಯಾಂಟ್ರೊ ರವಿ ಸಂಚಿನಲ್ಲಿ ಭಾಗಿಯಾಗಿ ಕರ್ತವ್ಯಲೋಪ ಎಸಗಿದ್ದ ಆರೋಪದಡಿ ಪೊಲೀಸ್ ಇನ್‌ಸ್ಪೆಕ್ಟರ್ ಪ್ರವೀಣ್ ಅವರನ್ನು ಸೇವೆಯಿಂದ ಅಮಾನತು ಮಾಡಲಾಗಿದೆ.
ಪರಿಶಿಷ್ಟ ಸಮುದಾಯದ ಮಹಿಳೆ ಮೇಲೆ ಅತ್ಯಾಚಾರವೆಸಗಿ ಹಲ್ಲೆ ಮಾಡಿ ಜೀವ ಬೆದರಿಕೆಯೊಡ್ಡಿದ್ದ ಆರೋಪದಡಿ ಸ್ಯಾಂಟ್ರೊ ರವಿ ವಿರುದ್ಧ ಮೈಸೂರು ವಿಜಯನಗರ ಠಾಣೆಯಲ್ಲಿ ಜ. 2ರಂದು ಪ್ರಕರಣ ದಾಖಲಾಗಿತ್ತು.
‘ಸ್ಯಾಂಟ್ರೊ ರವಿ ಸಂಚಿನಲ್ಲಿ ಭಾಗಿಯಾಗಿದ್ದ ಪ್ರವೀಣ್, ನನ್ನ ಹಾಗೂ ನನ್ನ ಸಹೋದರಿ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಿ ಬಂಧಿಸಿದ್ದರು’ ಎಂದು ಸಂತ್ರಸ್ತೆ ದೂರಿದ್ದರು. ಈ ಬಗ್ಗೆ ತನಿಖೆ ನಡೆಸಿದ್ದ ಪಶ್ಚಿಮ ವಿಭಾಗದ ಡಿಸಿಪಿ ಲಕ್ಷ್ಮಣ ನಿಂಬರಗಿ, ವರದಿ ಸಿದ್ಧಪಡಿಸಿ ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಅವರಿಗೆ ಸಲ್ಲಿಸಿದ್ದರು.
ಅದೇ ವರದಿ ಆಧರಿಸಿ ಗುಪ್ತದಳದ ಇನ್‌ಸ್ಪೆಕ್ಟರ್ ಆಗಿರುವ ಪ್ರವೀಣ್ ಅವರನ್ನು ಅಮಾನತು ಮಾಡಿ ಪ್ರವೀಣ್ ಸೂದ್ ಮಂಗಳವಾರ ಆದೇಶ ಹೊರಡಿಸಿದ್ದಾರೆ.
‘2022ರ ನ. 23ರಂದು ಮೆಜೆಸ್ಟಿಕ್ ಖೋಡೆ ವೃತ್ತ ಸಮೀಪದ ರೈಲ್ವೆ ಕೆಳಸೇತುವೆ ಬಳಿ ಪ್ರಕಾಶ್, ಸ್ಯಾಂಟ್ರೊ ರವಿ ಸಹಚರ ಶೇಖ್ ಸಲ್ಲಾವುದ್ದೀನ್ ನಡುವೆ ಗಲಾಟೆ ಆಗಿತ್ತು. ರವಿ ಅಣತಿಯಂತೆ ಕೆಲಸ ಮಾಡಿದ್ದ ಪ್ರವೀಣ್, ಸುಳ್ಳು ಪುರಾವೆಗಳನ್ನು ಸೃಷ್ಟಿಸಿ ಅಮಾಯಕ ಸಂತ್ರಸ್ತೆ ಹಾಗೂ ಅವರ ಸಹೋದರಿ ವಿರುದ್ಧ ಪ್ರಕರಣ ದಾಖಲಿಸಿ ಬಂಧಿಸಿದ್ದರು’ ಎಂಬ ಮಾಹಿತಿ ತನಿಖಾ ವರದಿಯಲ್ಲಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.