ADVERTISEMENT

ರಾಜೀನಾಮೆ ಸಲ್ಲಿಸಿರುವೆ: ಮಹೇಶ್‌

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2019, 19:30 IST
Last Updated 16 ಅಕ್ಟೋಬರ್ 2019, 19:30 IST
ಸಾ.ರಾ.ಮಹೇಶ್‌
ಸಾ.ರಾ.ಮಹೇಶ್‌   

ಮೈಸೂರು: ‘ನನ್ನ ವಿರುದ್ಧ ಅಡಗೂರು ಎಚ್‌.ವಿಶ್ವನಾಥ್ ವೈಯಕ್ತಿಕವಾಗಿ ವಾಗ್ದಾಳಿ ನಡೆಸಿದ್ದಕ್ಕೆ ಮನನೊಂದು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿರುವೆ’ ಎಂದು ಜೆಡಿಎಸ್‌ ಶಾಸಕ ಸಾ.ರಾ.ಮಹೇಶ್ ತಿಳಿಸಿದರು.

ಸ್ಪೀಕರ್‌ ನನ್ನನ್ನು ಕರೆಸಿ ಸಮಾಧಾನಪಡಿಸಿದ್ದಾರೆ. ರಾಜೀನಾಮೆಯನ್ನು ಇನ್ನೂ ಹಿಂಪಡೆದಿಲ್ಲ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

‘ಯಾರಿಂದಲೂ ಹಣ ಪಡೆದಿಲ್ಲ, ಆಮಿಷಗಳಿಗೆ ಒಳಗಾಗಿಲ್ಲ ಎಂದು ಅನರ್ಹ ಶಾಸಕ ವಿಶ್ವನಾಥ್‌, ಚಾಮುಂಡೇಶ್ವರಿ ಎದುರು ಪ್ರಮಾಣ ಮಾಡಿದರೆ ಬೇಷರತ್ ಕ್ಷಮೆ ಯಾಚಿಸುವೆ’ ಎಂದು ಸವಾಲು ಹಾಕಿದರು.

ADVERTISEMENT

‘ಸರ್ಕಾರವನ್ನು ಕೆಡವಬಾರದು ಎಂದರೆ ಹಣ ಕೊಡಬೇಕು ಎಂದು ಎಚ್.ಡಿ‌.ಕುಮಾರಸ್ವಾಮಿ ಬಳಿ ಬೇಡಿಕೆ ಇಟ್ಟಿದ್ದನ್ನೂ ಬಹಿರಂಗಪಡಿಸುವೆ. ಪ್ರತಿ ತಿಂಗಳೂ ಕಂತಿನಲ್ಲಿ ಹಣ ನೀಡುವುದಾಗಿ ನಾನು ಭರವಸೆ ನೀಡಿದ್ದನ್ನೂ ತಿಳಿಸುವೆ. ಅದನ್ನು ವಿಶ್ವನಾಥ್ ಸುಳ್ಳು ಎಂದು ಆಣೆ ಮಾಡಲಿ’ ಎಂದು ಪಂಥಾಹ್ವಾನ ನೀಡಿದರು.

‘ರಿಯಲ್‌ ಎಸ್ಟೇಟ್‌ ಉದ್ಯಮ ಅಕ್ರಮವಾದರೆ ತಪ್ಪು. ಆದರೆ, ನನ್ನದು ಸಕ್ರಮ ಉದ್ಯಮ. ವಿಶ್ವನಾಥ್‌ ಅವರ ಪುತ್ರ, ಚಿತ್ರನಟ ಶ್ರೀನಗರ ಕಿಟ್ಟಿ ಜತೆ ಸೇರಿ ಇಲವಾಲ ಬಳಿ ಅಕ್ರಮವಾಗಿ ರಿಯಲ್‌ ಎಸ್ಟೇಟ್ ಉದ್ಯಮ ನಡೆಸುತ್ತಿದ್ದಾರೆ’ ಎಂದು ಆರೋಪಿಸಿದರು.

‘ತ್ಯಾಗಪತ್ರ ಇಂದು ವಾಪಸ್‌’

ಬೆಂಗಳೂರು: ‘ವಿಶ್ವನಾಥ್‌ ವಿಚಾರದಲ್ಲಿ ಬೇಸರಗೊಂಡು ಶಾಸಕಸಾ. ರಾ. ಮಹೇಶ್‌ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು ನಿಜ. ವಿಧಾನಸಭಾಧ್ಯಕ್ಷರೇ ಮನವೊಲಿಸಿದ ಕಾರಣ ಗುರುವಾರ ತಮ್ಮ ರಾಜೀನಾಮೆ ಹಿಂಪಡೆಯಲಿದ್ದಾರೆ’ ಎಂದು ಜೆಡಿಎಸ್‌ ವರಿಷ್ಠ ಎಚ್‌. ಡಿ. ದೇವೇಗೌಡ ಹೇಳಿದರು.

‘ನಾನುಈಗಷ್ಟೇ ಮಹೇಶ್‌ ಜತೆಗೆ ಮಾತನಾಡಿರುವೆ.ಸದ್ಯ ಸ್ಪೀಕರ್ ಅವರು ಬೇರೆ ಕೆಲಸದಲ್ಲಿ ಇದ್ದಾರೆ.ಅವರು ಬಂದ ನಂತರ ಗುರುವಾರವೇ ತಮ್ಮ ರಾಜೀನಾಮೆಯನ್ನು ವಾಪಸ್‌ ಪಡೆಯುತ್ತಾರೆ’ ಎಂದು ಬುಧವಾರ ಪಕ್ಷದ ಕಚೇರಿಯಲ್ಲಿ ಸುದ್ದಿಗಾರರಿಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.