ADVERTISEMENT

ಸರಳ ವಾಸ್ತು ಚಂದ್ರಶೇಖರ ಗುರೂಜಿ ಹತ್ಯೆ: ಆರೋಪಿಗೆ ಜಾಮೀನು ನೀಡಲು ಹೈಕೋರ್ಟ್‌ ನಕಾರ

ಸರಳ ವಾಸ್ತು ಖ್ಯಾತಿಯ ಚಂದ್ರಶೇಖರ ಅಂಗಡಿ ಗುರೂಜಿ ಕೊಲೆಯ ಆರೋಪಿ ಮಹಾಂತೇಶ ಶಿರೂರ್‌ಗೆ ಜಾಮೀನು ಮಂಜೂರು ಮಾಡಲು ಹೈಕೋರ್ಟ್‌ ನಿರಾಕರಿಸಿದೆ.

​ಪ್ರಜಾವಾಣಿ ವಾರ್ತೆ
Published 2 ಆಗಸ್ಟ್ 2024, 15:52 IST
Last Updated 2 ಆಗಸ್ಟ್ 2024, 15:52 IST
<div class="paragraphs"><p>ಚಂದ್ರಶೇಖರ ಗುರೂಜಿ</p></div>

ಚಂದ್ರಶೇಖರ ಗುರೂಜಿ

   

ಬೆಂಗಳೂರು: ಸರಳ ವಾಸ್ತು ಖ್ಯಾತಿಯ ಚಂದ್ರಶೇಖರ ಅಂಗಡಿ ಗುರೂಜಿ ಕೊಲೆಯ ಆರೋಪಿ ಮಹಾಂತೇಶ ಶಿರೂರ್‌ಗೆ ಜಾಮೀನು ಮಂಜೂರು ಮಾಡಲು ಹೈಕೋರ್ಟ್‌ ನಿರಾಕರಿಸಿದೆ.

ಈ ಸಂಬಂಧ ಕಲಘಟಗಿ ತಾಲ್ಲೂಕಿನ ದುಮ್ಮವಾಡದ ಆರೋಪಿ ಮಹಾಂತೇಶ ಶಿರೂರ್‌ ಸಲ್ಲಿಸಿದ್ದ ಕ್ರಿಮಿನಲ್‌ ಅರ್ಜಿಯನ್ನು ಧಾರವಾಡ ಪೀಠದಲ್ಲಿನ ನ್ಯಾಯಮೂರ್ತಿ ಎಸ್‌.ರಾಚಯ್ಯ ಅವರಿದ್ದ ಏಕಸದಸ್ಯ ನ್ಯಾಯಪೀಠ ವಜಾಗೊಳಿಸಿ ಆದೇಶಿಸಿದೆ.

ADVERTISEMENT

‘ಗುರೂಜಿ ಹತ್ಯೆ ಪೂರ್ವಯೋಜಿತ ಕೃತ್ಯ ಎನ್ನುವುದರಲ್ಲಿ ಯಾವುದೇ ಸಂದೇಹವಿಲ್ಲ. ಅರ್ಜಿದಾರ ಹಳೆಯ ದ್ವೇಷದಿಂದ ಗುರೂಜಿಯನ್ನು ಹತ್ಯೆ ಮಾಡಿದ್ದಾರೆ. ಹತ್ಯೆಯ ರೀತಿಯನ್ನು ಗಮನಿಸಿದರೆ ಗುರೂಜಿ ಮೇಲೆ ಆರೋಪಿಗೆ ಎಷ್ಟರಮಟ್ಟಿನ ದ್ವೇಷ ಇತ್ತೆಂಬುದು ಗೊತ್ತಾಗುತ್ತದೆ. ಚಾಕುವಿನಿಂದ 56 ಬಾರಿ ಇರಿದು ಗಾಯಗೊಳಿಸಿ ಕೊಲೆ ಮಾಡಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಅರ್ಜಿದಾರನ ಕೃತ್ಯ ಸಮಾಜದಲ್ಲಿ ದೊಡ್ಡ ಪ್ರಮಾಣದ ಭಯವನ್ನು ಸೃಷ್ಟಿಸಿದೆ’ ಎಂದು ನ್ಯಾಯಪೀಠ ಜಾಮೀನು ವಜಾಗೊಳಿಸಿರುವುದಕ್ಕೆ ಕಾರಣ ನೀಡಿದೆ.

ಪ್ರಕರಣದ ವಿಶೇಷ ಪ್ರಾಸಿಕ್ಯೂಟರ್ ಎಲ್‌.ಎಸ್‌.ಸುಳ್ಳದ ಅವರು, ‘ಅರ್ಜಿದಾರ, ಗುರೂಜಿ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವುದು ಸಿಸಿಟಿವಿ ದೃಶ್ಯಗಳಿಂದ ದೃಢಪಡುತ್ತದೆ. ಗುರೂಜಿ ಅವರ ಪತ್ನಿ ಸಿಸಿಟಿವಿ ದೃಶ್ಯಗಳನ್ನು ವೀಕ್ಷಿಸಿ, ಅರ್ಜಿದಾರನ ಗುರುತು ಪತ್ತೆಹಚ್ಚಿದ್ದಾರೆ. ಅರ್ಜಿದಾರನ ಕೃತ್ಯಕ್ಕೆ ಹಲವು ಪ್ರತ್ಯಕ್ಷದರ್ಶಿಗಳಿದ್ದಾರೆ. ಗುರೂಜಿಯ ದೇಹದಲ್ಲಿ 56 ಗಾಯಗಳಿದ್ದವು. ಇದು ಅರ್ಜಿದಾರ ಎಸಗಿರುವ ಬರ್ಬರತೆಯನ್ನು ತೋರಿಸುತ್ತದೆ. ಒಂದು ವೇಳೆ ನ್ಯಾಯಾಲಯ ಅರ್ಜಿದಾರನಿಗೆ ಜಾಮೀನು ಮಂಜೂರು ಮಾಡಿದರೆ ಮೃತರ ಕುಟುಂಬದ ಸದಸ್ಯರಿಗೆ ಮತ್ತು ಸಾಕ್ಷಿಗಳ ಜೀವಕ್ಕೆ ಅಪಾಯ ಒದಗಲಿದೆ. ಈ ಹಿನ್ನೆಲೆಯಲ್ಲಿ ಆರೋಪಿಗೆ ಜಾಮೀನು ನೀಡಬಾರದು’ ಎಂದು ಕೋರಿದ್ದರು.

2022ರ ಜುಲೈ 5ರಂದು ಹುಬ್ಬಳ್ಳಿಯ ಖಾಸಗಿ ಹೋಟೆಲ್ ಒಂದರಲ್ಲಿ ಚಂದ್ರಶೇಖರ ಗುರೂಜಿ ಹತ್ಯೆಯಾಗಿತ್ತು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.