ಬೆಳಗಾವಿ: ‘ಹಿಂದೂ’ ಎಂಬ ಪದಕ್ಕೆ ಕೆಟ್ಟ ಅರ್ಥಗಳಿವೆ ಎಂದು ಹೇಳುವ ಮೂಲಕ ದೇಶವ್ಯಾಪಿ ವಿರೋಧಕ್ಕೆ ಕಾರಣವಾಗಿದ್ದ ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ ಜಾರಕಿಹೊಳಿ ಅವರ ಸುತ್ತ ಈಗ ಮತ್ತೊಂದು ವಿವಾದ ಸುತ್ತಿಕೊಂಡಿದೆ.
ಧರ್ಮವೀರ ಸಂಭಾಜಿ ಮಹಾರಾಜರ ಕುರಿತು ಸತೀಶ ಅವರು ಮಾಡಿದ ಭಾಷಣವನ್ನು ಖಂಡಿಸಿ, ಮಹಾರಾಷ್ಟ್ರದ ಉಪ ಮುಖ್ಯಮಂತ್ರಿ ದೇವೇಂದ್ರ ಫಡನವೀಸ್ ಅವರು ಟ್ವೀಟ್ ಮಾಡಿದ್ದಾರೆ. ಜತೆಗೆ, ಸತೀಶ ಜಾರಕಿಹೊಳಿ ಅವರ ಭಾಷಣದ ತುಣುಕಿನ ವಿಡಿಯೊ ಕೂಡ ಅವರು ಹಂಚಿಕೊಂಡಿದ್ದಾರೆ.
ನವೆಂಬರ್ 6ರಂದು ನಿಪ್ಪಾಣಿಯಲ್ಲಿ ಮಾನವ ಬಂಧುತ್ವ ವೇದಿಕೆಯಲ್ಲಿ ಸತೀಶ ಜಾರಕಿಹೊಳಿ ಮಾಡಿದ ಭಾಷಣದ ಮುಂದುವರಿದ ತುಣುಕುಗಳೇ ಈಗ ಮತ್ತೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.
ಭಾಷಣದಲ್ಲೇನಿದೆ?:
'ಸಂಭಾಜಿ ಮಹಾರಾಜರನ್ನು ಬ್ರಿಟಿಷರು ಹಿಡಿದು ಹತ್ಯೆ ಮಾಡಿದರು. ಏಕೆ ಹತ್ಯೆ ಮಾಡಿದರು? ಶಿವಾಜಿ ಮಹಾರಾಜರ ಊಟದಲ್ಲಿ ವಿಷ ಹಾಕಲಾಗಿತ್ತು. ಸಂಭಾಜಿ ಅವರನ್ನು ಹಿಡಿದು ಶಿಕ್ಷೆ ಕೊಟ್ಟಿದ್ದರು. ಈ ಕೋಪದಿಂದ ಅವರನ್ನು ಹಿಡಿದುಕೊಡಲಾಯಿತು. ಕೊನೆಗೆ ಅವರಿಗೆ ಧರ್ಮವೀರ ಸಂಭಾಜಿ ಎಂಬ ಹೆಸರಿಟ್ಟು ಇತಿಹಾಸ ಬರೆದಿದ್ದಾರೆ. ಈ ದೇಶದ ಇತಿಹಾಸ ಬಹಳ ವಿಚಿತ್ರವಾಗಿದೆ. ಇಂಥ ಇತಿಹಾಸ ತಿಳಿಯಲು ಬಹಳ ಸಮಯ ಬೇಕು’ ಎಂದು ಸತೀಶ ಜಾರಕಿಹೊಳಿ ಹೇಳಿದ ವಿಡಿಯೊ ತುಣುಕು ಇದೆ.
ಇದನ್ನು ತಮ್ಮ ಟ್ವಿಟರ್‌ನಲ್ಲಿ ಹಾಕಿರುವ ದೇವೇಂದ್ರ ಫಡನವೀಸ್ ಅವರು, ರಾಹುಲ್ ಗಾಂಧಿ ಅವರನ್ನೇ ಪ್ರಶ್ನೆ ಮಾಡಿದ್ದಾರೆ.
ಟ್ವೀಟ್‌ನಲ್ಲಿ ಏನಿದೆ?: ‘ಮಿಸ್ಟರ್ ರಾಹುಲ್ ಗಾಂಧಿ, ಈ ರೀತಿಯ ‘ನಾನ್‌ಸೆನ್ಸ್’ ಹೇಳಿಕೆಯನ್ನು ನೀವು ಒಪ್ಪುತ್ತೀರಾ? ಕಾಂಗ್ರೆಸ್‌ನ ಶಾಸಕ ಒಬ್ಬರು ಈ ರೀತಿ ಮಹಾನ್ ನಾಯಕ ಸಂಭಾಜಿ ಮಹಾರಾಜರ ಬಗ್ಗೆ ಹೇಳುವುದನ್ನು ನೀವು ಒಪ್ಪುತ್ತೀರಾ? ಸಂಭಾಜಿ ಮಹಾರಾಜರ ಬಗ್ಗೆ ತಪ್ಪು ಮಾಹಿತಿ ನೀಡುವ, ದಾರಿ ತಪ್ಪಿಸುವ, ಅವಮಾನ ಮಾಡುವ ಹೇಳಿಕೆ ಇದು. ಇದು ನಿಮ್ಮ ಕಾಂಗ್ರೆಸ್ ಪಕ್ಷದ ಅಧಿಕೃತ ಹೇಳಿಕೆಯೇ? ಮಹಾರಾಷ್ಟ್ರ ಇದನ್ನು ಒಪ್ಪುವುದಿಲ್ಲ’ ಎಂದು ಫಡನವೀಸ್ ಪೋಸ್ಟ್ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.