ಅಥಣಿ (ಬೆಳಗಾವಿ ಜಿಲ್ಲೆ): ತಾಲ್ಲೂಕಿನ ನದಿಇಂಗಳಗಾಂವ ಗ್ರಾಮಕ್ಕೆ ಭಾನುವಾರ ಮತ ಯಾಚಿಸಲು ಬಂದ ಬಿಜೆಪಿ ಅಭ್ಯರ್ಥಿ ಮಹೇಶ ಕುಮಠಳ್ಳಿ ಹಾಗೂ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರನ್ನು ನೆರೆ ಸಂತ್ರಸ್ತರು ತರಾಟೆಗೆ ತೆಗೆದುಕೊಂಡರು.
‘ನೆರೆಯಿಂದಾಗಿ ಆಸ್ತಿಪಾಸ್ತಿ, ಬೆಳೆ ಎಲ್ಲವನ್ನೂ ಕಳೆದುಕೊಂಡಿದ್ದೇವೆ. ಸರ್ಕಾರದಿಂದ ಈವರೆಗೂ ಪರಿಹಾರ ಬಂದಿಲ್ಲ. ಗ್ರಾಮ ಪಂಚಾಯ್ತಿ ಅಧ್ಯಕ್ಷ ಕೂಡ ನಮ್ಮ ಕಷ್ಟ ಕೇಳಲು ಬಂದಿಲ್ಲ. ಚುನಾವಣೆ ಬಂದಾಗ 40–50 ಮಂದಿ ಬರುತ್ತಾರೆ. ಆದರೆ, ನಮಗೆ ಏನೂ ಸೌಲಭ್ಯಗಳು ಸಿಕ್ಕಿಲ್ಲ’ ಎಂದು ಗ್ರಾಮದ ಮಹಿಳೆಯರು ಆಕ್ರೋಶ ವ್ಯಕ್ತಪಡಿಸಿದರು. ಇದರಿಂದ ಉಪಮುಖ್ಯಮಂತ್ರಿ ಹಾಗೂ ಅಭ್ಯರ್ಥಿ ಮುಜುಗರ ಅನುಭವಿಸಬೇಕಾಯಿತು.
‘ನಮ್ಮ ಮನೆಗಳೆಲ್ಲಾ ಬಿದ್ದು ಹೋಗಿವೆ. ಬೆಳೆಗಳೆಲ್ಲಾ ಮುಳುಗಡೆಯಾದವು. ಜೀವನ ನಡೆಸುವುದೇ ಕಷ್ಟವಾಗಿದೆ. ಗ್ರಾಮ ಪಂಚಾಯ್ತಿಗೆ ಬೀಗ ಹಾಕಿ ಪ್ರತಿಭಟನೆ ನಡೆಸಿದರೂ ಪ್ರಯೋಜನವಾಗಿಲ್ಲ’ ಎಂದು ತಿಳಿಸಿದರು.
ಪ್ರತಿಕ್ರಿಯಿಸಿದ ಸವದಿ, ‘ಚುನಾವಣೆ ಮುಗಿಯುತ್ತಿದ್ದಂತೆಯೇ ಎಲ್ಲವನ್ನೂ ಪರಿಶೀಲಿಸಿ, ಪರಿಹಾರ ಕೊಡಿಸಲಾಗುವುದು. ಅಭಿವೃದ್ಧಿಗೂ ಕ್ರಮ ಕೈಗೊಳ್ಳಲಾಗುವುದು’ ಎಂದು ಭರವಸೆ ನೀಡಿ ತೆರಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.