ಬೆಳಗಾವಿ: ‘ಅಥಣಿ ಬಿಜೆಪಿಯಲ್ಲಿ ಯಾವುದೇ ಭಿನ್ನಮತ ಇಲ್ಲ. ಅಲ್ಲಿನ ಅಭ್ಯರ್ಥಿ ಮಹೇಶ ಕುಮಠಳ್ಳಿ ಅವರನ್ನು ಗೆಲ್ಲಿಸಿಕೊಂಡು ಬರುವುದಾಗಿ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಶಿವಯೋಗಿಗಳ ಮೇಲೆ (ಮುರುಘೇಂದ್ರ ಶಿವಯೋಗಿ ಸ್ವಾಮೀಜಿ) ಪ್ರಮಾಣ ಮಾಡಿ ಹೇಳಿದ್ದಾರೆ. ತಾವೇ ಜವಾಬ್ದಾರಿ ತೆಗೆದುಕೊಂಡಿರುವುದಾಗಿ ಸ್ಪಷ್ಟವಾಗಿ ಹೇಳಿದ್ದಾರೆ’ ಎಂದು ಬಿಜೆಪಿ ಮುಖಂಡ, ರಾಜ್ಯಸಭಾ ಸದಸ್ಯ ಪ್ರಭಾಕರ ಕೋರೆ ತಿಳಿಸಿದರು.
ಕಾಗವಾಡ ಕ್ಷೇತ್ರದಲ್ಲಿ ಅಭ್ಯರ್ಥಿ ಶ್ರೀಮಂತ ಪಾಟೀಲ ಪರ ಪ್ರಚಾರ ಮಾಡಿದ ಅವರು ಪತ್ರಕರ್ತರೊಂದಿಗೆ ಮಾತನಾಡಿದರು.‘ಗೋಕಾಕದಲ್ಲಿ ಏಕಮುಖ ಚುನಾವಣೆ ನಡೆಯುತ್ತಿದೆ. ಅಥಣಿ, ಕಾಗವಾಡದಲ್ಲೂ ಪಕ್ಷದ ಅಭ್ಯರ್ಥಿಗಳು ಗೆಲ್ಲುತ್ತಾರೆ. ಈ ನಿಟ್ಟಿನಲ್ಲಿ ನಮಗೆ ಈಗಾಗಲೇ ವರದಿ ಇದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು. ‘ದೊಡ್ಡ ಪಕ್ಷವಾದ ಬಿಜೆಪಿಯಲ್ಲಿ ಸಣ್ಣಪುಟ್ಟ ಭಿನ್ನಮತ ಇರುತ್ತದೆ. ಆದರೆ, ಗೆಲುವಿಗೆ ತೊಂದರೆಯಾಗುವುದಿಲ್ಲ’ ಎಂದರು.
‘ಜಾತಿ ಆಧಾರದ ಮೇಲೆ ಎಂದೂ ರಾಜಕಾರಣ ನಡೆಯುವುದಿಲ್ಲ’ ಎಂದು ಪ್ರತಿಕ್ರಿಯಿಸಿದರು.‘ಕಾಂಗ್ರೆಸ್‌ನ ಹಲವು ಶಾಸಕರು ಬಿಜೆಪಿಗೆ ಬರುವ ಹಾದಿಯಲ್ಲಿದ್ದಾರೆ. ಹಲವರು ಉತ್ಸಾಹದಿಂದ ಕಾಯುತ್ತಿದ್ದಾರೆ. ಇದನ್ನು ಆಧರಿಸಿಯೇ, 35 ಮಂದಿ ಕಾಂಗ್ರೆಸ್‌ನವರು ನನ್ನ ಸಂರ್ಪಕದಲ್ಲಿದ್ದಾರೆ ಎಂದು ರಮೇಶ ಜಾರಕಿಹೊಳಿ ಹೇಳಿರುವುದು. ಇಡೀ ದೇಶದಲ್ಲಿ ಬಿಜೆಪಿ ಪರವಾದ ವಾತಾವರಣವಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.